Advertisement

Books: ಅಂಚೆ ಲೈಬ್ರರಿ; ನಿಮ್ಮ ಮನೆಗೇ ಪುಸ್ತಕ!

11:00 AM Aug 05, 2024 | Team Udayavani |

ಬೆಂಗಳೂರು: ಇಂದಿನ ಅವರಸದ ಬದುಕಿನಲ್ಲಿ ಗ್ರಂಥಾಲಯಗಳಿಗೆ ಹೋಗಲು ಸಮಯವಿರುವು ದಿಲ್ಲ. ಆನ್‌ಲೈನ್‌ ಮೂಲಕ ಪುಸ್ತಕಗಳನ್ನು ತೆಗೆದು ಕೊಳ್ಳಲು ಕೆಲವರಿಗೆ ಆರ್ಥಿಕ ಸಮಸ್ಯೆ ಕಣ್ಣೆದುರು ಬರುತ್ತದೆ. ಮತ್ತಷ್ಟು ಮಂದಿಗೆ “ಡಿಜಿಟಲ್‌ ಪುಸ್ತಕ’ ಓದಲು ಕಿರಿಕಿರಿಯೂ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಹಾಗೂ ಕನ್ನಡ ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು “ಹೊತ್ತಿಗೆ ನಿಮ್ಮ ಮನೆಗೆ’ ಅಂಚೆ ಗ್ರಂಥಾಲಯವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದೆ.

Advertisement

ಪುಸ್ತಕಗಳು ನೀವಿದ್ದಲ್ಲಿಗೆ ಅಂಚೆಯ ಮೂಲಕ ನಿಮ್ಮ ಮನೆಗೆ ಬರಲಿವೆ. ಈ ಹಿಂದೆ ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು “ಕನ್ನಡ ಪುಸ್ತಕಗಳು ಗಾಲಿಗಳ ಮೇಲೆ’ ಎಂಬ ಅಭಿಯಾನವನ್ನು ಪ್ರಾರಂಭಿಸಿ, ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಇದರ ಮುಂದುವರಿದ ಭಾಗವಾಗಿ “ಹೊತ್ತಿಗೆ ನಿಮ್ಮ ಮನೆಗೆ’ ಅಂಚೆ ಗ್ರಂಥಾಲಯ ಎಂಬ ಹೊಸದೊಂದು ಪ್ರಯತ್ನವನ್ನು ಆರಂಭಿಸಿದೆ.

“ಹೊತ್ತಿಗೆ ನಿಮ್ಮ ಮನೆಗೆ’ ಅಂಚೆ ಗ್ರಂಥಾಲಯದ ಉದ್ದೇಶ: ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡುವವರು ಸ್ಥಳೀಯ ಸರ್ಕಾರಿ ಗ್ರಂಥಾ ಲಯಗಳಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಬೇಕಾದ ಎಲ್ಲ ಪುಸ್ತಕಗಳು ಲಭ್ಯವಿರುವುದಿಲ್ಲ. ಅಷ್ಟೇ ಅಲ್ಲದೆ, ಕೆಲವರಿಗೆ ಹಣ ಕೊಟ್ಟು ಪುಸ್ತಕ ಕೊಂಡುಕೊಂಡು ಓದುವಷ್ಟು ಆರ್ಥಿಕ ಸ್ಥಿತಿವಂತರೂ ಇರುವುದಿಲ್ಲ. ಇನ್ನೂ ಕೆಲವರಿಗೆ ಗ್ರಂಥಾಲಯಗಳಿಗೆ ಹೋಗುವ ಸಮಯ ಇರುವುದಿಲ್ಲ. ಮಕ್ಕಳಿಂದ ವೃದ್ಧರವರೆಗಿನ ಎಲ್ಲ ವಯೋಮಾನದ ವರಿಗೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಲು ಸಹಾಯ ಮಾಡುವುದೇ ಇದರ ಮುಖ್ಯ ಉದ್ದೇಶ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಮಧುಶ್ರೀ ಉದಯವಾಣಿಗೆ ತಿಳಿಸುತ್ತಾರೆ.

