Advertisement

Power Generation: ರಾಜ್ಯದ ಮೊದಲ ನೈಸರ್ಗಿಕ ಅನಿಲ ವಿದ್ಯುತ್‌ ಸ್ಥಾವರ ಲೋಕಾರ್ಪಣೆ

01:18 AM Sep 25, 2024 | Team Udayavani |

ಬೆಂಗಳೂರು: ಯಲಹಂಕ ಬಳಿ ನಿರ್ಮಿಸಿರುವ ರಾಜ್ಯದ ಮೊಟ್ಟ ಮೊದಲ ನೈಸರ್ಗಿಕ ಅನಿಲ ಆಧಾರಿತ 370 ಮೆಗಾ ವ್ಯಾಟ್‌ ಸಾಮರ್ಥ್ಯದ ಸಂಯುಕ್ತ ವಿದ್ಯುತ್‌ ಸ್ಥಾವರವನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

Advertisement

ಬಳಿಕ ಮಾತನಾಡಿದ ಸಿಎಂ, ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಪ್ರಗತಿಗೆ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು. ದೇಶದಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ಹಲವು ಗೃಹ ಉದ್ಯಮ ಚಟುವಟಿಕೆಗಳು ವಿದ್ಯುತ್‌ ಮೇಲೆಯೇ ಅವಲಂಬಿತವಾಗಿದೆ. ದೇಶದ ಜಿಡಿಪಿ ಬೆಳವಣಿಗೆಯಾಗಬೇಕಾದರೆ ಈ ಎಲ್ಲ ಚಟುವಟಿಕೆಗಳು ಅಭಿವೃದ್ಧಿಯಾಗಬೇಕು. ಆ ನಿಟ್ಟಿನಲ್ಲಿ ಇಂಧನ ಇಲಾಖೆಯು ಅನಿಲ ಮತ್ತು ಹಬೆಯ ಸಂಯೋಜಿತವಾಗಿ 370 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಸ್ಥಾವರ ನಿರ್ಮಿಸಿದ್ದು, ವಿದ್ಯುತ್‌ ಕ್ಷೇತ್ರದ ಸ್ವಾವಲಂಬನೆಗೆ ಸಹಕಾರಿಯಾಗಲಿದೆ ಎಂದರು.

ನಾನೇ ಅಡಿಗಲ್ಲು, ನಾನೇ ಲೋಕಾರ್ಪಣೆ:
ರಾಜ್ಯದಲ್ಲಿ ಈಗಾಗಲೇ ನೀರು, ಗಾಳಿ, ಸೋಲಾರ್‌, ಕಲ್ಲಿದ್ದಲು ಸೇರಿದಂತೆ ವಿವಿಧ ಮೂಲಗಳಿಂದ 34 ಸಾವಿರ ಮೆ.ವ್ಯಾ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಹಿಂದೆ ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ಮುಖ್ಯಮಂತ್ರಿಯಾಗಿ 2016ರಲ್ಲಿ ಯೋಜನೆಗೆ ನಾನೇ ಅಡಿಗಲ್ಲು ಹಾಕಿದ್ದೆ. ಈಗ ನಾನೇ ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಮೇಕೆದಾಟು ಯೋಜನೆ ನನ್ನ ಕನಸು:
ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬೆಂಗಳೂರಿನ ನಾಗರಿಕರಿಗೆ ಈ ಅತ್ಯಾಧುನಿಕ ತಂತ್ರಜ್ಞಾನದ ಅನಿಲ ವಿದ್ಯುತ್‌ ಸ್ಥಾವರ ಸರ್ಕಾರದ‌ ಕೊಡುಗೆಯಾಗಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಅದರಿಂದ 400 ಮೆಗಾ ವ್ಯಾಟ್‌ ಉತ್ಪಾದನೆ ಸಾಧ್ಯವಾಗಲಿದೆ. ಮೇಕೆದಾಟು ಯೋಜನೆಯು ನನ್ನ ಕನಸು. ಇದನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ರಾಜ್ಯದ ಪ್ರಥಮ ಅನಿಲ ವಿದ್ಯುತ್‌ ಸ್ಥಾವರ ಉದ್ಘಾಟನೆ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಅಗ್ನಿ ಅವಘಡ, ಸುಪ್ರೀಂಕೋರ್ಟ್‌ ತಡೆಯಾಜ್ಞೆಯಂಥ ಹಲವು ವಿಘ್ನಗಳನ್ನು ನಿವಾರಿಸಿ ಸರ್ಕಾರ ಇಚ್ಛಾಶಕ್ತಿಯಿಂದ ಈ ಹಂತ ತಲುಪಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ಬಿ.ಎಸ್‌.ಸುರೇಶ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌, ನಸೀರ್‌ ಅಹಮದ್‌, ಶಾಸಕ ಎಸ್‌.ಆರ್‌.ವಿಶ್ವನಾಥ್‌, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ ಸಿಂಗ್‌, ಎಂಎಲ್‌ಸಿ ಪ್ರಕಾಶ್‌ ರಾಥೋಡ್‌, ಬಿಎಚ್‌ಇಎಲ್‌ ಅಧ್ಯಕ್ಷ, ಕೊಪ್ಪು ಸದಾಶಿವಮೂರ್ತಿ, ಗೇಲ್‌ ಅಧ್ಯಕ್ಷ ಸಂದೀಪ್‌ ಕುಮಾರ್‌ ಗುಪ್ತ, ಜಾವೇದ್‌ ಅಖ್ತರ್‌, ಜಗದೀಶ್‌ ಮತ್ತಿತರರು ಇದ್ದರು.


