Advertisement

ರಸ್ತೆಗಳಲ್ಲಿ ಗುಂಡಿ: ಸವಾರರಿಗೆ ತಪ್ಪದ ಸಂಕಷ್ಟ

03:04 PM Sep 08, 2022 | Team Udayavani |

ಉಡುಪಿ: ಕೊಡವೂರು ಹೃದಯ ಭಾಗದಲ್ಲಿ ಸಂತೆಕಟ್ಟೆ-ಲಕ್ಷ್ಮೀನಗರ ಮಾರ್ಗವಾಗಿ ಮಲ್ಪೆ ಬೀಚ್‌ ಸಂಪರ್ಕಿಸುವ ಮುಖ್ಯ ರಸ್ತೆ ಹಲವಾರು ಕಡೆಗಳಲ್ಲಿ ಹೊಂಡ, ಗುಂಡಿಗಳು ಕೂಡಿದ್ದು, ವಾಹನ ಸವಾರರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾವಿರಾರು ಪ್ರವಾಸಿಗರು, ಸ್ಥಳೀಯ ಉದ್ಯೋಗಸ್ಥರು ನಿತ್ಯ ಸಂಚರಿಸಬೇಕಿದೆ. ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಸವಾರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಯೂ ಹೆಚ್ಚಿದೆ. ನಗರಸಭೆ ಆಡಳಿತವು ಕೂಡಲೇ ರಸ್ತೆಯನ್ನು ದುರಸ್ಥಿಪಡಿಸಿ ವ್ಯವಸ್ಥಿತವಾಗಿಸಿಕೊಡುವಂತೆ ಸ್ಥಳೀಯರಾದ ಮನೋಜ್‌ ಕರ್ಕೇರ ಮನವಿ ಮಾಡಿದ್ದಾರೆ.

ಮಧ್ವನಗರ-ಜವಣೇರ ಕಟ್ಟೆ ರಸ್ತೆ

ಆದಿ ಉಡುಪಿ ಸಮೀಪದ ಮಧ್ವನಗರ- ಜವಣೇರ ಕಟ್ಟೆ ರಸ್ತೆಯೂ ದುಃಸ್ಥಿತಿಯಲ್ಲಿದ್ದು, ಹಲವೆಡೆ ಗುಂಡಿಗಳು ರಸ್ತೆಯನ್ನು ಆವರಿಸಿವೆ. ಈ ರಸ್ತೆಯಲ್ಲಿ ಸ್ಥಳೀಯರು ಸಾಕಷ್ಟು ಮಂದಿ ನಿತ್ಯ ಸಂಚರಿಸುತ್ತಾರೆ. ರಸ್ತೆಗಳಲ್ಲಿ ಬಿದ್ದ ಗುಂಡಿಗಳಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಹೊಂಡ, ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ವೇಗದಿಂದ ವಾಹನಗಳನ್ನು ಚಲಾಯಿಸಿದಲ್ಲಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರಾದ ಪೃಥ್ವಿರಾಜ್‌ ಕೋರಿಕೊಂಡಿದ್ದಾರೆ.

