ಬೆಂಗಳೂರು: ಧಾರವಾಡದಲ್ಲಿ ಡಿಸೆಂಬರ್ 7ರಿಂದ 9ರ ವರೆಗೆ ನಡೆಯಬೇಕಾಗಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದ್ದು, ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ.
ಬುಧವಾರ ಧಾರವಾಡ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಡೋಜ ಪಾಟೀಲ ಪುಟ್ಟಪ್ಪ, ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಸೇರಿ ಹಲವು ಸಾಹಿತಿಗಳು ಡಿಸೆಂಬರ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿದ್ದು, 2019ರ ಜನವರಿಯಲ್ಲಿ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಸಲಹೆ ನೀಡಿದ್ದು, ಅದರಂತೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಜನವರಿಯಲ್ಲಿ ಸಮ್ಮೇಳನ: ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ್,ಧಾರವಾಡದಲ್ಲಿ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಸಮ್ಮೇಳನವನ್ನು ಸ್ವಾಗತ ಸಮಿತಿಯ ಮನವಿ ಹಿನ್ನೆಲೆಯಲ್ಲಿ ಮುಂದೂಡಲು ತೀರ್ಮಾನಿಸಲಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಗಳು ಇನ್ನೂ ಸಂಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ,ಜನವರಿಯಲ್ಲಿ ನಡೆಸುವಂತೆ ಮನವಿ ಮಾಡಿದೆ ಎಂದು ತಿಳಿಸಿದರು.
ಜನವರಿ ತಿಂಗಳಲ್ಲೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಆದರೆ ಯಾವ ವಾರದಲ್ಲಿ ನಡೆಸಬೇಕು ಎನ್ನುವುದು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಮಾತುಕತೆನಡೆಸಿ, ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಸಮ್ಮೇಳನ ನಡೆಯುವ ಅಂತಿಮ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.