Advertisement

ಪವರ್‌ ಕಟ್ ಆದರೆ ಬಿಎಸ್ಸೆನ್ನೆಲ್ ನೆಟ್ವರ್ಕೂ ಕಟ್

11:24 PM Aug 03, 2019 | Team Udayavani |

ವೇಣೂರು: ಗ್ರಾಮಾಂತರ ಪ್ರದೇಶ ದಲ್ಲಿ ಬಿಎಸ್ಸೆನ್ನೆಲ್ ನೆಟ್ವರ್ಕ್‌ ಸರಿಯಾಗಿ ಸಿಗದೆ ಸಮಸ್ಯೆಯಾಗಿದ್ದು, ಬಳಕೆದಾರರು ಶಾಪ ಹಾಕುವ ಸ್ಥಿತಿಯಿದೆ. ವೇಣೂರು, ಪೆರಿಂಜೆ, ನಾರಾವಿ, ಅಳದಂಗಡಿ ರಾಜ್ಯ ಹೆದ್ದಾರಿಯಲ್ಲೇ ಸರಿಯಾಗಿ ಸಿಗದ ಬಿಎಸ್‌ಎನ್‌ಎಲ್ ನೆಟ್ವರ್ಕ್‌ ಸ್ತಬ್ಧಗೊಳ್ಳುತ್ತಿದೆ.

Advertisement

ಸರಕಾರಿ ಸೇವೆಯಲ್ಲೂ ವ್ಯತ್ಯಯ
ವೇಣೂರು ಹೋಬಳಿಯಲ್ಲಿರುವ 11 ಗ್ರಾ.ಪಂ. ಕಚೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗಳು, ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಗಳು, ವೇಣೂರಿನಲ್ಲಿ ಕಾರ್ಯಾಚರಿಸುತ್ತಿರುವ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು, ನೆಮ್ಮದಿ ಕೇಂದ್ರ ಸಹಿತ ಹಲವಾರು ಸಂಘ ಸಂಸ್ಥೆಗಳು ಬಿಎಸ್ಸೆನ್ನೆಲ್ ಸಂಪರ್ಕ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತೀವ್ರ ನೆಟ್ವರ್ಕ್‌ ಸಮಸ್ಯೆ ಎದುರಿಸುತ್ತಿದ್ದು, ಜನಸಾಮಾನ್ಯರಿಗೆ ಬ್ಯಾಂಕ್‌, ಕಚೇರಿ ಕೆಲಸ ನಿರ್ವಹಿಸುವುದೇ ಕಷ್ಟವೆನಿಸಿದೆ. ಹೆಚ್ಚಿನ ವಹಿವಾಟು ನಡೆಯುವ ವೇಣೂರು ಪೇಟೆಗೆ ಅಳದಂಗಡಿಯಿಂದ ಒಎಫ್‌ಸಿ ಕೇಬಲ್ ಮೂಲಕ ಸಂಪರ್ಕ ಹೊಂದಿದ್ದು, ಅಳದಂಗಡಿಯಲ್ಲಿ ಟವರ್‌ ಸ್ತಬ್ಧಗೊಂಡರೆ ವೇಣೂರಿನಲ್ಲಿ ಸಂಪರ್ಕ ಕಡಿತಗೊಳುತ್ತದೆ. ಕೆಲವು ಪ್ರದೇಶಗಳಲ್ಲಿ ಕರೆಂಟ್ ಹೋದರೆ ಬಿಸ್ಸೆನ್ನೆಲ್ ಸಂಪರ್ಕ ಕಳೆದುಕೊಳ್ಳುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಕರೆಂಟ್ ಇದ್ದರೂ ಇಲ್ಲದಿದ್ದರೂ ನೆಟ್ವರ್ಕ್‌ ಸಿಗುವುದೇ ಇಲ್ಲ.

ವಿದ್ಯುತ್‌ ಹೋದರೆ ಕೆಲವು ಟವರ್‌ಗಳು ಸ್ತಬ್ಧಗೊಂಡರೆ, ಕೆಲವು ಟವರ್‌ಗಳು ಅರ್ಧ ಗಂಟೆಯಿಂದ 4 ಗಂಟೆಯವರೆಗೆ ಕೆಲಸ ಮಾಡುತ್ತವೆ. ಆದರೆ ವಾರದಲ್ಲಿ ಕೆಲವು ದಿನಗಳು ದಿನವಿಡೀ ವಿದ್ಯುತ್‌ ಇರುವುದೇ ಇಲ್ಲ. ಆ ದಿನ ಮಧ್ಯಾಹ್ನವಾಗುತ್ತಲೇ ಎಲ್ಲ ಬಿಎಸ್ಸೆನ್ನೆಲ್‌ ಟವರ್‌ಗಳು ಸ್ತಬ್ಧಗೊಳುತ್ತವೆ.

