Advertisement

ಬಡತನಮುಕ್ತ  ಗ್ರಾಪಂ ನಿರ್ಮಾಣ ಗುರಿ

04:49 PM Oct 07, 2018 | |

ಹಾವೇರಿ: ಬಡತನ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾದ ‘ಮಿಷನ್‌ ಅಂತ್ಯೋದಯ’ ಯೋಜನೆಯನ್ನು ಜಿಲ್ಲೆಯ 26 ಗ್ರಾಮ ಪಂಚಾಯಿತಿಗಳ 88 ಹಳ್ಳಿಗಳಲ್ಲಿ ಜಾರಿಗೊಳಿಸಿ ‘ಬಡತನಮುಕ್ತ’ ಗ್ರಾಮ ಪಂಚಾಯತ್‌ ಘೋಷಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಂ.ವಿ.ವೆಂಕಟೇಶ್‌ ತಿಳಿಸಿದರು. ‘ಮಿಷನ್‌ ಅಂತ್ಯೋದಯ’ ಯೋಜನೆ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

2020ರ ವೇಳೆಗೆ ಅಭಿವೃದ್ಧಿ ಮತ್ತು ಮೂಲ ಸೌಕರ್ಯದಲ್ಲಿ ಹಿಂದುಳಿದ ದೇಶದ 50 ಸಾವಿರ ಗ್ರಾಮ ಪಂಚಾಯತ್‌ ಹಾಗೂ ರಾಜ್ಯದ 1126 ಗ್ರಾಮ ಪಂಚಾಯಿತಿಗಳನ್ನು ‘ಮಿಷನ್‌ ಅಂತ್ಯೋದಯ’ ಯೋಜನೆಯ ವ್ಯಾಪ್ತಿಗೆ ಒಳಪಡಿಸಿ ವಿವಿಧ ಇಲಾಖೆಯ ಯೋಜನೆಗಳನ್ನು ಸಮನ್ವಯಗೊಳಿಸಿ ಮೂಲ ಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಆರ್ಥಿಕ ಬೆಳವಣಿಗೆಗೆ ಅನುಕೂಲವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. 2020ರ ವೇಳೆಗೆ ಸಮಗ್ರ ಅಭಿವೃದ್ಧಿಪಡಿಸಿ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು.

‘ಮಿಷನ್‌ ಅಂತ್ಯೋದಯ’ ಐದು ಅಂಶಗಳ ಆಧಾರಿತ ಕಾರ್ಯಕ್ರಮಗಳಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಆರ್ಥಿಕ ಬೆಳವಣಿಗೆ ಹಾಗೂ ಜೀವನೋಪಾಯ ಕಾರ್ಯಕ್ರಮಗಳ ಅನುಷ್ಠಾನ, ಆರೋಗ್ಯ ಅಪೌಷ್ಟಿಕತೆ ನಿವಾರಣೆ, ಚುಚ್ಚುಮದ್ದುಗಳು ಹಾಕುವುದು, ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದೆ. ವಿವಿಧ ಇಲಾಖೆಯಡಿ ಕಾರ್ಯಕ್ರಮಗಳನ್ನು ಸಮನ್ವಯತೆಯಿಂದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಮೂಲ ಸೌಕರ್ಯಗಳಾದ ಬ್ಯಾಂಕ್‌ಗಳ ಸ್ಥಾಪನೆ, ಪ್ರತಿ ಗ್ರಾಮ ಪಂಚಾಯಿತಿಗೊಂದು ಎಟಿಎಂ ಸ್ಥಾಪನೆ, ಎಲ್ಲ ಗ್ರಾಮಗಳಿಗೆ ಸಾರಿಗೆ ಸೌಕರ್ಯ, ಪ್ರತಿ ಗ್ರಾಮಗಳಲ್ಲೂ ಸರ್ವಋತು ರಸ್ತೆ, ಪ್ರತಿ ಮನೆಗೂ ವಿದ್ಯುತ್‌ ವ್ಯವಸ್ಥೆ, ಪ್ರತಿ ಗ್ರಾಮಗಳಲ್ಲೂ ನಳದ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ದೂರವಾಣಿ ಸಂಪರ್ಕ, ಅಂಚೆ ಕಚೇರಿ, ಮಾರುಕಟ್ಟೆ ವ್ಯವಸ್ಥೆ, ಪಡಿತರ ಚೀಟಿ ವ್ಯವಸ್ಥೆ, ಪಶು, ಶಾಲಾ, ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಅಂಗನವಾಡಿ ಕೇಂದ್ರಗಳ ವ್ಯವಸ್ಥೆ, ಗ್ರಾಮ ಪಂಚಾಯತಿಗೊಂದು ಮಣ್ಣು ಪರೀಕ್ಷಾಕೇಂದ್ರ, ಬೀಜ ಉತ್ಪಾದನಾ ಕೇಂದ್ರ, ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘಗಳಲ್ಲಿ ಮನೆಗೊಬ್ಬರು ಸದಸ್ಯತ್ವ ಪಡೆಯುವುದು ಕಡ್ಡಾಯಗೊಳಿಸುವುದು ಇದರಲ್ಲಿ ಸೇರಿದೆ ಎಂದರು.

