Advertisement

ವಿದ್ಯುತ್‌ ಅವಘಡ: ಪಿಲಿಮೊಗರಿನಲ್ಲಿ ನೀರವ ಮೌನ

11:04 PM Jun 12, 2019 | mahesh |

ಪುಂಜಾಲಕಟ್ಟೆ: ಗಾಳಿ- ಮಳೆಯಿಂದ ಕಡಿದು ಬಿದ್ದ ವಿದ್ಯುತ್‌ ತಂತಿಯನ್ನು ಆಕಸ್ಮಿಕವಾಗಿ ತುಳಿದು ಸಾವನ್ನಪ್ಪಿದ್ದ ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಬಾರೆಕ್ಕಿನಡಿಯ ತಂದೆ, ಮಗಳ ಅಂತಿಮ ಸಂಸ್ಕಾರ ಬುಧವಾರ ಸಂಜೆ ಬಾರೆಕ್ಕಿನಡಿಯಲ್ಲಿ ನಡೆಯಿತು.

Advertisement

ಮಂಗಳವಾರ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಗೋಪಾಲಕೃಷ್ಣ ಶೆಟ್ಟಿ ಅವರು ತೋಟದಲ್ಲಿ ಕಡಿದು ಬಿದ್ದಿದ್ದ ಹಳೆಯ ವಿದ್ಯುತ್‌ ತಂತಿಯನ್ನು ಆಕಸ್ಮಿಕ ತುಳಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದರು. ತಂದೆ ಯನ್ನು ಹಿಂಬಾಲಿಸಿಕೊಂಡು ಬರು ತ್ತಿದ್ದ ಪುತ್ರಿ ದಿವ್ಯಶ್ರೀ ಅವರಿಗೂ ವಿದ್ಯುತ್‌ ತಂತಿ ತಗಲಿ ಅವರೂ ಮೃತ ಪಟ್ಟಿದ್ದರು.

ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಮನೆಯಲ್ಲಿ ವಿಧಿ ವಿಧಾನಗಳು ಪೂರೈಸಿದ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಘಟನೆ ಯಿಂದಾಗಿ ಪಿಲಿಮೊಗರು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಅಂತ್ಯ ಸಂಸ್ಕಾರದ ವೇಳೆಗೆ ಇಡೀ ಗ್ರಾಮವೇ ಸೇರಿತ್ತು. ಘಟನೆಯಿಂದ ಆಘಾತಕ್ಕೊಳ ಗಾಗಿದ್ದ ಗೋಪಾಲಕೃಷ್ಣ ಶೆಟ್ಟಿ ಅವರ ಪತ್ನಿ ಗಿರಿಜಾ ಶೆಟ್ಟಿ ಅವರನ್ನು ಪತಿ, ಪುತ್ರಿಯ ಅಂತ್ಯಸಂಸ್ಕಾರದ ಹಿನ್ನೆಲೆ ಯಲ್ಲಿ ಮನೆಗೆ ಕರೆತರಲಾಗಿದೆ.

ಗರಿಷ್ಠ ಪರಿಹಾರ: ಸೂಚನೆ
ಈ ಸಂದರ್ಭ ಮೃತರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಘಟನೆ ಬಗ್ಗೆ ಮೆಸ್ಕಾಂನ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರಲ್ಲದೆ, ಮೃತರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡುವಂತೆ ಸೂಚಿಸಿದರು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಅವರು ಈಗಾಗಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಮೆಸ್ಕಾಂನ ಹಿರಿಯ ಅಧಿಕಾರಿಗಳ ಸಹಿತ ಹಲವಾರು ಗಣ್ಯರು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

ಅಂತಿಮ ನಮನ
ಸಂಸದ ನಳಿನ್‌ ಕುಮಾರ್‌ ಕಟೀಲು ಸಹಿತ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ. ಸದಸ್ಯೆ ರತ್ನಾವತಿ ಜೆ. ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಜಿ. ಆನಂದ, ಸುಲೋಚನಾ ಜಿ.ಕೆ. ಭಟ್‌, ರಾಮದಾಸ ಬಂಟ್ವಾಳ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಮತ್ತು ಗ್ರಾ.ಪಂ. ಅಧ್ಯಕ್ಷ ಯತೀಶ್‌ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

Advertisement

ದೂರು ದಾಖಲು
ಘಟನೆಯ ಬಗ್ಗೆ ಮೃತರ ಸಂಬಂಧಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡಿ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ 40 ವರ್ಷಗಳಿಂದ ಮೆಸ್ಕಾಂ ವಿದ್ಯುತ್‌ ಸಂಪರ್ಕದ ತಂತಿಯನ್ನು ಬದಲಿಸದೆ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣವೆಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next