Advertisement

ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

04:12 PM Apr 20, 2018 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಪಕ್ಷದ ಮುಖಂಡ ಎಂ.ಆರ್‌.ಪಾಟೀಲರಿಗೆ ನೀಡಬೇಕೆಂದು ಒತ್ತಾಯಿಸಿ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದರೆ, ಟಿಕೆಟ್‌ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆಂಬಲಿಗರು ಬೆದರಿಕೆಯೊಡ್ಡಿದ್ದಾರೆ.

Advertisement

ಗುರುವಾರ ರಾತ್ರಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರ ನಿವಾಸಕ್ಕೆ ಆಗಮಿಸಿದ ಪಾಟೀಲರ ಬೆಂಬಲಿಗರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ಕಲ್ಮೇಶ ಬೆಳವಟಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲೆತ್ನಿಸಿದಾಗ ತಡೆಯಲಾಯಿತು. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಎಂ.ಆರ್‌.ಪಾಟೀಲರ ಬೆಂಬಲಿಗರು ಜಗದೀಶ ಶೆಟ್ಟರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿರುವ ವಿಷಯ ತಿಳಿದು ಸಂಸದ ಪ್ರಹ್ಲಾದ ಜೋಶಿ ಶೆಟ್ಟರ ನಿವಾಸಕ್ಕೆ ದೌಡಾಯಿಸಿದರು. ಟಿಕೆಟ್‌ ನೀಡಲೇಬೇಕು ಎಂಬ ಕೂಗು ಹೆಚ್ಚಾದ ಹಿನ್ನೆಲೆಯಲ್ಲಿ ಜಗದೀಶ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ ಅವರು ಗೌಪ್ಯಸಭೆ ನಡೆಸಿದರು. ನಂತರ ಪಾಟೀಲ ಬೆಂಬಲಿಗ ಪ್ರಮುಖರನ್ನು ಕರೆದು ಚರ್ಚಿಸಿದರು.

ಪ್ರಮುಖರು ಹೊರ ಬಂದು ಟಿಕೆಟ್‌ ನೀಡುವ ಬಗ್ಗೆ ನಾಯಕರು ಭರವಸೆ ನೀಡಿದ್ದು, ಪ್ರತಿಭಟನೆ ಕೈಬಿಟ್ಟು ಕ್ಷೇತ್ರಕ್ಕೆ ಹಿಂದಿರುಗೋಣ ಎಂದು ಹೇಳಿದರಾದರೂ, ಪ್ರಮುಖರ ಮಾತನ್ನು ನಂಬದ ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿ ಫಾರಂ ನೀಡದ ಹೊರತು ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ತಾಯಿ-ಪತ್ನಿ ಮನವಿ: ಎಂ.ಆರ್‌.ಪಾಟೀಲರ ಪತ್ನಿ ಶಶಿಕಲಾ ಪಾಟೀಲ ಹಾಗೂ ತಾಯಿ ಶಾರದಾಬಾಯಿ
ಪಾಟೀಲ ಹಾಗೂ ಕುಟುಂಬದವರು ಟಿಕೆಟ್‌ ನೀಡುವಂತೆ ಜಗದೀಶ ಶೆಟ್ಟರ ಅವರಿಗೆ ಕೈ ಮುಗಿದು
ಬೇಡಿಕೊಂಡರು. ಇದೇ ಸಂದರ್ಭದಲ್ಲಿ ಪಾಟೀಲ ಬೆಂಬಲಿಗರು ಜಗದೀಶ ಶೆಟ್ಟರ ಅವರ ಕಾಲಿಗೆ ಬಿದ್ದು ಟಿಕೆಟ್‌ ನೀಡುವಂತೆ ಒತ್ತಾಯಿಸಿದರು.

Advertisement

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್)ಪಡೆ ಜಗದೀಶ ಶೆಟ್ಟರ ಅವರ ನಿವಾಸದ ಬಳಿ ಜಮಾಯಿಸಿತ್ತಾದರೂ, ಸಂಸದ ಪ್ರಹ್ಲಾದ ಜೋಶಿ ಇವರು ನಮ್ಮ ಪಕ್ಷದ ಕಾರ್ಯಕರ್ತರು. ಅವರನ್ನು ಹಿಂದಕ್ಕೆ ಕಳುಹಿಸಿ ಎಂದು ಪೊಲೀಸರಿಗೆ ತಿಳಿಸಿದರು. ಪ್ರತಿಭಟನೆ ಕೈಬಿಟ್ಟು ತೆರಳುವಂತೆ ಎಂ.ಆರ್‌.ಪಾಟೀಲ ಬೆಂಬಲಿಗರು ಹಾಗೂ ಕುಟುಂಬದವರಿಗೆ ಮನವಿ ಮಾಡಿದರು.

ಲಾಠಿ ಪ್ರಹಾರ ಮಾಡಿದರೂ ಸರಿಯೇ ಇಲ್ಲಿಂದ ನಾವು ಕದಲುವುದಿಲ್ಲ. ಎಂ.ಆರ್‌.ಪಾಟೀಲರಿಗೆ ಟಿಕೆಟ್‌ ಘೋಷಿಸಬೇಕು. ಬಿ ಫಾರಂ ನೀಡಬೇಕೆಂದು ಇದಕ್ಕೂ ಪಾಟೀಲ ಬೆಂಬಲಿಗರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದರು.

ಶೆಟ್ಟರ ಅಸಮಾಧಾನ: ಎಂ.ಆರ್‌.ಪಾಟೀಲರಿಗೆ ಟಿಕೆಟ್‌ ನೀಡಬೇಕೆಂಬುದು ನಮ್ಮ ಇಚ್ಚೆಯಾಗಿದೆ. ಈ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಯುತ್ತಿದೆ. ನಿಮ್ಮ ಮನವಿಗೆ ನಾವು ಸ್ಪಂದಿಸಿದ್ದೇವೆ. ಯಾವುದೇ ವರ್ತನೆ ಅತಿರೇಕವಾಗುವುದು ಸರಿಯಲ್ಲ ಎಂದು ಜಗದೀಶ ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದರು.

ಶೆಟ್ಟರ ಜತೆ ನಿಂಬಣ್ಣವರ ಚರ್ಚೆ
ಕುಂದಗೋಳದಿಂದ ಎಂ.ಆರ್‌.ಪಾಟೀಲರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ಜಗದೀಶ ಶೆಟ್ಟರ ಅವರ ನಿವಾಸಕ್ಕೆ ಆಗಮಿಸುವ ಕೆಲ ಸಮಯ ಮೊದಲು ಕಲಘಟಗಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ಎಂ.ನಿಂಬಣ್ಣವರ, ಶೆಟ್ಟರ ನಿವಾಸಕ್ಕೆ ಆಗಮಿಸಿ ಚರ್ಚಿಸಿದರು. ಎಂ.ಆರ್‌.ಪಾಟೀಲರ ಬೆಂಬಲಿಗರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ನಿಂಬಣ್ಣವರ ಚರ್ಚೆ ಅಪೂರ್ಣಗೊಳಿಸಿ ಅಲ್ಲಿಂದ ತೆರಳಿದರು.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಪಡೆಯಲು ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಹಾಗೂ ಎಂ.ಆರ್‌.ಪಾಟೀಲರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಬ್ಬರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next