Advertisement
ತಲೆ ಮೇಲೆ ಮರಗಮ್ಮನನ್ನು ಮೂರ್ತಿ ಹೊತ್ತು ತಲೆತಲಾಂತರದ ಹರಕೆಯ ಹುರಿಯೊಳಗೆ ಬೆಂದು ಊರೂರು ಅಲೆಯುತ್ತಿದ್ದ ಮರಗಮ್ಮನ ಆಡಿಸುವವರ ಕಲೆ ಕಣ್ಮರೆಯಾಗುತ್ತಿದೆ. ಮೈಕೈ ರಕ್ತಗಾಯ ಮಾಡಿಕೊಂಡು ಗೆಜ್ಜೆನಾದದ ಸದ್ದಿಗೆ ಹೆಜ್ಜೆಯಿಡುತ್ತ ಮನರಂಜನೆ ನೀಡುತ್ತಿದ್ದ ಪೋತುರಾಜರು ಇತಿಹಾಸದ ಪುಟ ಸೇರಿಕೊಳ್ಳುತ್ತಿದ್ದಾರೆ.
Related Articles
Advertisement
ಮರುಗಮ್ಮನನ್ನು ಹೊತ್ತು ತಿರುಗುತ್ತಿದ್ದ ಈ ಅಲೆಮಾರಿ ಜನರು ಪೋತುರಾಜನ ಪೌರಾಣಿಕ ಕಥೆಯನ್ನು ಜೀವಂತವಾಗಿಟ್ಟಿದ್ದರು. ಮರುಗಮ್ಮನ ಸ್ಥುತಿ ಹಾಡುತ್ತ ಗಂಡಸರು ಚಾವಟಿಯಿಂದ ಬರಿ ಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಿದ್ದರು. ಈಗ ಈ ಕಲಾವಿದರ ಬದುಕು ಮಗ್ಗಲು ಬದಲಿಸಿದೆ. ಭಿಕ್ಷಾಟನೆಯಿಂದ ಹೊರಬಂದ ಕಾರಣ ಪೋತುರಾಜನ ವೇಷದ ಕಲೆ ಅಳಿಯಲು ಶುರುವಾಗಿದೆ. ರಂಗಾಯಣ ಮತ್ತು ಸಾಂಸ್ಕೃತಿಕ ಇಲಾಖೆಗಳು ಪೋತುರಾಜನ ಕಲೆ ಉಳಿಸಲು ರಂಗ ಸಿದ್ಧಗೊಳಿಸಬೇಕು ಎಂಬುದು ಜನಪದರ ಒತ್ತಾಸೆಯಾಗಿದೆ.
ಭಯ ಹುಟ್ಟಿಸುವ ಪೋತುರಾಜನ ವೇಷ-ಭೂಷಣ ಪೋತುರಾಜರ ವೇಷ ಭೂಷಣ ನೋಡಲು ಭಯಂಕರವಾಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಮುಖಕ್ಕೆ ಅರಿಶಿಣ, ಹಣೆಗೆ ದೊಡ್ಡ ವೃತ್ತಾಕಾರದ ಕುಂಕುಮ, ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿಣ ಮತ್ತು ಕುಂಕುಮ ಭಂಡಾರದ ಲೇಪನ, ಕೈ ರಟ್ಟೆಗೆ ಬೆಳ್ಳಿ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಗೆಜ್ಜೆ ಸರ, ನೀರಿಗೆಯಾಗಿ ಕಟ್ಟಿದ ಸೀರೆಯೇ ಉಡುಪು, ಕೈಯಲ್ಲಿ ಚಾವಟಿ.
ಆತನ ಜತೆಗೆ ಬರುವ ಹೆಣ್ಣಿನದ್ದು (ಆತನ ಹೆಂಡತಿ) ಬೇರೆಯದ್ದೇ ವೇಷ. ಮಾಮೂಲಿ ಹೆಂಗಸಿನ ವೇಷವಾದರೂ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ವಿವಿಧ ಬೆಳ್ಳಿಯ ಒಡೆವೆಗಳಿರುತ್ತವೆ. ನಡುವಿನಲ್ಲಿ ಒಂದು ಕಡೆ ಬಟ್ಟೆಯಲ್ಲಿ ತೂಗು ಹಾಕಿಕೊಂಡ ಮಗು, ಇನ್ನೊಂದು ಕಡೆ ಭಿಕ್ಷೆ ಸಂಗ್ರಹಿಸುವ ಸೆರಗಿನ ಚೀಲ, ಕುತ್ತಿಗೆಗೆ ನೇತು ಬಿದ್ದ ಉರುಮೆ ವಾದ್ಯ, ಈ ವಾದ್ಯದ ಒಂದು ಕಡೆಯಿಂದ ಬಡೆಯುತ್ತ ಇನ್ನೊಂದು ಕಡೆಯಿಂದ ಜಜ್ಜುತ್ತಾರೆ. ಇದೊಂಥರ ಪೋತುರಾಜನಿಗಾಗಿಯೇ ವಿಶಿಷ್ಟ ಸಂಗೀತ ನೀಡುವ ವಾದ್ಯ ಎಂದು ಗುರುತಿಸಬಹುದಾಗಿದೆ.
ಈ ಸದ್ದು ಕೇಳಿದರೆ ಸಾಕು ಪೋತುರಾಜ ಬಂದನೆಂದೇ ಅರ್ಥ. ಇವರು ತೊಡುವ ವೇಷ ಭೂಷಣ ವಿಚಿತ್ರವಾಗಿದ್ದರೂ ಪ್ರದರ್ಶಿಸುವ ಕಲೆ ಮಾತ್ರ ಜನಪದರ ಶ್ರೇಷ್ಠತೆ ಸಾರುತ್ತದೆ. ಆದರೆ ಈ ಕಲೆ ಈಗ ಅಪರೂಪ ಎಂಬಂತೆ ಆಗಾಗ ಕಣ್ಣಿಗೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಈ ಪೋತುರಾಜರು ದಂತಕಥೆಯಾಗುವುದರಲ್ಲಿ ಅನುಮಾನವಿಲ್ಲ.
–ಮಡಿವಾಳಪ್ಪ ಹೇರೂರ