Advertisement

ಕೆರೆಯಂಗಳದಲ್ಲಿ ಕೋಳಿ ತ್ಯಾಜ್ಯ

03:07 PM Jul 23, 2023 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ನಾಗರಕೆರೆಯ ಅಂಗಳದಲ್ಲಿ ಕೋಳಿ ಮಾಂಸದ ತ್ಯಾಜ್ಯ ಹಾಗೂ ಕಟ್ಟಡ ಹಾಗೂ ಇತರೆ ತ್ಯಾಜ್ಯಗಳನ್ನು ಹಾಕಲಾಗುತ್ತಿದ್ದು, ಪರಿಸರ ಪ್ರೇಮಿ ಗಳ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಡಿ.ಕ್ರಾಸ್‌ ರಸ್ತೆ ಸಮೀಪದ ಕೆರೆಯಂಗಳದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುವ ಪರಿಪಾಠ ಹೆಚ್ಚಾಗಿದೆ.

Advertisement

ಇತಿಹಾಸ ಪ್ರಸಿದ್ಧ ಕೆರೆ: ದೊಡ್ಡಬಳ್ಳಾ ಪುರದ ನಾಗರ ಕೆರೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ವ್ಯಾಸ ರಾಜರ ಶಿಷ್ಯ ನಾಗಪ್ಪ ತಾನು ವಾಸ ವಾಗಿದ್ದ ಕೆರೆಯನ್ನು ವ್ಯಾಸ ರಾಜ ರಿಗೆ ಗುರು ಕಾಣಿಕೆಯಾಗಿ ನೀಡಿ, ಕೆರೆಯ ಉಸ್ತುವಾರಿ ಯನ್ನು ಸಹ ನೋಡಿ ಕೊಂಡನು. ಇದನ್ನು ಶ್ಲಾಘಿಸಿದ ವ್ಯಾಸ ರಾಜರು ಈ ಕೆರೆಗೆ ನಾಗಪ್ಪಯ್ಯನ ಕೆರೆ ಎಂದು ನಾಮಕರಣ ಮಾಡಿದರು.

ಅದು ಕ್ರಮೇಣ ನಾಗಪ್ಪ ಕೆರೆಯಾಗಿ ಹಾಗೂ ಈ ಕೆರೆಯಲ್ಲಿ ನಾಗರ ಹಾವು ಗಳು ಹೆಚ್ಚಾಗಿ ಇದ್ದುದರಿಂದ ನಾಗರ ಕೆರೆಯಾಗಿ ಪ್ರಚ ಲಿತವಾಯಿ ತೆಂದು ತಿಳಿದು ಬರುತ್ತದೆ. ಕೆರೆಯ ಜಲಾನಯನ ಪ್ರದೇಶ 7.60 ಚದರ ಕಿಮೀ. ಜಲಾವೃತ ಪ್ರದೇಶ 190 ಎಕರೆ, ಕೆರೆ ಏರಿಯ ಉದ್ದ 1194 ಮೀಟರ್‌. ಕೆರೆಯ ಅಚ್ಚುಕಟ್ಟು 60.70 ಹೆಕ್ಟೇರ್‌ ಆಗಿದ್ದು, 20 ಎಕರೆಗೂ ಹೆಚ್ಚು ಎಕರೆ ಒತ್ತುವರಿಯಾಗಿದೆ ಎನ್ನಲಾಗಿದೆ. ನಾಗರ ಕೆರೆ ಸಣ್ಣ ನೀರಾ ವರಿ ಕೆರೆಯಾಗಿದ್ದು, ನಗರಸಭಾ ವ್ಯಾಪ್ತಿಗೆ ಒಳಪಡುತ್ತದೆ. ಅರ್ಕಾವತಿ ನದಿ ಹರಿಯುವ ಪ್ರದೇ ಶದ ಮೊದಲ ದೊಡ್ಡಕೆರೆಯಾಗಿದೆ.