ಡಿಸೇಲ್‌ ಪೂರೈಕೆ ಇಲ್ಲ
ಟವರ್‌ ಇರುವ ಎಲ್ಲ ಕಡೆಗಳಲ್ಲಿ ಜನರೇಟರ್‌ ವ್ಯವಸ್ಥೆಯಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಟವರ್‌ನ ಬ್ಯಾಟರಿ ಚಾರ್ಜ್‌ ಮಾಡಲು ಜನರೇಟರ್‌ಗೆ ಸಮರ್ಪಕ ಡೀಸೆಲ್‌ ಕೊರತೆ ಎದುರಿಸುತ್ತಿದೆ. ಕಳೆದ ಸುಮಾರು 3 ತಿಂಗಳಿನಿಂದ ಡೀಸೆಲ್‌ ಪೂರೈಕೆ ಆಗಿಲ್ಲ ಎಂದು ವಿನಿಮಯ ಕೇಂದ್ರದ ಸಿಬಂದಿ ಹೇಳುತ್ತಾರೆ.

ವೇತನವೂ ಇಲ್ಲ
ಪ್ರತೀ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಕನಿಷ್ಠ ಇಬ್ಬರು ಸಿಬಂದಿ ಇರಬೇಕಾಗುತ್ತದೆ. ಆದರೆ ಇಲಾಖೆ ಒಬ್ಬರನ್ನು ನೇಮಿಸಿ ಮತ್ತೂಬ್ಬರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿದೆ. ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಸಿಬಂದಿಗೆ ಕಳೆದ 13 ತಿಂಗಳುಗಳಿಂದ ವೇತನ ನೀಡಿಲ್ಲ ಎಂದು ಕಣ್ಣೀರುಡುತ್ತಾರೆ ಸಿಬಂದಿ.

Advertisement

ಜಿಯೋದೊಂದಿಗೆ ಸಂಪರ್ಕ
ಅಳದಂಗಡಿಯಲ್ಲಿ ಖಾಸಗಿ ಜಿಯೋ ನೆಟ್‌ವರ್ಕ್‌ ಸಂಸ್ಥೆಗೆ ಬಿಎಸ್ಸೆನ್ನೆಲ್‌ ಟವರ್‌ನಿಂದ ನೆಟ್‌ವರ್ಕ್‌ ನೀಡಲಾಗಿದೆ. ಆ ಬಳಿಕವೇ ಬಿಎಸ್ಸೆನ್ನೆಲ್‌ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ ಎಂಬುದು ಗ್ರಾಹಕರ ಆರೋಪ. ದಿನಿವಿಡೀ ವಿದ್ಯುತ್‌ ಸಂಪರ್ಕ ಇಲ್ಲದಿದ್ದರೆ ಗ್ರಾಹಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಜಿಯೋ ಸಂಸ್ಥೆಯವರು ಜನರೇಟರ್‌ ತಂದು ಬ್ಯಾಟರಿಯನ್ನು ಚಾರ್ಜುಗೊಳಿಸುತ್ತಾರೆ. ಆದರೆ ಬಿಎಸ್ಸೆನ್ನೆಲ್‌ ಮಾತ್ರ ಇದ್ದ ಜನರೇಟರ್‌ಗೆ ಡೀಸೆಲ್‌ ಹಾಕಲು ಆರ್ಥಿಕ ಸಮಸ್ಯೆಯನ್ನು ಮುಂದಿಡುತ್ತಿರುವುದು ವಿಪರ್ಯಾಸ.

ಡೀಸೆಲ್‌ಗೆ ದೇಣಿಗೆ !
ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ನಿಂದ ರೋಸಿ ಹೋಗಿರುವ ಗ್ರಾಹಕರು, ಅಳದಂಗಡಿ ಪರಿಸರದ ಅಂಗಡಿಯೊಂದರಲ್ಲಿ ನಷ್ಟ ಹೊಂದಿರುವ ಬಿಎಸ್ಸೆನ್ನೆಲ್‌ ಟವರ್‌ ಜನರೇಟರ್‌ಗೆ ಡೀಸೆಲ್‌ ಹಾಕಲು ದೇಣಿಗೆ ಸಂಗ್ರಹ ಎಂಬ ಪೆಟ್ಟಿಗೆಯೊಂದನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ಬಿಎಸ್ಸೆನ್ನೆಲ್‌ ಸೇವೆಯನ್ನು ಅಣಕಿಸಿದ್ದರು. ಇದು ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next