2030ಕ್ಕೆ 60 ಸಾವಿರ ಮೆ.ವ್ಯಾ ವಿದ್ಯುತ್‌ ಉತ್ಪಾದನೆ ಗುರಿ: ಸಿಎಂ

2030ಕ್ಕೆ 60,000 ಸಾವಿರ ಮೆ.ವ್ಯಾ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಇದೆ. ಇದನ್ನು ನಾನು ಬಜೆಟ್‌ನಲ್ಲೇ  ಘೋಷಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ವರ್ಷದಿಂದ ವರ್ಷಕ್ಕೆ ವಿದ್ಯುತ್‌ ಬಳಕೆ, ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ತಾಜ್ಯದಿಂದಲೂ ವಿದ್ಯುತ್‌ ಉತ್ಪಾದಿಸುವ ಗುರಿ ಇದೆ. 300 ಕೋಟಿ ವ್ಯಯಿಸುವ ಚಿಂತನೆ ಇದೆ ಎಂದರು.

ಸ್ಥಾವರ ನಿರ್ಮಿಸಿದ ಕಾರ್ಮಿಕರಿಗೆ 5 ಸಾವಿರ ರೂ. ಬೋನಸ್‌
ಯಲಹಂಕದ ಅನಿಲ ಸ್ಥಾವರ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಕಾರ್ಮಿಕರಿಗೆ 5 ಸಾವಿರ ಬೋನಸ್‌ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಹಿಂದೆ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಉದ್ಯೋಗಿಗಳಿಗೆ ಬೋನಸ್‌ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈ ಸ್ಥಾವರದ ಉದ್ಯೋಗಿಗಳಿಗೂ ಬೋನಸ್‌ ನೀಡುವುದಾಗಿ ಕೆಪಿಸಿಎಲ್‌ ಅಧ್ಯಕ್ಷನಾಗಿ ಘೋಷಿಸುತ್ತಿದ್ದೇನೆ ಎಂದರು. ಯಲಹಂಕ ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳಿದ್ದು ಸ್ಥಾವರದಿಂದಾಗಿ ಹೆಚ್ಚು ಶಬ್ದವಾಗುತ್ತಿರುವ ಬಗ್ಗೆ ದೂರುಗಳಿವೆ ಶಬ್ದವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಮುಖ್ಯಾಂಶಗಳು
* ನೈಸರ್ಗಿಕ ಅನಿಲ ವಿದ್ಯುತ್‌ ಸ್ಥಾವರಕ್ಕೆ 2298 ಕೋಟಿ ರೂ. ವೆಚ್ಚ
* ಅನಿಲ ಮೂಲಕ 236.82, ನೀರಿನ ಹಬೆಯಿಂದ 133.22 ಮೆ.ವ್ಯಾ ವಿದ್ಯುತ್‌ ಉತ್ಪಾದನೆ
* ವಾರ್ಷಿಕ ವಿದ್ಯುತ್‌ ಉತ್ಪಾದನೆ 2755 ಮೆಗಾ ವ್ಯಾಟ್‌
* 7.50 ಪ್ರತಿ ಯೂನಿಟ್‌ ವಿದ್ಯುತ್‌ ವೆಚ್ಚ

Advertisement

Udayavani is now on Telegram. Click here to join our channel and stay updated with the latest news.

Next