Advertisement

ಅಂಚೆಗಿದೆ ಸಂಬಂಧ ಬೆಸೆಯುವ ಶಕ್ತಿ: ಚಕ್ರವರ್ತಿ ಸೂಲಿಬೆಲೆ

04:45 AM Jul 02, 2018 | Karthik A |

ಉಡುಪಿ: ಈಗಿನ ಆಧುನಿಕ ಸಂವಹನ ವ್ಯವಸ್ಥೆಗಳು ವೇಗವಾಗಿರಬಹುದು. ಆದರೆ ಸಂಬಂಧಗಳನ್ನು ಬೆಸೆಯುವ, ಭಾವನೆಗಳನ್ನು ಹಾಗೆಯೇ ಉಳಿಸುವ ಶಕ್ತಿ ಇರುವುದು ಅಂಚೆಯಣ್ಣ ತಂದು ಕೊಡುವ ಪತ್ರಗಳಿಗೆ ಮಾತ್ರ. ಅಂತಹ ಪತ್ರ ಸಂವಹನ ಮತ್ತೆ ಹೆಚ್ಚಾಗಬೇಕು ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು. ರವಿವಾರ ಉಡುಪಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಅಂಚೆ ಮನೋರಂಜನಾ ಕೂಟ ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಅವರ ಸಹಯೋಗದಲ್ಲಿ ಜರಗಿದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಶಿಖರೋಪನ್ಯಾಸ ನೀಡಿದರು.

Advertisement

ಅಂಚೆ ಸೇವೆ ವಿಸ್ತಾರವಾದಂತೆ ಬರವಣಿಗೆಗೆ ಹೆಚ್ಚು ಪ್ರೋತ್ಸಾಹ ದೊರೆತಂತಾಗುತ್ತದೆ. ಅಂಚೆ ತಲುಪಿಸುವವನು ಹೃದಯವಂತ ಆಗಿರುವುದರಿಂದಲೇ ಅಂಚೆ ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಂಡಿದೆ. ಇಂದಿಗೂ ಅನೇಕ ಸೈನಿಕರು ಯುದ್ಧ ಭೂಮಿಯಿಂದ ರವಾನಿಸುವ ಪತ್ರಗಳು ಅವರ ಮನೆಗಳನ್ನು ತಲುಪುತ್ತಿವೆ. ಸೈನಿಕರು ವೀರ ಮರಣವನ್ನಪ್ಪಿದರೂ ಅವರ ಪತ್ರ, ಭಾವನೆಗಳು ನಮ್ಮೊಂದಿಗಿವೆ. ಅಂಚೆ ಇಲಾಖೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ. ಸಿಬಂದಿ ತಂತ್ರಜ್ಞಾನದಿಂದ ದೂರವಾಗಬಾರದು. ತಂತ್ರಜ್ಞಾನವನ್ನು ಒಪ್ಪಿಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತಾ ಬೆಳೆಯಬೇಕು. ಅಂಚೆ ವ್ಯವಸ್ಥೆ ನೂರುಕಾಲ ಪ್ರಭಾವಿಯಾಗಿಯೇ ಉಳಿಯುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.

ಸಾಹಿತ್ಯದಿಂದ ಸಂತೃಪ್ತಿ
ಸಾಹಿತ್ಯ ಅಂತರಂಗಕ್ಕೆ ಬೆಳಕು ಕೊಡುವಂತಿರಬೇಕು. ಅಕ್ಷರಗಳಿಂದ ಮಾತ್ರ ಅಂತರಂಗ ಅರಳಿಸಲು ಸಾಧ್ಯ. ಸಾಹಿತ್ಯ ಚಟುವಟಿಕೆಗಳು ಮರೆಯಾಗಬಾರದು. ಮನಸ್ಸು ಕ್ಷೋಭೆಗೊಳಗಾದಾಗ ನೆಮ್ಮದಿ ದೊರೆಯಲು ಸಾಹಿತ್ಯ ಬೇಕು ಎಂದು ಸೂಲಿಬೆಲೆ ಅಭಿಪ್ರಾಯಪಟ್ಟರು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಸಮ್ಮೇಳನಾಧ್ಯಕ್ಷ ರಾಜಶೇಖರ ಭಟ್‌, ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್‌, ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ರಾವ್‌ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುರೇಶ್‌ ಕೆ. ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next