ಮಾಸಿ, ತುಂಡಾದ ಮಾರ್ಗಸೂಚಿ ಫ‌ಲಕ

Advertisement

ನಗರದಲ್ಲಿ ಹಲವು ವಾರ್ಡ್‌ ವ್ಯಾಪ್ತಿಗಳಲ್ಲಿ ವಿಳಾಸ ಗುರುತಿಸಲ್ಪಡುವ ಕಾಂಕ್ರೀಟ್‌ನ ಮಾರ್ಗಸೂಚಿ ಫ‌ಲಕಗಳು ಅವ್ಯವಸ್ಥೆಯಿಂದ ಕೂಡಿದೆ. ಕೆಲವೆಡೇ ಫ‌ಲಕಗಳು ಮುರಿದುಕೊಂಡು ಬಿದ್ದಿದ್ದರೆ, ಕೆಲವು ಕಡೆಗಳಲ್ಲಿ ಮಳೆ ನೀರಿನಿಂದ ಫ‌ಲಕದ ಬಣ್ಣಗಳು ಮಾಸಿಹೋಗಿವೆ. ಕೆಲವು ವಾರ್ಡ್‌ ಗಳಲ್ಲಿ ಫ‌ಲಕಗಳಿಗೆ ಗಿಡಗಂಟಿಗಳು ಆವರಿಸಿವೆ. ಅಲ್ಲದೆ ಸೂಚನ ಫ‌ಲಕಗಳು ವಾಹನಗಳು ಗುದ್ದಿ ತುಂಡರಿಸಿಕೊಂಡು ಬಿದ್ದಿವೆ. ಇಂದಿರಾ ನಗರ- ಕಸ್ತೂರ್ಬಾ ನಗರದಲ್ಲಿ 1ನೇ ಅಡ್ಡರಸ್ತೆಯಿಂದ 8ನೇ ಅಡ್ಡ ರಸ್ತೆಯವರೆಗೆ ದಾರಿಗಳನ್ನು ತೋರಿಸುವ ಸೂಚನ ಫ‌ಲಕಗಳು ಬಣ್ಣಗಳು ಅಳಿಸಿಹೋಗಿರುವ ಬಗ್ಗೆ, ಕೆಲವು ಸೂಚನ ಫ‌ಲಕ ತುಂಡಾಗಿರುವ ಬಗ್ಗೆ ಸ್ಥಳೀಯರಾದ ಮುಹಮ್ಮದ್‌ ಶಾನು ಗಮನ ಸೆಳೆದಿದ್ದಾರೆ. ಗುಂಡಿಬೈಲು, ಮಲ್ಪೆ, ಮಣಿಪಾಲ ಹಲವು ಕಡೆಗಳಲ್ಲಿ ಈ ಸಮಸ್ಯೆ ಇದೆ. ಈ ಬಗ್ಗೆ ನಗರಸಭೆ ಸೂಚನ ಫ‌ಲಕಗಳನ್ನು ವ್ಯವಸ್ಥಿತವಾಗಿಸುವಂತೆ ಮನವಿ ಮಾಡಿದ್ದಾರೆ.

ಫ‌ಲಕಗಳನ್ನು ಸರಿಪಡಿಸಲು ಕ್ರಮ

ಕಾಂಕ್ರೀಟ್‌ನ ಮಾರ್ಗಸೂಚಿ ಫ‌ಲಕಗಳು ಹಲವೆಡೆ ದುಃಸ್ಥಿತಿಯಲ್ಲಿದ್ದು, ಇದನ್ನು ಸರಿ ಪಡಿಸಲು ಕ್ರಮ ತೆಗೆದುಕೊಂಡಿದ್ದು, ಎಲ್ಲ ವಾರ್ಡ್‌ ಸದಸ್ಯರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಮುರಿದು ಹೋದಲ್ಲಿ ಹೊಸ ಫ‌ಲಕ ಅಳವಡಿಸಲಾಗುವುದು. ಹೊಸದಾಗಿ ಬಣ್ಣ ಹೊಡೆದು ವಿಳಾಸದ ಮಾಹಿತಿ ಬರೆಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಕ್ರಮ: ನಗರಸಭೆಯಿಂದ ಹೊಂಡ, ಗುಂಡಿ ಗಳಿಂದ ರಸ್ತೆಯನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಮಳೆ ಅನಂತರ ಸಾಕಷ್ಟು ರಸ್ತೆಗಳಿಗೆ ಹಾನಿ ಯಾಗಿದೆ. ಹಂತಹಂತವಾಗಿ ಎಲ್ಲ ವಾರ್ಡ್‌ ವ್ಯಾಪ್ತಿಗಳಲ್ಲಿ ರಸ್ತೆಗಳನ್ನು ಸರಿಪಡಿಸಲು ವಿಶೇಷ ಕ್ರಮ ವಹಿಸ ಲಾಗುತ್ತಿದೆ. –ಕೆ. ರಘುಪತಿ ಭಟ್‌, ಶಾಸಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next