ಬೀದರ: ಕೃಷಿಯೊಂದಿಗೆ ಕೋಳಿ ಸಾಕಾಣಿಕೆ ಗ್ರಾಮೀಣ ಜನರ ಮುಖ್ಯ ಕಸುಬಾಗಿದ್ದು, ಸರಿಯಾದ ಮಾರುಕಟ್ಟೆ ಮಾಡುವ ಅರಿವಿದ್ದರೆ ಹೆಚ್ಚು ಆದಾಯ ಪಡೆಯಬಹುದು ಎಂದು ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಡಾ| ಓಂಕಾರ ಪಾಟೀಲ ಹೇಳಿದರು.
ಜನವಾಡಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗಾಗಿ ಹಮ್ಮಿಕೊಂಡಿರುವ ಆಧುನಿಕ ಕೋಳಿ ಸಾಕಾಣಿಕೆ ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಶುಪಾಲನೆ ಮತ್ತು ಕೃಷಿ ಇವೆರಡು ಒಂದೇ ನಾಣ್ಯದ ಎರಡು ಮುಖಗಳಂತೆ. ಜಮೀನು ಇದ್ದರೆ ಕೃಷಿ ಮಾಡಬಹುದು. ಆದರೆ, ಜಮೀನು ಇಲ್ಲದೇ ಮಾಡುವ ವ್ಯವಸಾಯ ಎಂದರೆ ಕೋಳಿ ಸಾಕಾಣಿಕೆ. ಇದರಲ್ಲಿ ಬಹುಮುಖ್ಯವಾದದ್ದು ಮಾರುಕಟ್ಟೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಆರ್.ಎಲ್. ಜಾಧವ ಮಾತನಾಡಿ, ಇಂದಿನ ದಿನಗಳಲ್ಲಿ ಪೌಷ್ಟಿಕ ಆಹಾರದ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿ ಮೊಟ್ಟೆ ಬಹುಮುಖ್ಯವಾದ ಸಂಪೂರ್ಣ ಸಮತೋಲನ ಆಹಾರವಾಗಿದೆ. ಹಾಗಾಗಿ ವೈಜ್ಞಾನಿಕ ಮಾಹಿತಿ ಪ್ರಕಾರ ಸಂಪೂರ್ಣ ಆಹಾರಕ್ಕಾಗಿ ಪ್ರತಿಯೊಬ್ಬರೂ ವರ್ಷಕ್ಕೆ 182ರಂತೆ ಮೊಟ್ಟೆ ಮತ್ತು 10.8 ಕೆ.ಜಿ ಮಾಂಸ ಸೇವಿಸಬೇಕು. ಆದರೆ ಹೆಚ್ಚು ಜನರಿಗೆ ಸಂಪೂರ್ಣ ಆಹಾರ ಪಡೆದುಕೊಳ್ಳುತ್ತಿಲ್ಲ ಎಂದರು.
ಕೆವಿಕೆ ಪಶು ವಿಜ್ಞಾನಿ ಡಾ| ಅಕ್ಷಯಕುಮಾರ ಪ್ರಾಸ್ತಾವಿಕ ಮಾತನಾಡಿ, ಕೋಳಿ ಸಾಕಾಣಿಕೆ ಸುಲಭ ಉದ್ಯಮ. ಕೋಳಿ ಸಾಕಾಣಿಕೆಗೆ ಬೇಕಾದ ಸ್ಥಳ ಬಹಳ ಕಡಿಮೆ, ಆದ್ದರಿಂದ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಆಹಾರ ಧಾನ್ಯ ಉಪಯೋಗಿಸಿಕೊಂಡು ಪೌಷ್ಟಿಕ ಮಾಂಸ ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ ಪ್ರಥಮ ಸ್ಥಾನದಲ್ಲಿದೆ. ದಿನ ಬಳಕೆಯಲ್ಲಿರುವ ಏಕದಳ ಧಾನ್ಯಗಳಾದ ಜೋಳ, ಮುಸುಕಿನ ಜೋಳ ಮುಂತಾದ ಧಾನ್ಯಗಳನ್ನು ಕೋಳಿ ಆಹಾರದ ತಯಾರಿಕೆಯಲ್ಲಿ ಉಪಯೋಗಿಸಬಹುದು ಎಂದು ಸಲಹೆ ನೀಡಿದರು.
ತಾಂತ್ರಿಕ ತರಬೇತಿಯಲ್ಲಿ ಪಶು ವೈದ್ಯಾಧಿ ಕಾರಿ ಡಾ| ದೀಪಕ ಬಿರಾದಾರ ಕೋಳಿಗಳಲ್ಲಿ ಆಹಾರ ಪದ್ಧತಿ, ಲಸಿಕೆ ಕಾರ್ಯಕ್ರಮ ಹಾಗೂ ಕಾವು ಕೊಡುವಿಕೆ ಬಗ್ಗೆ ವಿವರಿಸಿದರು. ಕೃಷಿ ವಿಜ್ಞಾನಿ ಡಾ| ರಾಜೇಶ್ವರಿ ಆರ್. ನಿರೂಪಿಸಿದರು.