ಭೋಪಾಲ್: ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆಯಂತೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಪೋಸ್ಟ್ ಮಾಸ್ಟರ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಬೆಟ್ಟಿಂಗ್ ಗಾಗಿ ಪೋಸ್ಟ್ ಮಾಸ್ಟರ್ 24 ಕುಟುಂಬಗಳ ಠೇವಣಿ ಹಣವನ್ನು ಬಳಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಶಿಕ್ಷಣವನ್ನ ಮಾತ್ರವಲ್ಲ, ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ : ಬಿ.ಸಿ.ನಾಗೇಶ್
ಬಿನಾ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ನನ್ನು ಮೇ 20ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್ ಪಿ) ಬಂಧಿಸಿದ್ದಾರೆ. ತನಿಖೆಯ ವೇಳೆ ಈತ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಆರೋಪಿ ಪೋಸ್ಟ್ ಮಾಸ್ಟರ್ ವಿಶಾಲ್, ನಕಲಿ ಎಫ್ ಡಿ ಖಾತೆಗಳಿಗಾಗಿ ಅಸಲಿ ಪಾಸ್ ಬುಕ್ ಗಳನ್ನು ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ 24 ಕುಟುಂಬಗಳ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹೂಡಿ ಕಳೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 420 ಮತ್ತು 498ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆಯ ನಂತರ ಇನ್ನಷ್ಟು ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಬಿನಾ ಜಿಆರ್ ಪಿ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಅಜಯ್ ಧ್ರುವೆ ತಿಳಿಸಿದ್ದಾರೆ.