ನಾಗರಕೆರೆಯ ಸ್ಥಿತಿ: ನಾಗರಕೆರೆ ಅಂಗಳದಲ್ಲಿ ಹಳೆ ಮನೆಗಳನ್ನು ಕಿತ್ತುಹಾಕಿ ಉಳಿದಿ ರುವ ಸಿಮೆಂಟ್‌ ಇಟ್ಟಿಗೆ, ತ್ಯಾಜ್ಯ ಮಣ್ಣಿನ ರಾಶಿಗಳನ್ನೇ ಕಾಣ ಬಹುದಾಗಿದೆ. ಕೆರೆಯಲ್ಲಿ ಹೂಳು ತುಂಬಿ ಕೊಂಡಿದ್ದು, ಗಿಡಗಂಟೆಗಳು ಹೇರಳವಾಗಿ ಬೆಳೆದಿವೆ. ನೀರು ನಿಲ್ಲಲು ಆಸ್ಪದವೇ ಇಲ್ಲದಂತಾಗಿದೆ. ನಗರದ ವಿವಿದೆಡೆಗಳಿಂದ ಕೋಳಿ ಮಾಂಸದ ತ್ಯಾಜ್ಯಗಳನ್ನು ತಂದು ಕೆರೆಯಲ್ಲಿ ಸುರಿಯ ಲಾಗುತ್ತಿದೆ. ಇದರಿಂದ ಕೆಟ್ಟ ವಾಸನೆ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸಿಕೊಂಡು ಪರಿಸರ ಕಲುಷಿತ ವಾಗುತ್ತಿದೆ. ಇದಲ್ಲದೇ ಕಸ ಕಡ್ಡಿಗಳು ಸಹ ಕೆರೆಗೆ ಸೇರುತ್ತಿದೆ. ಪರಿಸರಾಸಕ್ತರ ಒತ್ತಾಯಕ್ಕೆ ಮಣಿದ ನಗರಸಭೆಯಿಂದ ನಾಗರಕೆರೆಯ ವಾಕಿಂಗ್‌ ಪಾಥ್‌ ರಸ್ತೆ, ಹಾಗೂ ಕೆರೆಯಂಗಳದಲ್ಲಿ ಇತ್ತೀಚೆಗಷ್ಟೇ ಕೆರೆಯಲ್ಲಿ ಹಾಗೂ ಸುತ್ತಮುತ್ತ ಯಾವುದೇ ಕಸ, ತ್ಯಾಜ್ಯಗಳನ್ನು ಹಾಕದಂತೆ ಸೂಚನಾ ಫಲಕ ಹಾಕಿದೆ. ಸೂಚನಾ ಫಲಕಗಳು ಹಾಕಿದ್ದರೂ ಕ್ಯಾರೆ ಎನ್ನದೆ ಕಸ ಸುರಿಯಲಾಗುತ್ತಿದೆ. ನಗರಸಭೆ ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿ ತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಸದಸ್ಯ ನಾಗರಾಜ್‌.

ಪೊಲೀಸ್‌ ಬೀಟ್‌ ವ್ಯವಸ್ಥೆ ಮಾಡಿ: ನಾಗರಕೆರೆಗೆ ಹೊಂದಿ ಕೊಂಡಂತೆ ಆಂಜನೇಯ ದೇವಾನ ಲಯ, ಕೋಡಿ ಪ್ರದೇಶಗಳಲ್ಲಿ ಸಂಜೆಯಾಗುತ್ತಿದ್ದಂತೆ, ಮೋಜು, ಮಸ್ತಿ ಪಾರ್ಟಿಗಳು ನಡೆಯುತ್ತಿದ್ದು, ಇವರು ಮದ್ಯದ ಬಾಟಲ್‌ ಹಾಗೂ ಇತರೆ ಕಸವನ್ನು ಸುರಿಯುತ್ತಿದ್ದಾರೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ಪೊಲೀಸ್‌ ಬೀಟ್‌ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ನಾಗರಕೆರೆಗೆ ಬರುವ ವಾಯು ವಿಹಾರಿಗಳು.

