ನರಗುಂದ: ಅರ್ಧ ಕಿಲೋ ಮೀಟರ್‌ಗೆ ಒಂದರಂತೆ ಆರೇಳು ಅಪಾಯಕಾರಿ ತಿರುವುಗಳು, ಸಾಲದೆಂಬಂತೆ ಹೆಜ್ಜೆ ಹೆಜ್ಜೆಗೂ ಬಾಯಿ ತೆರೆದು ಅಪಾಯಕ್ಕೆ ಆಹ್ವಾನಿಸುತ್ತಿರುವ ತಗ್ಗು ಗುಂಡಿಗಳು. ಇದು ನರಗುಂದ-ಗದಗ ರಾಜ್ಯ ಹೆದ್ದಾರಿಯ ಅವ್ಯವಸ್ಥೆ. ನರಗುಂದದಿಂದ ಜಿಲ್ಲಾ ಕೇಂದ್ರ ಗದಗ ಪಟ್ಟಣಕ್ಕೆ ಒಳರಸ್ತೆಯಾಗಿರುವ ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯಲ್ಲಿ ಸಾಗುವುದೇ ಬಹುದೊಡ್ಡ ಸವಾಲು.
ನರಗುಂದ ಕೇಂದ್ರ ಸ್ಥಾನದಿಂದ 8 ಕಿಮೀ ಅಂತರದ ತಾಲೂಕಿನ ಕುರ್ಲಗೇರಿ ಗ್ರಾಮವರೆಗೆ ಸುಮಾರು ಐದಾರು ಕಿಮೀ ಹೆದ್ದಾರಿಯುದ್ದಕ್ಕೂ ತಗ್ಗು ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪಟ್ಟಣದ ಹೊರವಲಯ ದೂರಸಂಪರ್ಕ ಕಚೇರಿ ದಾಟಿದ ಬಳಿಕ ಮೂರ್‍ನಾಲ್ಕು ತಿರುವು ಸಾಗಿ ಮುಂದೆ ಹೋಗುತ್ತಿದ್ದಂತೆ ಕುರ್ಲಗೇರಿ ರಸ್ತೆಯಲ್ಲಿ ಇಂತಹ ಗುಂಡಿಗಳು ಹೆದ್ದಾರಿಯುದ್ದಕ್ಕೂ ಸಹಜವಾಗಿವೆ. ಹಗಲು ಹೊತ್ತಿನಲ್ಲೇ ಅಪಾಯ ಸ್ಥಿತಿಯಲ್ಲಿರುವ ಈ ಹೆದ್ದಾರಿ ಸಂಚಾರ ರಾತ್ರಿ ವೇಳೆಯಲ್ಲಂತೂ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಮೃತ್ಯು ಕೂಪವಾಗಿ ಪರಿಣಮಿಸಿದೆ.
ಹೆದ್ದಾರಿ ತುಂಬೆಲ್ಲ ದೊಡ್ಡ ಗುಂಡಿಗಳು ಉದ್ಭವಿಸಿದ್ದು, ಮಳೆಯಾಗಿ ಗುಂಡಿಗಳು ಕೆಸರು ನೀರಿನಿಂದ ತುಂಬಿ ನಿಂತಿವೆ. ಗುಂಡಿಯಲ್ಲಿ ವಾಹನ ಹೋಗಿದ್ದೇಯಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಇಲ್ಲಿದೆ. ದ್ವಿಚಕ್ರ ವಾಹನ ಸವಾರರಂತೂ ಹೆದ್ದಾರಿಯಲ್ಲಿ ಗುಂಡಿಗಳನ್ನು ತಪ್ಪಿಸಲು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಸಾಗಬೇಕಿದೆ. ಆಯ ತಪ್ಪಿದರೆ ಕೆಸರಿನ ಅಭಿಷೇಕ ಜೊತೆಗೆ ಬಿದ್ದು ಗಾಯಗೊಳ್ಳಬೇಕಾದ ಪರಿಸ್ಥಿತಿಯಿದೆ. ನರಗುಂದ ಪಟ್ಟಣದಿಂದ ಗದಗ ಪಟ್ಟಣ ಸೇರಲು ಕಡಿಮೆ ಅಂತರದ ಒಳರಸ್ತೆಯಾಗಿರುವ ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ.
ಸಮೀಪವಿರುವ ಈ ಮಾರ್ಗದಲ್ಲಿ ರಸ್ತೆಯ ಅವ್ಯವಸ್ಥೆ ಪ್ರತಿದಿನ ಸಾರ್ವಜನಿಕರ ನಿದ್ದೆಗೆಡಿಸಿದೆ ಎಂಬ ದೂರುಗಳು ಕೇಳಿ ಬಂದಿವೆ. ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಗದಗ ಒಳರಸ್ತೆ ರಾಜ್ಯ ಹೆದ್ದಾರಿಯನ್ನು ತ್ವರಿತವಾಗಿ ಸುಧಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ವಾರದೊಳಗೆ ರಸ್ತೆ ನಿರ್ವಹಣೆ : ನರಗುಂದ ಪಟ್ಟಣದಿಂದ ಕುರ್ಲಗೇರಿ ಮಾರ್ಗದ ರಸ್ತೆ ದುರಸ್ತಿ ನಿರ್ವಹಣೆಗೆ ಈಗಾಗಲೇ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಆಗಿದೆ. ವಾರದೊಳಗೆ ರಸ್ತೆ ನಿರ್ವಹಣೆಗೆ ಚಾಲನೆ ನೀಡಲಾಗುವುದು.
-ಸತೀಶ ನಾಗನೂರ, ಲೋಕೋಪಯೋಗಿ ಕಿರಿಯ ಅಭಿಯಂತರ
-ಸಿದ್ಧಲಿಂಗಯ್ಯ ಮಣ್ಣೂರಮಠ