Advertisement
ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ ಕಂಡು ಬರುತ್ತಿದ್ದು ಇದು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಮತ್ತು ವಿಜ್ಞಾನ ಕೇಂದ್ರದ ತಜ್ಞರು ಕಳೆದ 13 ವರ್ಷಗಳಲ್ಲಿ ನಡೆಸಿದ 9 ಸಾವಿರಕ್ಕೂ ಅಧಿಕ ಮಣ್ಣಿನ ಮಾದರಿಗಳ ಪರೀಕ್ಷೆಯಲ್ಲಿ ಇದು ಸಾಬೀತಾಗಿದೆ ಎಂದು ಮಣ್ಣು ವಿಜ್ಞಾನಿಗಳು ತಿಳಿಸಿದ್ದಾರೆ.
Related Articles
Advertisement
ಪೊಟಾಶಿಯಂ ಕೊರತೆ ಬೆಳೆಗಳ ಮೇಲೆ ಪರಿಣಾಮ :
ಮಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಕೊರತೆಯಾದಾಗ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀಳುತ್ತದೆ. ಭತ್ತ ಕೆಂಪು ಬಣ್ಣಕ್ಕೆ ತಿರುಗಿ ಇಳುವರಿ ಕಡಿಮೆಯಾದರೆ ತೆಂಗು ಮತ್ತು ಅಡಿಕೆಯಲ್ಲಿ ಚುಕ್ಕೆಗಳು ಕಾಣಿಸಿಕೊಂಡು ಕಾಯಿ ಹಂತದಲ್ಲಿ ಉದುರಲು ಶುರುವಾಗುತ್ತದೆ. ಮುಖ್ಯವಾಗಿ ಬೆಳೆಗಳಲ್ಲಿ ರೋಗ ಮತ್ತು ಕೀಟ ನಿರೋಧಕ ಶಕ್ತಿ ಕುಂದುತ್ತದೆ. ಕರಾವಳಿ ಭಾಗದ ರೈತರು ತಮ್ಮ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಸಾವಯವ ಗೊಬ್ಬರ ಸಹಿತ ಪೊಟಾಶಿಯಂ ಆಧರಿತ ರಸಗೊಬ್ಬರವನ್ನು ಮಣ್ಣಿಗೆ ನೀಡಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ| ಜಯಪ್ರಕಾಶ್ ಆರ್. ಕೃಷಿಕರಿಗೆ ಸಲಹೆ ನೀಡುತ್ತಾರೆ.
ಹುಳಿ ಮಣ್ಣಿಗೆ ಸುಣ್ಣ ಪರಿಹಾರ :
ಕರಾವಳಿ ಭಾಗದಲ್ಲಿನ ಮಣ್ಣಿನಲ್ಲಿ ಶೇ.95ರಷ್ಟು ಹುಳಿ ಅಂಶವಿದೆ. ಹುಳಿ ಮಣ್ಣಿನಲ್ಲಿ ಕಬ್ಬಿಣದ ನಂಜಿನ ಅಂಶ ಅಧಿಕವಾಗಿರುವುದರಿಂದ ರಸಗೊಬ್ಬರ, ಸಾವಯವ ಗೊಬ್ಬರ ಎಷ್ಟೇ ಹಾಕಿದರೂ ಬೆಳೆಗಳಿಗೆ ಪೋಷಕಾಂಶಗಳು ಸಮರ್ಪಕವಾಗಿ ಸಿಗದೆ ಇಳುವರಿ ಕುಂಠಿತವಾಗುತ್ತದೆ. ಮಣ್ಣಿಗೆ ಸುಣ್ಣ ಬಳಕೆ ಮಾಡುವುದರಿಂದ ಇದಕ್ಕೆ ಪರಿಹಾರ ಸಾಧ್ಯ.
ಮಣ್ಣಿಗೆ ಏನೇನು ಹಾನಿಕಾರಕ?:
ಅವೈಜ್ಞಾ ನಿಕ ಮಾದರಿಯಲ್ಲಿ ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ, ಕರಾವಳಿ, ಮಲೆನಾಡು ಭಾಗದಲ್ಲಿ ಮಣ್ಣಿನ ಸವಕಳಿ ಹೆಚ್ಚಳ, ಕಾರ್ಖಾನೆ, ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿಗೆ ಸೇರ್ಪಡೆಗೊಳ್ಳುತ್ತಿರುವುದು, ಬ್ಯಾಟರಿ ವೇಸ್ಟ್‌ಗಳ ಅವೈಜ್ಞಾನಿಕ ವಿಲೇವಾರಿ ಮತ್ತಿತರ ಅಂಶಗಳು ಮಣ್ಣಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಣ್ಣಿನ ಉತ್ತಮ ಆರೋಗ್ಯಕ್ಕೆ ಎರೆಹುಳ ಗೊಬ್ಬರ, ಕುರಿ ಗೊಬ್ಬರ, ಎಲೆ ಗೊಬ್ಬರ, ವ್ಯವಸ್ಥಿತವಾಗಿ ಕಂಪೋಸ್ಟ್ ಮಾಡಿದ ಹಸಿ ತ್ಯಾಜ್ಯಗಳ ಗೊಬ್ಬರದಿಂದ ಸಾವಯವ ಮಣ್ಣು ರೂಪುಗೊಳ್ಳುತ್ತದೆ. ಮಣ್ಣಿನ ಸವಕಳಿ ತಡೆಗಟ್ಟಲು ಭೂಮಿಯನ್ನು ಅದರಲ್ಲೂ ಮುಖ್ಯವಾಗಿ ಕೃಷಿ ಜಮೀನನ್ನು ಪಾಳು ಬಿಡದೆ ಹುಲ್ಲುಗಾವಲು, ಹೊದಿಕೆ ಬೆಳೆಗಳು, ಗಿಡಮರಗಳನ್ನು ಬೆಳೆಸಬೇಕು.
–ಅವಿನ್ ಶೆಟ್ಟಿ