Advertisement
ಕೌನ್ಸೆಲಿಂಗ್‌ಗಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಶಿಕ್ಷಕರು ಬೆಳಗ್ಗೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಜಮಾಯಿಸಿದ್ದರು. ಗಣಕಯಂತ್ರದ ಪರದೆಯಲ್ಲಿ ಖಾಲಿ ಹುದ್ದೆ ಪಟ್ಟಿ ತೆರೆದುಕೊಳ್ಳಲೇ ಇಲ್ಲ. ಹೀಗಾಗಿ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಯಾದರೂ ಆರಂಭವಾಗಲಿಲ್ಲ. ಇದೇ ಮೊದಲ ಬಾರಿಗೆ ಖಾಲಿ ಹುದ್ದೆಗಳನ್ನು ಬೆಂಗಳೂರಿನಿಂದಲೇ ನಿರ್ವಹಿಸುವ ಕಾರ್ಯಮಾಡಲಾಗುತ್ತಿದೆ. ಜಿಲ್ಲೆಯೊಳಗಿನ ವರ್ಗಾವಣೆ ಪ್ರಕ್ರಿಯೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆಸುತ್ತಿರುವುದರಿಂದ ಸ್ಥಳೀಯವಾಗಿ ಏನನ್ನೂ ಮಾಡಲು ಸಾಧ್ಯವಾಗದೇ ಎಲ್ಲವೂ ಕೇಂದ್ರ ಕಚೇರಿಯಿಂದಲೇ ಸರಿಪಡಿಸಬೇಕಾಗಿದ್ದರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಾದು ಬಳಿಕ ಕೌನ್ಸೆಲಿಂಗ್ ಪ್ರಕ್ರಿಯೆ ಮುಂದೂಡಲಾಯಿತು.
ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯನ್ನು ದೂರದ ಆರ್‌ಟಿಒ ಕಚೇರಿ ಬಳಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಶಿಕ್ಷಕರು ಬಸ್‌ನಿಲ್ದಾಣಕ್ಕೆ ಬಂದು ಅಲ್ಲಿಂದ ಆಟೋ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದರು. ಹೊಸ ಕಚೇರಿಯಾಗಿದ್ದರಿಂದ ಅಲ್ಲಿ ಸಾಕಷ್ಟು ಸ್ಥಳಾವಕಾಶ, ಕುಡಿಯುವ ನೀರು, ನೆರಳು ಇಲ್ಲದೇ ಶಿಕ್ಷಕರು ಬಿಸಿಲಿನ ಪ್ರಖರತೆಗೆ ಬಸವಳಿದರು. ಬೆಳಗ್ಗೆಯಿಂದ ಕಾದು ಕಾದು ಸುಸ್ತಾದ ಶಿಕ್ಷಕರು, ಮಧ್ಯಾಹ್ನದ ವೇಳೆಗೆ ಕೌನ್ಸೆಲಿಂಗ್‌ಮುಂದೂಡಿಕೆ ಘೋಷಿಸಿದಾಗ ‘ಬಂದ ದಾರಿಗೆ ಸುಂಕುವಿಲ್ಲ’ ಎಂದು ಬೇಸರದಿಂದ ಮರಳಿದರು. ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದವರ ಆದ್ಯತಾ ಪಟ್ಟಿಯಲ್ಲಿ ಗುರುವಾರ ಪದವಿಧರೇತರ ಮುಖ್ಯಶಿಕ್ಷಕರು, 1ರಿಂದ 90 ಕ್ರಮ ಸಂಖ್ಯೆವರೆಗೆ ಮುಖ್ಯ ಶಿಕ್ಷಕರು, 1ರಿಂದ 59 ಕ್ರಮ ಸಂಖ್ಯೆವರೆಗಿನ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ 1ರಿಂದ 100 ಕ್ರಮ ಸಂಖ್ಯೆ ವರೆಗಿನ ಸಹ ಶಿಕ್ಷಕರಿಗೆ ಕೌನ್ಸಿಲಿಂಗ್ ನಿಗದಿಯಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ಕೌನ್ಸಿಲಿಂಗ್ ಆರಂಭವಾಗಿಲ್ಲ. ಹೀಗಾಗಿ ಪ್ರಕ್ರಿಯೆ ಮುಂದೂಡಲಾಗಿದ್ದು, ಶೀಘ್ರವೇ ಕೌನ್ಸಿಲಿಂಗ್ ದಿನಾಂಕ ನಿಗದಿಪಡಿಸಿ ಮಾಹಿತಿ ನೀಡಲಾಗುವುದು.
ಅಂದಾನಪ್ಪ ವಡಗೇರಿ,
ಡಿಡಿಪಿಐ