ವರ್ಷಕ್ಕೆ 3,500 ಕನ್ನಡ ಪುಸ್ತಕಗಳ ಬಿಡುಗಡೆ: ಪ್ರತಿ ವರ್ಷ ಸುಮಾರು 3,500ದಷ್ಟು ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಕನ್ನಡ ಸಾಹಿತ್ಯ ಎಂದರೆ ಕೇವಲ ಕುವೆಂಪು, ಬೇಂದ್ರೆ, ತೇಜಸ್ವಿ ಎಂಬ ಹಿರಿಯ ಕವಿಗಳ ಪುಸ್ತಕಗಳಿಗೆ ಸೀಮಿತರಾಗುತ್ತಾರೆ. ಹೀಗಾದರೆ, ಯುವ ಸಾಹಿತಿಗಳ ಪುಸ್ತಕಗಳನ್ನು ಓದುವವರು ಯಾರು? ಈ ಕಾರಣದಿಂದಾಗಿ “ಹೊತ್ತಿಗೆ ನಿಮ್ಮ ಮನೆಗೆ’ ಅಂಚೆ ಗ್ರಂಥಾಲಯದಲ್ಲಿ ಕಾದಂಬರಿಗಳು, ಕಥೆ-ಕವನ, ಗಾದೆ, ನೀತಿ ಕಥೆ, ಆತ್ಮಚರಿತ್ರೆ, ಕನ್ನಡ ಕವಿಗಳ ಕಿರು ಪರಿಚಯ, ಕರ್ನಾಟಕದ ಐತಿಹಾಸಿಕ ಸ್ಥಳಗಳ ಪರಿಚಯ ಕುರಿತ ಪುಸ್ತಕಗಳು. ಹೀಗೆ ಪ್ರಸಿದ್ಧ ಹಿರಿಯ ಸಾಹಿತಿಗಳ ಪುಸ್ತಕಗಳ ಜತೆಗೆ ಯುವ ಸಾಹಿತಿಗಳ ಪುಸ್ತಕಗಳು ಒಳಗೊಂಡಂತೆ ಸುಮಾರು 2000ದಷ್ಟು ಕನ್ನಡ ಪುಸ್ತಕಗಳ ಭಂಡಾರ ಇವರಲ್ಲಿದೆ.

ಪ್ರಶಸ್ತಿಯೂ ಇದೆ: ಇನ್ನು ಪುಸ್ತಕ ಓದಿ ವಾಪಸ್‌ ಕೊಡುವಾಗ ಕಡ್ಡಾಯವಾಗಿ ಆ ಪುಸ್ತಕದ ಬಗ್ಗೆ ಟಿಪ್ಪಣಿ ಅಥವಾ ವಿಮರ್ಶೆ ಬರೆಯಬೇಕು. ಕನ್ನಡ ಪುಸ್ತಕ ಗಳನ್ನು ಓದುವವರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಓದುಗರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಉತ್ತಮ ಓದುಗ’ ಅಥವಾ “ತಿಂಗಳ ಓದುಗ’ ಎಂಬ ಪ್ರಶಸ್ತಿ ಕೊಡಲಾಗುತ್ತದೆ ಎಂದು ಮಧುಶ್ರೀ ಹೇಳುತ್ತಾರೆ.

Advertisement

ಪುಸ್ತಕ ಪಡೆಯುವುದು ಹೇಗೆ?: ಪುಸ್ತಕಗಳನ್ನು ಹಾಳುಮಾಡಬಾರದು, ಹಾಳೆಗಳನ್ನು ಕೀಳಬಾರದು ಎಂಬ ಉದ್ದೇಶದಿಂದಾಗಿ ಓದುಗರು 1,000 ರೂ.ಗಳನ್ನು ಕೊಟ್ಟು ಚಂದಾ ದಾರರಾದರೆ 3 ವರ್ಷಗಳವರೆಗೆ ಎಷ್ಟು ಪುಸ್ತಕಗಳನ್ನು ಬೇಕಾದರೂ ಉಚಿತವಾಗಿ ಓದಬಹು ದಾಗಿದೆ. ಆದರೆ, ಒಂದು ಪುಸ್ತಕವನ್ನು ಓದಿ 15 ದಿನಗಳೊಳಗಾಗಿ ವಾಪಸು ಮಾಡಬೇಕು. ಮನೆ ಬಾಗಿಲಿಗೆ ಪುಸ್ತಕ ಪಡೆಯುವ ಆಸಕ್ತವುಳ್ಳವರು ಸದ್ಯ 9686245871 ಹಾಗೂ 9606038101 ಈ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಮತ್ತು ಪುಸ್ತಕಗಳನ್ನು ಪಡೆಯಬಹು ದಾಗಿದೆ. ಮುಂದಿನ ದಿನಗಳಲ್ಲಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸುತ್ತಾರೆ.

ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆಯನ್ನು ವೃದ್ಧಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಗೂ ಕನ್ನಡ ಪುಸ್ತಕಗಳನ್ನು ಕಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಟ್ಟಾರೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಸದಾ ಹಸಿರಾಗಿರಬೇಕು. ●ಮಧುಶ್ರೀ, ಸಂಸ್ಥಾಪಕ ಅಧ್ಯಕ್ಷರು, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ

ಭಾರತಿ ಸಜ್ಜನ್‌

 

Advertisement

Udayavani is now on Telegram. Click here to join our channel and stay updated with the latest news.

Next