ನವದೆಹಲಿ: ಸಾರ್ವಜನಿಕವಾಗಿ ಅಳವಡಿಸಿರುವ ಗಲಭೆಕೋರರ ಭಾವಚಿತ್ರಗಳಿರುವ ಪೋಸ್ಟರ್‌ಗಳನ್ನು ತೆರವುಗೊಳಿಸುವ
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಮತ್ತಷ್ಟು ಪರಿಶೀಲಿಸುವ ಅಗತ್ಯವಿದೆ ಎಂದು
ಸುಪ್ರೀಂಕೋರ್ಟ್ ತಿಳಿಸಿದೆ. ಸಿಎಎ ವಿರೋಧಿಸಿ, ಗಲಭೆ ಸೃಷ್ಟಿಸಿದ್ದ ಆರೋಪಿಗಳ ಚಿತ್ರ, ಹೆಸರು, ವಿಳಾಸವುಳ್ಳ ಪೋಸ್ಟರ್‌ಗಳನ್ನು ಲಕ್ನೋದ ರಸ್ತೆ ಬದಿಯಲ್ಲಿ ಪ್ರಕಟಿಸಲಾಗಿತ್ತು. ಇವುಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಉತ್ತರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು.ಲಲಿತ್, ಅನಿರುದ್ಧ ಬೋಸ್ ಅವರಿದ್ದ ಪೀಠ, ಇದನ್ನು ಮತ್ತಷ್ಟು ಸಮಗ್ರ ಹಾಗೂ ಆಳವಾಗಿ ಪರಿಶೀಲಿಸಬೇಕಾಗಿದೆ. ಇದರ ವಿಚಾರಣೆಗೆ ಕನಿಷ್ಠ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸುವ ಅಗತ್ಯವಿದೆ ಎಂದಿದೆ. ನಿಮ್ಮ ಕ್ರಮವನ್ನು ಬೆಂಬಲಿಸುವಂತಹ ಯಾವುದೇ ಕಾನೂನುಗಳು ಇಲ್ಲ. ಹೀಗಾಗಿ ಈ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದೂ ಹೇಳಿದೆ.