Advertisement
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಕಥೆ ಪ್ರತಿ ಬಾರಿಯೂ ಹೀಗೆಯೇ. ದುಡಿದ ಕೆಲಸಕ್ಕೆ ಸಿಗುವ ವೇತನ ಅಲ್ಪ ಮೊತ್ತ. ಅದಕ್ಕೂ ಅಂಗಲಾಚುವ ಸ್ಥಿತಿ. ತಿಂಗಳೂ ತಿಂಗಳೂ ಪಾವತಿ ಮಾಡಿ ಎಂಬ ಶಿಕ್ಷಕರ ಬೇಡಿಕೆಗೆ ಅಸ್ತು ಸಿಕ್ಕಿಲ್ಲ. ಪ್ರತಿ ಬಾರಿ ಹಬ್ಬ ಹರಿದಿನ ವೇಳೆ ಸಂಬಳ ಇಲ್ಲದ ಸ್ಥಿತಿ ಇದ್ದು ಈ ಬಾರಿಯ ನವರಾತ್ರಿಯಲ್ಲಿಯೂ ಸಂಬಳಕ್ಕಾಗಿ ಕಾಯುವ ಸ್ಥಿತಿ ಉಂಟಾಗಿದೆ.
Related Articles
ಪ್ರತಿ ತಿಂಗಳು ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗೆ 10,000 ರೂ. ಮತ್ತು ಪ್ರೌಢಶಾಲೆ ವಿಭಾಗದ ಅತಿಥಿ ಶಿಕ್ಷಕರಿಗೆ 10,500 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ. ಈ ವೇತನ ಆಧರಿಸಿ, ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಲಾಗುತ್ತದೆ. ತಾಲೂಕುವಾರು ಶಿಕ್ಷಕರ ಸಂಖ್ಯೆ ಆಧರಿಸಿ ತಾ.ಪಂ. ನಿಧಿಗೆ ಈ ಹಣವನ್ನು ಜಮಾ ಮಾಡಿ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಅನುಮತಿ ಮತ್ತು ಶಿಕ್ಷಕರ ವಿವರ ಪಡೆದು ಅನಂತರ ಅವರ ಖಾತೆಗೆ ವೇತನ ಪಾವತಿ ಮಾಡಲಾಗುತ್ತಿದೆ. ಸಂಬಳದ ಬಗ್ಗೆ ರಾಜ್ಯ, ಜಿಲ್ಲೆಯ ಅಧಿಕಾರಿಗಳನ್ನು ವಿಚಾರಿಸಿದರೆ ಎಂಟು ದಿನಗಳ ಹಿಂದೆಯೇ ಸರಕಾರದಿಂದ ನಿಧಿ ಬಿಡುಗಡೆಯಾಗಿದ್ದು ತಾ.ಪಂ.ನಲ್ಲಿ ವಿಚಾರಿಸುವಂತೆ ಹೇಳುತ್ತಾರೆ. ಆದರೆ ಅಲ್ಲಿಂದ ಯಾವುದೇ ರೀತಿಯ ಮಾಹಿತಿ ಸಿಗುತ್ತಿಲ್ಲ. ಅಂದರೆ ನಿಧಿ ಬಿಡುಗಡೆ ಆಗಿರುವುದೇ ಅನುಮಾನ ಎಂದೆನಿಸಿದೆ. ಒಂದು ವೇಳೆ ತಾ.ಪಂ. ನಿಧಿಗೆ ವೇತನ ಅನುದಾನ ಬಿಡುಗಡೆ ಆಗಿದ್ದರೆ ಅದು ಶಿಕ್ಷಕರ ಖಾತೆಗೆ ಏಕೆ ಜಮೆ ಆಗುತ್ತಿಲ್ಲ ಅನ್ನುವ ಪ್ರಶ್ನೆ ಮೂಡಿದೆ.
Advertisement
ಶಾಲೆ ಪ್ರಾರಂಭಗೊಂಡು ನಾಲ್ಕು ತಿಂಗಳು ಕಳೆದಿದೆ. ಈ ತನಕವೂ ಅತಿಥಿ ಶಿಕ್ಷಕರಿಗೆ ವೇತನ ಸಿಕ್ಕಿಲ್ಲ. ಅಂದರೆ ನಾಲ್ಕು ತಿಂಗಳಿನಿಂದ ಉಚಿತವಾಗಿಯೇ ಸರಕಾರ ದುಡಿಸಿಕೊಳ್ಳುತ್ತಿದೆ.
ಸರಕಾರದಿಂದ ಹಣ ಬಿಡುಗಡೆಗೊಂಡು ತಾ.ಪಂ.ಗೆ ಬಂದಿದ್ದು ಅಲ್ಲಿಂದ ಟ್ರೇಜರಿ ಮೂಲಕ ಶಿಕ್ಷಕರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಮೆ ಪ್ರಕ್ರಿಯೆ ಆನ್‌ಲೈನ್ ಆಗಿರುವ ಕಾರಣ ಯಾವಾಗ ಖಾತೆಗೆ ಬರಲಿದೆ ಅನ್ನುವುದನ್ನು ನಿರ್ದಿಷ್ಟವಾಗಿ ಹೇಳಲಾಗದು.– ವೆಂಕಟೇಶ ಸುಬ್ಯಾಯ ಪಾಟಗಾರ, ಡಿಡಿಪಿಐ, ದ.ಕ. – ಕಿರಣ್ ಕುಂಡಡ್ಕ