ಬೆಂಗ್ಳೂರಲ್ಲಿ ಎಲ್ಲವೂ ಫ್ಯಾಶನ್‌ಮಯ. ಸಿಲಿಕಾನ್ ಸಿಟಿ ಮಂದಿಯ ಈ ಟೇಸ್ಟ್ ಅನ್ನೇ ತಮ್ಮ ಕಲೆಯೊಳಗೆ ಬೆರೆಸಿರುವ ಇಲ್ಲಿನ ಕುಂಬಾರರು, ಆಧುನಿಕ ವಿನ್ಯಾಸಗಳ ಮಡಕೆಯನ್ನು ಅಚ್ಚುಮಾಡುತ್ತಿದ್ದಾರೆ. ಇಲ್ಲಿ ಸೃಷ್ಟಿಯಾಗುವ ಅದೆಷ್ಟೋ ಸಹಸ್ರ ಮಡಕೆಗಳು ಕೇವಲ ಅಡುಗೆಮನೆಗಷ್ಟೇ ಹೋಗಿ ಕೂರುವುದಿಲ್ಲ. ಶೋಕೇಸ್ ಒಳಗೆ, ಮನೆಯ ಹೊರಗಿನ ವರಾಂಡದ ಪಾಟ್ ಆಗಿ, ಇನ್ನೂ ಅನೇಕ ಮಾದರಿಗಳಾಗಿ ಗ್ರಾಹಕರನ್ನು ಸೆಳೆಯುತ್ತಿವೆ.
ದೂರದಿಂದ ಬಂದವರು..!
ಅಂದಹಾಗೆ, ಪಾಟರಿಟೌನ್‌ನಲ್ಲಿರುವ ಕುಂಬಾರರು ತಮಿಳುನಾಡು ಹಾಗೂ ಆಂಧ್ರದ ಮೂಲದವರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಂಗಳೂರಿಗೆ ವಲಸೆ ಬಂದವರು. ಇಲ್ಲಿ ನೆಲೆನಿಂತು ಸುಮಾರು 150 ವರ್ಷಗಳ ಮೇಲೆಯೇ ಆಯಿತು ಎಂದು ಹಿಂದಿನ ಪೀಳಿಗೆಯ ನೆನಪನ್ನು ಹೊರಹಾಕುತ್ತಾರೆ. ಬ್ರಿಟಿಷ್ ಸರ್ಕಾರವು ಅಂದು ಬೆಂಗಳೂರಿನಲ್ಲಿ ಕುದುರೆ ಕಟ್ಟುತ್ತಿದ್ದ ಜಾಗವನ್ನು ಕುಂಬಾರರಿಗೆ ವಾಸಮಾಡಲು ನೀಡಿ, ಅಲ್ಲಿ ವಸತಿ ಗೃಹವನ್ನು ನಿರ್ಮಿಸಿ ಕೊಟ್ಟಿತಂತೆ. ಅಲ್ಲಿಂದ ಇದು ಪಾಟರಿಟೌನ್ ಆಗಿದೆ.
ಮಡಕೆ ಅಲ್ಲದೇ…
ಇವರ ಬದುಕು ಮಡಕೆಗಷ್ಟೇ ಸೀಮಿತವಾಗಿಲ್ಲ. ಗಣೇಶನ ಮೂರ್ತಿ, ಬಗೆ ಬಗೆಯ ಮಣ್ಣಿನ ದೀಪವನ್ನೂ ಸಿದ್ಧಪಡಿಸುತ್ತಾರೆ. ತಂದೂರಿ ರೋಟಿಯನ್ನು ಮಾಡುವ ತಂದೂರಿ ಪಾಟ್‌ಗಳನ್ನೂ ಅತ್ಯಾಕರ್ಷಕವಾಗಿ ರೆಡಿಮಾಡುತ್ತಾರೆ. “ಸರ್ಕಾದ ಈಗಾಗಲೇ ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಯನ್ನು ಬ್ಯಾನ್ ಮಾಡಿದ್ದು, ಕುಂಬಾರರು ಮಾಡುವ ಮಣ್ಣಿನ ಗಣೇಶ ಮೂರ್ತಿಗೆ ಈಗ ಬೇಡಿಕೆಯೂ ಹೆಚ್ಚಾಗಿದೆ’ ಎನ್ನುತ್ತಾರೆ ಮಡಕೆ ವ್ಯಾಪಾರಿ ಮುರಳಿ ಬೋಜಿ.
Advertisement
ನವಪೀಳಿಗೆಯನ್ನು ಸೆಳೆದ ಮಡಕೆ– ಮದ್ವೆ, ಹಬ್ಬಹರಿದಿನ ಹಾಗೂ ಸಮಾರಂಭಗಳಲ್ಲಿ ತಂಪಾದ ನೀರು ಕುಡಿಯಲು ನೀಡುವುದು ವಾಡಿಕೆ. ಅದಕ್ಕಾಗಿ ಮಹಾನಗರದಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚುತ್ತಿವೆ.
– ರೆಸ್ಟೋರೆಂಟ್‌ಗಳಲ್ಲೂ ಫುಡ್ ಸರ್ವಿಂಗ್‌ಗೆ ಪಾಟ್ ಬಳಕೆಯಾಗುತ್ತಿದೆ.
– ವಿಶಿಷ್ಟ ಪಾಟ್ ಆಗಿ, ಶೋಕೇಸ್‌ನ ಅಲಂಕಾರಿಕ ಮಾದರಿಗಳಾಗಿಯೂ ಬಳಕೆಯಾಗುತ್ತಿದೆ.
ಬೆಂಗ್ಳೂರೆಂಬ ಕಾಂಕ್ರೀಟ್ ನಗರಿಯಲ್ಲಿ ಮಡಕೆ ತಯಾರಿಸಲು ಮಣ್ಣು ಎಲ್ಲಿ ಸಿಗುತ್ತೆ? ಎಂದು ಕೇಳಿದಾಗ, ಕುಂಬಾರ ಪ್ರಕಾಶ್ ಜಿ. ಹೇಳಿದ್ದಿಷ್ಟು; “ತಯಾರಿಕೆಗೆ ಅವಶ್ಯಕವಿರುವ ಜೇಡಿ ಮಣ್ಣನ್ನು ಬೆಂಗಳೂರಿನ ಸುತ್ತಮುತ್ತಲ ಹಳ್ಳಿಗಳಿಂದ ತರಿಸಿಕೊಳ್ಳುತ್ತೇವೆ. ಒಂದು ಮಿನಿ ಲಾರಿಯಲ್ಲಿ ಮಣ್ಣಿನ ಲೋಡಿಗೆ 3-4 ಸಾವಿರ ರೂ. ಬೆಲೆ ಇದೆ. ಮಣ್ಣಿನ ಮಾದರಿ ಮಾಡಿದ ನಂತರ ಅದನ್ನು ಒಣಗಿಸಲು ಬಿಸಿಲಿನ ಕೊರತೆಯೂ ಈ ಮಹಾನಗರದಲ್ಲಿದೆ. ಅದಕ್ಕಾಗಿ ಮಾದರಿಗಳನ್ನು 8 ಗಂಟೆ ಕಾಲ ಬೆಂಕಿಯ ಉರಿಯಲ್ಲಿ ಚೆನ್ನಾಗಿ ಕಾಯಿಸುತ್ತೇವೆ’. ಲೇಖನ: ಅನಿಲ್ ಕುಮಾರ್ ಮೂಡಬಾಗಿಲು