Advertisement

ತಿಂಗಳಿಗೊಮ್ಮೆ ಸಭೆ ಕರೆಯಿರಿ: ನಗರದ ಜೀವನಾಡಿ ಯಾದ ನಾಗರಕೆರೆ ಕಲುಷಿತವಾಗುತ್ತಿದ್ದು, ಅಭಿವೃದ್ಧಿ ಕಾಣದೇ ದಿನೇ ದಿನೇ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಈ ದಿಸೆಯಲ್ಲಿ ನಾಗರಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಸಾರ್ವಜನಿಕರ ಸಭೆ ನಡೆಸುವ ಮೂಲಕ ಹೆಚ್ಚಿನ ಒತ್ತು ನೀಡಬೇಕು ಎಂದು ತಹಶೀ ಲ್ದಾರರಿಗೆ ಮನವಿ ಮಾಡಲಾಗಿದೆ. ಈ ಹಿಂದೆ ಕರೆದಿದ್ದ ಸಭೆ ಅಪೂರ್ಣವಾಗಿ ಯಾವುದೇ ಗಂಭೀರ ಚರ್ಚೆ ಯಾಗಲಿಲ್ಲ. ಇಲ್ಲಿನ ಜೀವ ವೈವಿಧ್ಯತೆಯ ಕುರಿತು ಈಗಾಗಲೇ ಸಮೀಕ್ಷೆ ನಡೆಸಿ ವರದಿಯನ್ನು ನಗರಸಭೆಗೆ ಸಲ್ಲಿಸಲಾಗಿದೆ.

ಕೆರೆ ಅಂಗಳದಲ್ಲಿಯೇ ಹಾಕಲಾಗಿರುವ ಒಳ ಚರಂಡಿ ಪೈಪ್‌ಲೈನ್‌ ಗಳನ್ನು ತೆರವು ಮಾಡುವ ಪ್ರಕ್ರಿಯೆಯಲ್ಲಿ ಇದುವರೆಗೂ ಯಾವುದೇ ರೀತಿಯ ಪ್ರಗತಿಯು ಕಂಡಿಲ್ಲ. ಪರಿಸರ ನಿಯಂ ತ್ರಣ ಮಂಡಳಿ ವತಿಯಿಂದ ಕೆರೆಯ ನೀರಿನ ಸ್ವತ್ಛತೆ ಕುರಿತಂತೆ ನಿರಂತರವಾಗಿ ಪರೀಕ್ಷೆ ನಡೆಸುವಂತಾಗಬೇಕು. ಕೆರೆಯ ಸುತ್ತಲು ನಡೆದಿರುವ ಒತ್ತುವರಿ ತೆರವಿಗೆ ಆದ್ಯತೆ ಮೇರೆಗೆ ಹೆಚ್ಚಿನ ಒತ್ತು ನೀಡಬೇಕು ಎನ್ನುತ್ತಾರೆ ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯ ಚಿದಾನಂದ್‌, ಯಲ್ಲಪ್ಪ.

ನಾಗರೆಕೆರೆಯ ಏರಿಯನ್ನು ಆಗಾಗ ಸ್ವತ್ಛ ಮಾಡಲಾಗುತ್ತಿದೆ. ಕೆರೆಯಲ್ಲಿ ಹಾಗೂ ಸುತ್ತಮುತ್ತ ಯಾವುದೇ ಕಸ, ತ್ಯಾಜ್ಯಗಳನ್ನು ಹಾಕದಂತೆ ಸೂಚನಾ ಫಲಕ ಹಾಕಿದೆ. ಕಸ ಹಾಕಲು ಕಸದ ಡಬ್ಬಿಗಳನ್ನು ಸಹ ಅಳವಡಿಸಲಾಗಿದೆ. ಉಲ್ಲಂಘನೆ ಮಾಡುವವರ ಮೇಲೆ ದೂರು ನೀಡಲು ಮೊಬೈಲ್‌ ಸಂಕ್ಯೆಗಳನ್ನು ಹಾಕಲಾಗಿದೆ. ಸಾರ್ವಜನಿಕರು ಈ ಬಗ್ಗೆ ನಗರಸಭೆಗೆ ದೂರು ನೀಡಬಹುದಾಗಿದೆ. ಕೆರೆಯಲ್ಲಿ ಕಸ ಹಾಕುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ●ಈರಣ್ಣ, ನಗರಸಭೆಯ ಪರಿಸರ ವಿಭಾಗದ ಸಹಾಯಕ ಆಯುಕ್ತ

– ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next