ಕುದೂರು: ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಪಂ ವ್ಯಾಪ್ತಿ ಮತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿದ್ದು ಜನತೆ ಸಂಕಷ್ಟ ಎದುರಿಸುವಂತಾಗಿದೆ. ಇಷ್ಟಾದರೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳೂ ಕಣ್ಣೆತ್ತಿಯೂ ನೋಡಿಲ್ಲ.
ವೀರೇಗೌಡನದೊಡ್ಡಿ ಗ್ರಾಮದಿಂದ ಮಂಚನಬೆಲೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆ ಸಮೀಪ ಬಲಕ್ಕೆ ತೆರಳಿದರೆ ಮತ್ತ ಗ್ರಾಮ ಸಿಗುತ್ತದೆ. ಈ ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಗುಂಡಿಗಳು ಬಿದ್ದಿವೆ. ಬಿಎಂಟಿಸಿ ಬಸ್ ಕೂಡ ಗ್ರಾಮಕ್ಕೆ ಬರುತ್ತಿಲ್ಲ. ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ನೂರಾರು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿತ್ಯ ನರಕಯಾತನೆಯಾಗಿದೆ.
ಹಾಳಾದ ರಸ್ತೆಯಲ್ಲಿ ವಿಧಿಯಿಲ್ಲದೇ ಸಂಚರಿಸಲು ಹೋಗಿ ಪ್ರತಿನಿತ್ಯ ಅಪಘಾತ ಸಂಭವಿಸುತ್ತಲೇ ಇವೆ. ಮತ್ತ ಗ್ರಾಮದ ಜನ ಈ ಮಾರ್ಗವಾಗಿ ಸಂಚರಿಸಿ ತಲುಪಬೇಕು. ಇಲ್ಲಿನ ಜನತೆ ಉನ್ನತ ಶಿಕ್ಷಣ, ವೈದ್ಯಕೀಯ, ಮಾರುಕಟ್ಟೆ ಸೌಲಭ್ಯ ಬೇಕೆಂದರೆ ಮಾಗಡಿಯನ್ನೇ ಅವಲಂಬಿಸಿದ್ದಾರೆ. ಮಾಗಡಿ-ಬೆಂಗಳೂರು, ರಾಮನಗರಕ್ಕೆ ತೆರಳಬೇಕಾದರೆ 2.ಕಿ.ಮೀ. ನಡೆದುಕೊಂಡು ಬರಬೇಕು. ರಾತ್ರಿ ವೇಳೆಯಲ್ಲಂತೂ ಸ್ವಂತ ವಾಹನ ಇಲ್ಲದಿದ್ದರೆ ಗ್ರಾಮಕ್ಕೆ ಸೇರಲು ಆಗುವುದೇ ಇಲ್ಲ. ಕಿತ್ತು ಹೋಗಿರುವ ರಸ್ತೆಯಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿದ್ದು ಆನೆ, ಚಿರತೆ ,ಕರಡಿ ಸಂಚರಿಸುವ ನಿರ್ಜನ ಪ್ರದೇಶವಾಗಿದೆ. ನಿತ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮತ್ತ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದು 200 ಮನೆಯಿರುವ ಗ್ರಾಮದಲ್ಲಿ 7 ನೇ ತರಗತಿವರೆಗೂ ಶಾಲೆ ಇದೆ. 8ನೇ ತರಗತಿ ಮತ್ತು ಕಾಲೇಜಿಗೆ ತೆರಳಲು ವೀರೇಗೌಡನದೊಡ್ಡಿ ಅಥವಾ ಮಾಗಡಿ , ರಾಮನಗರಕ್ಕೆ ತೆರಳಬೇಕು, ಆಟೋಗಳೂ ಈ ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿಯಿದೆ. ಆಕಸ್ಮಾತ್ ಬಂದರೂ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ವಾಹನ ಚಾಲಕರಂತೂ ಸಂಕಟ ಅನುಭವಿಸಬೇಕು.
ರಸ್ತೆಗಳಲ್ಲಿ ಮಾರು ದೂರಕ್ಕೆ ಮೂವತ್ತು ಗುಂಡಿಗಳನ್ನು ಹೊರಳಿಸಿ ಮುಂದಕ್ಕೆ ಸಾಗ ಬೇಕಾದರೆ ಸಾಕು ಸಾಕೆನಿಸುತ್ತದೆ. ಈ ಸಾಹಸ ಮಾಡುವ ಬದಲು ನಡೆದೇ ಹೋಗುವ ಮನಸ್ಸಾಗುತ್ತದೆ. ಇನ್ನೂ ರೋಗಿಗಳ ಪಾಡಂತೂ ಹೇಳತೀರದು. ರಸ್ತೆಯಲ್ಲಿ ಆಮೆ ನಡಿಗೆಯಲ್ಲಿ ಸಂಚರಿಸಿ ಆಸ್ಪತ್ರೆ ತಲುಪುವಷ್ಟರಲ್ಲಿ ಪ್ರಾಣವೇ ಹೋಗುತ್ತದೆ.
ಕಾಡಿನ ಅಂಚಿನಲ್ಲಿರುವ ಗ್ರಾಮಸ್ಥರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮಾಗಡಿ ಅಥವಾ ರಾಮನಗರಕ್ಕೆ ಹೋಗಬೇಕಾಗಿರುವುದರಿಂದ ರಸ್ತೆ ಸಂಪರ್ಕ ಸರಿ ಇಲ್ಲದೆ ತಾವು ಬೆಳೆದ ಬೆಳೆಗಳನ್ನು ಹೆಗಲ ಮೇಲೆ ಹೊತ್ತು ಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮತ್ತ ಗ್ರಾಮದ ರಸ್ತೆ ಡಾಂಬರೀಕರಣಗೊಂಡು ಬಹಳ ವರ್ಷಗಳೇ ಕಳೆಯಿತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿ ಹೋಗಿದೆ. ಈ ಭಾಗದ ಸಾಮಾನ್ಯ ಜನತೆ ಪ್ರತಿ ನಿತ್ಯ ನರಳುವಂತಾಗಿದೆ.
-ಕೆ.ಎಸ್..ಮಂಜುನಾಥ್