Advertisement

ಸಾಂಸ್ಕೃತಿಕಲೋಕವನ್ನು ಅನಾವರಣಗೊಳಿಸಿದ ಅಂಚೆ ಚೀಟಿಗಳು 

12:30 AM Jan 04, 2019 | Team Udayavani |

 ಇತ್ತೀಚಿಗೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಹೆರಿಟೇಜ್‌ ಕ್ಲಬ್‌ ಹಾಗು ಉಡುಪಿ ಅಂಚೆ ವಿಭಾಗದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ವಿಶ್ವ ಅಂಚೆ ಚೀಟಿ ಸಂಗ್ರಹಣಾ ದಿನದ ಪ್ರಯುಕ್ತ ಆಯೋಜಿಸಿದ್ದ ಈ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಅಂಚೆ ಚೀಟಿ ಒಂದು ಹೊಸ ಸಾಂಸ್ಕೃತಿಕ ಲೋಕವನ್ನು ನಮ್ಮ ಕಣ್ಮುಂದೆ ತೆರೆದಿರಿಸಿತು.ಅಪರೂಪದಲ್ಲಿ ಅಪರೂಪವೆನಿಸುವ ಅಂಚೆ ಚೀಟಿಗಳನ್ನು ಹವ್ಯಾಸಿ ಸಂಗ್ರಹಕಾರರು ಪ್ರದರ್ಶಿಸಿದರು. 

Advertisement

ಅರ್ಚನಾ ಎಂ. ಪೈ ಸಂಗ್ರಹದಲ್ಲಿ 1973ನೇ ಇಸವಿಯಿಂದ ಅಂಚೆ ಚಿಕಣಿ ಹಾಳೆಗಳು(ಮಿನಿಯೇಚರ್‌ ಶೀಟ್ಸ್‌) ವಿಭಾಗದಲ್ಲಿ ಭಾರತೀಯ ಅಂಚೆ ಇಲಾಖೆ ಹೊರ ತಂದಿರುವ ಸಂಪೂರ್ಣ ರಾಮಾಯಣ, ಮಹಾಭಾರತ ಇತ್ಯಾದಿ ಪೌರಾಣಿಕ ಕಥಾವಸ್ತುವನ್ನು ಅಂಚೆ ಚೀಟಿಯಲ್ಲಿ ಮುದ್ರಿಸಿ ಒಂದೇ ಹಾಳೆಯಲ್ಲಿ ಪ್ರಸ್ತುತ ಪಡಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಭಾರತೀಯ ಅಂಚೆ ಇಲಾಖೆಯ ಕಾರ್ಯ ಸ್ತುತ್ಯರ್ಹ. ಇದೇ ವಿಭಾಗದಲ್ಲಿ ಸಾಮಾಜಿಕ ಕಳಕಳಿಯ ಹಾಗು ಇತರ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಚಿಕಣಿ ಹಾಳೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಅಮ್ಮುಂಜೆ ನಾಗೇಂದ್ರ ನಾಯಕ್‌ರ ವಿದೇಶ ಅಂಚೆ ಚೀಟಿ ವಿಭಾಗದಲ್ಲಿ ಸುಮಾರು 50ಕ್ಕೂ ಮಿಕ್ಕಿದ ವಿದೇಶಗಳ ಅಂಚೆ ಚೀಟಿಗಳನ್ನು ನಿರ್ದಿಷ್ಟ ವಸ್ತು ವಿಷಯಗಳನ್ನೊಳಗೊಂಡ, ಉದಾಹರಣೆಗೆ ಹಕ್ಕಿಗಳು ಮಾತ್ರ ಇರುವ ಹಾಳೆಗಳನ್ನು ಆಯಾಯ ದೇಶದ ಸಂಸ್ಕೃತಿಗನುಗುಣವಾಗಿ ಜೋಡಿಸಿಡಲಾಗಿತ್ತು.

ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂದೀಪ್‌ ಕುಮಾರ್‌ ಸಂಗ್ರಹದಲ್ಲಿರುವ ಕೆಲವೊಂದು ದುರ್ಲಭವೆನಿಸುವ ಫ‌ಸ್ಟ್‌ ಫ್ಲೈಟ್‌ ಕವರ್ಸ್‌, ಇಂಗ್ಲೆಂಡಿನ ರಾಣಿ ವಿಕೋrರಿಯಾ, ಮಹಾತ್ಮಾ ಗಾಂಧಿ ಮುಂತಾದ ಇತಿಹಾಸ ಪ್ರಸಿದ್ಧರ ಜೀವನ ಚರಿತ್ರೆಯನ್ನು ಬಿಂಬಿಸುವ ಅಂಚೆ ಚೀಟಿಯನ್ನೊಳಗೊಂಡಿರುವ ಹಾಳೆಗಳನ್ನು ಕಂಡಾಗ ಅಂತಹ ಮಹಾನ್‌ ಪುರುಷರ/ ಮಹಿಳೆಯರ ಜೀವನ ಚರಿತ್ರೆಯನ್ನು ಈ ಅಂಚೆಚೀಟಿಗಳು ಮೂಕವಾಗಿ ನಮಗೆ ಹೇಳುತ್ತಿವೆಯೋ ಎಂದು ಭಾಸವಾಗುತ್ತದೆ . ಹಾಗೆಯೇ ಈ ವಿಭಾಗದಲ್ಲಿ ಅವರು ಪ್ರದರ್ಶಿಸಿದ ನೂರು ರುಪಾಯಿ ನಾಣ್ಯ ಹಾಗು ಇತರ ದೇಶೀಯ ನಾಣ್ಯ, ನೋಟುಗಳನ್ನು ಪ್ರಥಮ ಬಾರಿಗೆ ಇಂದಿನ ಯುವ ಜನಾಂಗ ಕಂಡು ಆಶ್ಚರ್ಯ ಚಕಿತರಾದರು. 

ಅಂಚೆ ಉದ್ಯೋಗಿ ಪೂರ್ಣಿಮಾ ಜನಾರ್ದನ್‌ ಅವರು ಪ್ರದರ್ಶನಕ್ಕಿಟ್ಟ ಅಂಚೆ ಚೀಟಿಗಳು ಬೇರೆಯೇ ಲೋಕವನ್ನು ತೆರೆದಿಟ್ಟವು. ಪ್ರತಿಯೊಂದಕ್ಕೂ ಆಂಗ್ಲ, ಕನ್ನಡ ಹಾಗು ತುಳು ಸಮಾನಾರ್ಥಕ ಪದಗಳನ್ನು ಬಳಸಿ ನೋಡುಗರಿಗೆ ಸುಲಭವಾಗಿ ಮೂರು ಭಾಷೆಗಳ ಮೂಲಕ ಅಂಚೆ ಚೀಟಿಯನ್ನು ಅರ್ಥೈಸಿಕೊಳ್ಳುವ ಅವಕಾಶ ಮಾಡಿಕೊಟ್ಟದ್ದು ಅಭಿನಂದನೀಯ. ತುಳು ಶಬ್ದ ಕೋಶವನೇ° ಬಿಡಿಸಿಟ್ಟಂತೆ ಕ್ಲಿಷ್ಟಕರವಾದ ಶಬ್ದಗಳನ್ನು ಬಳಸಿದ ಪ್ರದರ್ಶಕಿಯ ಶ್ರಮ ಮೆಚ್ಚತಕ್ಕದ್ದು.ಒಂದು ಅಧ್ಯಯನ ಶೀಲವಾದ, ಯುವ ಜನಾಂಗಕ್ಕೆ ಪ್ರೇರೇಪಣೆ ನೀಡಬಲ್ಲ ಅರ್ಥ ಪೂರ್ಣವಾದ ಪ್ರದರ್ಶನವಿದು.

Advertisement

ಜನನಿ ಭಾಸ್ಕರ ಕೊಡವೂರು 

Advertisement

Udayavani is now on Telegram. Click here to join our channel and stay updated with the latest news.

Next