ಹೊಸದಿಲ್ಲಿ: ಭಾರತದಲ್ಲಿ 2011-12ರ ಅವಧಿಯಲ್ಲಿ ಶೇ.21.9ರಷ್ಟಿದ್ದ ಬಡತನ ಅನುಪಾತವು 2020-21ರ ವೇಳೆಗೆ ಶೇ.17.9ಕ್ಕೆ ಕುಸಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಎಕೋರ್ಯಾಪ್ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.
2017ರಿಂದೀಚೆಗೆ ಭಾರತದಲ್ಲಿ ಆದಾಯ ಅಸಮಾನತೆ ಕಡಿಮೆಯಾಗಿದೆ. ನೋಟು ಅಮಾನ್ಯಿಕರಣವಾದ ವರ್ಷದಲ್ಲಿ ಕುಸಿಯಲಾರಂಭಿಸಿದ ಆದಾಯ ಅಸಮಾನತೆ ಕೊರೊನಾ ಸಮಯದಲ್ಲಿಯೂ ಕುಸಿದಿದೆ.
ಶ್ರೀಮಂತರ ಆದಾಯದಲ್ಲಿ ಕುಸಿತ ಕಂಡುಬಂದಿದೆ ಎಂದು ವರದಿಯು ತಿಳಿಸಿದೆ.
ಹಾಗೆಯೇ 2001-02ರ ಸಮಯದಲ್ಲಿ 18,118 ರೂ. ಇದ್ದ ರಾಜ್ಯಗಳ ಸರಾಸರಿ ಆದಾಯ, 2011-12ರಲ್ಲಿ 68,845 ರೂ. ತಲುಪಿದೆ. 2021-22ರಲ್ಲಿ 1,74,024 ರೂ.ಗೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಸ್ಸಾಂ, ಬಿಹಾರ, ಛತ್ತೀಸಗಢ, ಮಧ್ಯಪ್ರದೇಶ, ಉತ್ತರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಲದಲ್ಲಿ ಬಡತನ ಕಡಿಮೆಯಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.