ಸುಳ್ಯ: ಸುಳ್ಯ ನಗರ ಸಹಿತ ತಾಲೂಕಿನಾದ್ಯಂತ ಹಲವೆಡೆಗಳಲ್ಲಿ ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವ ಘಟನೆ ನಡೆಯುತ್ತಿದೆ. ವಿದ್ಯುತ್ ಅಡಚಣೆಯಿಂದ ಕಿರಿ ಕಿರಿ ಅನುಭವಿಸಿರುವ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲ ಆರಂಭಗೊಂಡ ಬಳಿಕ ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರದಲ್ಲಿಯೂ ಹಗಲು, ರಾತ್ರಿ ಎನ್ನದೆ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಕರೆಂಟ್ ಬಂದರೂ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಮಾಯವಾಗುತ್ತಿದೆ.
ಮಳೆಗಾಲಕ್ಕೆ ಮೊದಲೇ ಸಮಸ್ಯೆ ಉಂಟಾಗುವ ಕಡೆಗಳಲ್ಲಿ ಟ್ರೀ ಕಟ್ಟಿಂಗ್, ಇನ್ನಿತರ ಪೂರ್ವ ಕೆಲಸಗಳನ್ನು ನಿರ್ವಹಿಸಬೇಕೆಂದು ಸೂಚಿಸಲಾಗಿದ್ದರೂ ಕಾರ್ಯಗತಗೊಂಡಿಲ್ಲವೇ ಅಥವಾ ಮಾಡಿಯೂ ಸಮಸ್ಯೆ ಯಾಕೆ ಉಂಟಾಗುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ತುರ್ತು ದುರಸ್ತಿ ಕಾರ್ಯ
ಕೆಲವು ದಿನಗಳಿಂದ ನಿರಂತರ ಭಾರೀ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಲೈನ್ ಮೇಲೆ ಮರ, ಮರದ ಗೆಲ್ಲು ಬಿದ್ದು, ಕಂಬ, ತಂತಿಗಳಿಗೆ ಹಾನಿ ಸಂಭವಿಸಿದೆ ಇದರಿಂದಲೂ ಸಮಸ್ಯೆ ಉಂಟಾಗುತ್ತಿದೆ ಎನ್ನಲಾಗಿದೆ. ಸಮಸ್ಯೆ ಸಂಭವಿಸಿದ ಕಡೆ ಮೆಸ್ಕಾಂ ವತಿಯಿಂದ ತುರ್ತು ದುರಸ್ತಿ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವುರಿಂದ ಗಾಳಿ-ಮಳೆಯಿಂದ ನಿರಂತರ ಹಾನಿ ಸಂಭವಿಸುತ್ತಿರುವುದರಿಂದ ಸಮಸ್ಯೆ ಪುನಾರಾವರ್ತನೆಯಾಗುತ್ತಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಪದೇ ಪದೇ ಕೈ ಕೊಡುತ್ತಿರುವ ವಿದ್ಯುತ್‌ನಿಂದ ಕುಡಿಯುವ ನೀರಿನ ಪೂರೈಕೆ, ಫೋನ್ ನೆಟ್‌ವರ್ಕ್‌ಗೂ ಸಮಸ್ಯೆಯಾಗುತ್ತಿದೆ.
ದುರಸ್ತಿಗೆ ಕ್ರಮ: ಗಾಳಿ-ಮಳೆಗೆ ವಿದ್ಯುತ್ ಲೈನ್‌ಗೆ ಹಾನಿಯಾದಾಗ ವಿದ್ಯುತ್ ಕಡಿತಗೊಳ್ಳುತ್ತದೆ. ಹಾನಿಯ ಕುರಿತು ಮಾಹಿತಿ ದೊರೆತ ಕೂಡಲೇ ಮೆಸ್ಕಾಂ ವತಿಯಿಂದ ದುರಸ್ತಿ ಕಾರ್ಯ ನಡೆಸಿ, ವಿದ್ಯುತ್ ಪೊರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. –
ಸುಪ್ರೀತ್, ಎಇಇ, ಸುಳ್ಯ
ಟಿ.ಸಿ.ಗಳಿಗೆ ಹಾನಿ
ಜು.1ರಿಂದ 5ರ ವರೆಗೆ ಸಂಭವಿಸಿದ ಗಾಳಿ-ಮಳೆಗೆ ತಾಲೂಕು ವ್ಯಾಪ್ತಿಯಲ್ಲಿ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಆಗಿದೆ. 218ಕ್ಕೂ ಅಧಿಕ ವಿದ್ಯುತ್ ವಿದ್ಯುತ್ ಕಂಬ, 6ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ಇವುಗಳ ದುರಸ್ತಿ ನಡೆಸಲಾಗಿದೆ.