ಮಾಗಡಿ: ಸರ್ಕಾರ ಬಡವರಿಗಾಗಿ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದ ಸೋಲಿಗರ ಬದುಕು ಇನ್ನೂ ಹಸನಾಗಿಲ್ಲ. ಸರ್ಕಾರಿ ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತಗೊಂಡಿರುವ ಸೋಲಿಗರ ಬದುಕು ಮೂರಾಬಟ್ಟೆಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ರಾಜಕಾರಣಿಗಳು ಹೊಣೆಗೇಡಿತನ: ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ದುಡುಪನಹಳ್ಳಿ ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಸೋಲಿಗರ ಕುಟುಂಬಗಳು ವಾಸವಾಗಿವೆ. ಬಹುತೇಕ ಸೋಲಿಗರು ಸರ್ಕಾರದ ಅರೆಬರೆ ಸೌಲತ್ತುಗಳನ್ನು ಪಡೆದು ಜೀವನ ಸಾಗಿಸಲು ಹೆಣಗುತ್ತಿದ್ದಾರೆ. ಕೆಲವರಿಗಾದರೂ ಅರೆಬರೆ ಸೌಲಭ್ಯಗಳಾದರೂ ದೊರೆತಿದ್ದು, ಇನ್ನು ಅದೆಷ್ಟೋ ಅನಕ್ಷರಸ್ಥ ಬಡಕುಟುಂಬಗಳಿಗೆ ಸೌಲಭ್ಯಗಳು ತಲುಪಿಲ್ಲ. ಬಹುತೇಕ ಅನಕ್ಷರಸ್ಥರೇ ತುಂಬಿರುವ ಕುಟುಂಬಗಳಿಗೆ ಮಾಹಿತಿ ಕೊರತೆಯಿದ್ದು, ಅಧಿಕಾರಿಗಳೂ ಸರ್ಕಾರದ ಯೋಜನೆಗಳನ್ನು ಕುಟುಂಬಗಳಿಗೆ ತಲುಪಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಬಹುತೇಕ ಯೋಜನೆಗಳು ವಿಫಲಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂಬ ಆರೋಪಗಳಿವೆ. ಅಲ್ಲದೆ ವೋಟಿಗಾಗಿ ಜೋಪಡಿಗಳತ್ತ ಕಾಲಿಡುವ ರಾಜಕಾರಣಿಗಳು ವೋಟು ಪಡೆದ ಮೇಲೆ ಇತ್ತ ತಿರುಗಿಯೂ ನೋಡುವುದಿಲ್ಲ ಎಂಬ ಆಕ್ರೋಶವನ್ನು ಸೋಲಿಗರು ಹೊರಹಾಕಿದ್ದಾರೆ. ಅಧಿಕಾರಿ ವರ್ಗದ ನಿರ್ಲಕ್ಷ್ಯ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಗಳಿಂದಾಗಿ ಸೋಲಿಗರ ಬದುಕು ಸುಧಾರಣೆ ಕಾಣದಂತಾಗಿದೆ.
ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯಧೋರಣೆ: ಸರ್ಕಾರ ಪ್ರತಿ ಗ್ರಾಮ ಪಂಚಾಯ್ತಿಗೂ ಒಬ್ಬೊಬ್ಬ ಗ್ರಾಮಾಭಿವೃದ್ಧಿ ಅಧಿಕಾರಿಗಳನ್ನು ನೇಮಿಸಿದ್ದು, ಈ ಅಧಿಕಾರಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸೋಲಿಗರು ವಾಸಿಸುವ ಸ್ಥಳಗಳಲ್ಲಿ ನರೇಗಾ ಯೋಜನೆಯಡಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪಂಚಾಯ್ತಿಗಳಿಗೆ ಅನುದಾನ ನೀಡಿದೆ. ಆದರೆ ಗ್ರಾಮ ಪಂಚಾಯ್ತಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸೋಲಿಗರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಸೋಲಿಗರ ಕಾಲೋನಿಯಲ್ಲಿ ಚರಂಡಿ ನಿರ್ಮಾಣವಾಗಬೇಕಿದೆ. ದನದಕೊಟ್ಟಿಗೆ, ಸ್ವಚ್ಛ ಭಾರತ್ ಅಭಿಯಾನದಲ್ಲಿ ಫಲಾನುಭವಿಗಳಿಗೆ ಬರಬೇಕಿದ್ದ ಶೌಚಾಲಯದ ಬಿಲ್ಗಳು ಬಾಕಿ ಇವೆ. ಆದರೆ ಇದ್ಯಾವುದನ್ನು ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲದಂತೆ ಕಾಣುತ್ತಿದೆ. ಆದರೆ ಸರ್ಕಾರದ ಸೌಲಭ್ಯಗಳನ್ನು ನೀಡದಿದ್ದರೆ, ಶೀಘ್ರ ಶೌಚಾಲಯದ ಬಿಲ್ ಬಿಡುಗಡೆಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸೌಲಭ್ಯ ನೀಡಲು ಪಂಚಾಯ್ತಿ ಸಿದ್ಧವಿದೆ: ಮನೆ, ಶೌಚಾಲಯ, ದನದಕೊಟ್ಟಿಗೆ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಡಿ ಸರ್ಕಾರ ಅನುದಾನ ನೀಡಿದೆ. ಅನುದಾನದ ಬಳಕೆ ಕುರಿತು ಪಿಡಿ ಹಾಗೂ ನರೇಗಾ ಅಧಿಕಾರಿಗಳು, ಎಂಜಿನಿಯರ್ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಅನುದಾನ ಅನ್‌ಲೈನ್ ಮೂಲಕವೇ ಪಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಪಲಾನೂಭವಿಗಳು ಜಾಬ್ ಕಾರ್ಡ್ ಅನ್ನು ಪಂಚಾಯ್ತಿಯಲ್ಲಿ ನೋಂದಣಿ ಮಾಡಿಸಿರಬೇಕಷ್ಟೆ.. ಪಲಾನುಭವಿಗಳು ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಮತ್ತು ತಾಲೂಕು ಕಚೇರಿಯಲ್ಲಿ ನಡೆಯುವ ಜನಸ್ಪಂದನಾ ಸಭೆಯಲ್ಲಿ ಹಾಜರಿದ್ದು, ತಮಗಾಗಬೇಕಾದ ಕೆಲಸದ ಕುರಿತು ಅರ್ಜಿ ನೀಡಿದರೆ ಸಾಕು. ಸೌಲತ್ತುಕೊಡಲು ಪಂಚಾಯ್ತಿ ಸದಾ ಬದ್ಧವಾಗಿದೆ ಎಂದು ಪಿಡಿಒ ವಿವರಿಸಿದರು.
●ತಿರುಮಲೆ ಶ್ರೀನಿವಾಸ್