ಸಾಮಾನ್ಯ ಸೇವಾ ಕೇಂದ್ರ: ತಾಂತ್ರಿಕವಾಗಿ ಗ್ರಾಮಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ 224 ಗ್ರಾಮ ಪಂಚಾಯಿತಿಯ 692 ಹಳ್ಳಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸಬೇಕು. ಮೊದಲ ಹಂತವಾಗಿ 26 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಿ ಏಕಗವಾಕ್ಷಿ ಪದ್ಧತಿಯಲ್ಲಿ ಗಣಕೀಕೃತ ವ್ಯವಸ್ಥೆಯಲ್ಲಿ ರೈತರಿಗೆ ಗ್ರಾಮದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆಯಲು ಅನುಕೂಲವಾಗಬೇಕು. ಇದರಿಂದ ಸಮಯ, ಹಣ ಉಳಿತಾಯವಾಗುತ್ತದೆ ಹಾಗೂ ಅನಗತ್ಯ ಇಲಾಖಾವಾರು ಅಲೆದಾಟ ತಪ್ಪುತ್ತದೆ.

Advertisement

ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕಂದಾಯ ದಾಖಲೆಗಳು, ವಿದ್ಯುತ್‌ ಹಾಗೂ ವಾಟರ್‌ ಬಿಲ್‌ ಪಾವತಿ ಸೇರಿದಂತೆ ಅಗತ್ಯವಾದ ದಾಖಲೆಗಳನ್ನು ಪಡೆಯಲು ಹಾಗೂ ಬಿಲ್‌ಗ‌ಳ ಪಾವತಿಗೆ ಅನುಕೂಲವಾಗುವಂತೆ ಈ ಕೇಂದ್ರಗಳನ್ನು ತೆರೆಯಬೇಕು. ಈ ನಿಟ್ಟಿನಲ್ಲಿ ಗ್ರಾಮದಲ್ಲಿನ ನಿರುದ್ಯೋಗಿಗಳನ್ನು ಗುರುತಿಸಿ ಸೇವಾ ಕೇಂದ್ರಗಳಿಗೆ ಅಗತ್ಯವಾದ ಕಂಪ್ಯೂಟರ್‌, ಸ್ಕ್ಯಾನರ್‌, ನೆಟ್‌ವರ್ಕಿಂಗ್‌ ಸಿಸ್ಟ್‌ಂ ಅಳವಡಿಸಲು ಬ್ಯಾಂಕಿನಿಂದ ಸಾಲರೂಪದಲ್ಲಿ ನೆರವು ನೀಡಬೇಕು ಎಂದು ಈ ಕುರಿತಂತೆ ಕ್ರಮ ವಹಿಸಲು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಹಾಗೂ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ಲಾಸ್ಟಿಕ್‌ ನಿಷೇಧ: ಈ 26 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧಿಸಬೇಕು. ಬದಲಿಯಾಗಿ ಸೆಣಬಿನ ಬ್ಯಾಗ್‌, ಕಾಟನ್‌ ಬ್ಯಾಗ್‌ಗಳ ಬಳಕೆಗೆ ಸ್ಥಳೀಯವಾಗಿ ಉತ್ಪಾದನೆಗೆ ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡು ಸೂಕ್ತ
ತರಬೇತಿ ನೀಡುವಂತೆ ಸೂಚಿಸಿದರು. ಪ್ರತಿ ಗ್ರಾಮದಲ್ಲೂ ಕಸವಿಲೇವಾರಿ ಹಾಗೂ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಘಟಕಗಳ ಸ್ಥಾಪನೆಗೆ ಸೂಕ್ತ ಜಮೀನನ್ನು ಗುರುತಿಸಬೇಕು. ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಗುರುತಿಸಿ ಉದ್ಯೋಗ ಖಾತ್ರಿಯಡಿ ಆವರಣಗೋಡೆ ಹಾಗೂ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಸೂಚಿಸಿದರು.

ಅಲೇಮಾರಿ, ಅರೇಅಲೆಮಾರಿ, ದೇವದಾಸಿ ಹಾಗೂ ಇತರ ಕಡುಬಡವ ನಿವೇಶನರಹಿತ ಕುಟುಂಬಗಳನ್ನು ಗುರುತಿಸಿ ನಿವೇಶ ಒದಗಿಸುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಜಮೀನು ಗುರುತಿಸಬೇಕು. ಗ್ರಾಮ ಠಾಣಾ ಜಮೀನುಗಳು ಲಭ್ಯವಿಲ್ಲದಿದ್ದರೆ ಜಮೀನುಗಳನ್ನು ಖರೀದಿಸಬೇಕು. ನಿವೇಶನ ಹಂಚಿಕೆ ಮತ್ತು ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿಯ ಉಸ್ತುವಾರಿಗೆ 26 ಗ್ರಾಮ ಪಂಚಾಯತ್‌ಗಳ ಪ್ರತಿ ಹಳ್ಳಿಗೂ (88 ಹಳ್ಳಿಗಳು) ಒಬ್ಬರಂತೆ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಜಿಲ್ಲಾ ಪಂಚಾಯಿತಿ ಸಹ ಕಾರ್ಯದರ್ಶಿ ಜಾಫರ್‌ ಸುತಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ, ಅಲ್ಪಸಂಖ್ಯಾತರ ಕಲ್ಯಾಣಾ ಧಿಕಾರಿ ಗೋಪಾಲ ಲಮಾಣಿ, ಸಮಾಜ ಕಲ್ಯಾಣಾ ಧಿಕಾರಿ ಚೈತ್ರಾ, ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಕದರಪ್ಪ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜೋಷಿ ಒಳಗೊಂಡಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next