Advertisement

ಅಧಿಕಾರವೊಂದೇ ಬಿಜೆಪಿ ಗುರಿಯಲ್ಲ

04:25 PM May 25, 2022 | Team Udayavani |

ಚಿಕ್ಕಮಗಳೂರು: ಅಧಿಕಾರವೇ ನಮ್ಮ ಪರಮ ಗುರಿಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಅಧಿಕಾರಕ್ಕೆ ಬಂದವರು ಅಧಿಕಾರ ಚಲಾಯಿಸಬೇಕು ಎನ್ನುವ ಮನಸ್ಥಿತಿ ಹೊಂದಿದ್ದರು. ಬಿಜೆಪಿ ಸೇವೆ ಎಂದರೇ ಅದೊಂದು ಕ್ರಿಯೆ. ಸೇವೆ ಮೂಲಕ ಜನರ ವಿಶ್ವಾಸ ಗಳಿಸಬೇಕು ಎನ್ನುವುದು ಪಕ್ಷ ತಿಳಿಸಿಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮುರಡಪ್ಪ ತಿಳಿಸಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಗರ ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆ ಹಾಗೂ ನಗರಸಭೆ ನೂತನ ನಾಮಿನಿ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ಬಿಜೆಪಿ ನೀತಿ ಮತ್ತು ನಡವಳಿಕೆ ಆಧಾರದ ಮೇಲೆ ನಡೆಯುತ್ತಿರುವ ಏಕೈಕ ಪಕ್ಷ. 6 ದಶಕಗಳಿಂದ ಒಂದೇ ನೀತಿಯನ್ನು ಇಟ್ಟುಕೊಂಡಿದೆ. ರಾಮಮಂದಿರ ಕಟ್ಟಬೇಕು ಎನ್ನುವುದು ಬಿಜೆಪಿ ಧ್ಯೇಯವಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಸಣ್ಣ ಗಲಭೆ ಇಲ್ಲದೆ ಸಂವಿಧಾನಬದ್ಧವಾಗಿ ನ್ಯಾಯಾಲಯದ ಆದೇಶದಂತೆ ರಾಮಮಂದಿರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಮಾತು ಕೃತಿಗೂ ಅಂತರವಿಲ್ಲದೆ ನಡೆದುಕೊಳ್ಳುತ್ತಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿ. ನುಡಿದಂತೆ ನಡೆಯುತ್ತಿದ್ದಾರೆ. ಬದ್ಧತೆ ಇಟ್ಟುಕೊಂಡು ಶಿಸ್ತಿನಿಂದ ಕೆಲಸ ಮಾಡಿದವರಿಗೆ ಪಕ್ಷದಲ್ಲಿ ಹೆಚ್ಚಿನ ಮಾನ್ಯತೆ ಸಿಗುತ್ತದೆ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬುದ್ಧಿಜೀವಿಗಳು ಬುದ್ಧಿ ಭ್ರಮಣೆಯಾದವರ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾರಾಯಣಗುರು ಅವರ ವಿಚಾರವನ್ನು 7ನೇ ತರಗತಿಯಿಂದಲೇ ಪರಿಚಯಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಆದರೆ ಕಾಂಗ್ರೆಸಿಗರು ಇದನ್ನು ಮರೆ ಮಾಚುವ ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸುಳ್ಳುಗಳನ್ನು ಹೇಳುತ್ತಲೇ ದೇಶಕ್ಕೆ ಮಂಕುಬೂದಿ ಎರಚಿದೆ. ನಮ್ಮ ಮನೆಗೆ ನುಗ್ಗಿ ಹಾಳು ಮಾಡಿದವರನ್ನು ಗ್ರೇಟ್‌ ಎನ್ನಲು ಸಾಧ್ಯವೇ? ಕಾಂಗ್ರೆಸ್‌ ಹಾಗೂ ಬುದ್ಧಿಜೀವಿಗಳು ಮಾಡಿದ್ದು ಇದನ್ನೇ ಎಂದು ಟೀಕಿಸಿದರು.

Advertisement

ನಗರ ಮಂಡಲದ ಪ್ರಭಾರಿ ಸರೋಜ ಮಾತನಾಡಿ, ಶ್ರಮ, ತ್ಯಾಗ, ಬಲಿದಾನ ಎಲ್ಲದರಿಂದಾಗಿ ಪಕ್ಷ ಇಂದು ಸುಸಜ್ಜಿತ ಸ್ಥಿತಿಯಲ್ಲಿದೆ. ನಮ್ಮ ಪಕ್ಷದ ಸಂಸ್ಥಾಪಕ ದೀನ್‌ ದಯಾಳ್‌ ಉಪಾಧ್ಯಾಯ ಅವರು ನಮಗೊಂದು ಏಕಾತ್ಮ ಮಾನವ ದರ್ಶನ ಎನ್ನುವ ಸಂವಿಧಾನ ನೀಡಿದ್ದಾರೆ. ವ್ಯಕ್ತಿ ನಿರ್ಮಾಣವಾದರೆ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವುದನ್ನು ಪಕ್ಷ ಕಲಿಸಿದೆ ಎಂದರು.

ಬಿಜೆಪಿ ಮುಖಂಡ ಕೋಟೆ ರಂಗನಾಥ್‌ ಕಾರ್ಯಕಾರಣಿ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ ಮಾತನಾಡಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಆನಂದ್‌, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಡಿ. ತಮ್ಮಯ್ಯ, ಮೂಡಿಗೆರೆ ಪ್ರಭಾರಿ ಟಿ. ರಾಜಶೇಖರ್‌, ಬಿ. ರಾಜಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next