Advertisement

Indian Post: ಸಣ್ಣ ಕೈಗಾರಿಕೆಗಳ ಉತ್ಪನ್ನ ರಫ್ತಿಗೆ ಅಂಚೆ ಇಲಾಖೆ ನೆರವು

10:58 PM Aug 13, 2023 | Team Udayavani |

ಬೆಂಗಳೂರು: ಪತ್ರಗಳಾಯಿತು, ಪಾರ್ಸೆಲ್‌ ಹಳೆಯದಾಯಿತು. ಈಗ ಸಣ್ಣ ಕೈಗಾರಿಕೆ ಉತ್ಪನ್ನಗಳನ್ನು ಅಂಚೆ ಮೂಲಕ ವಿದೇಶಗಳಿಗೆ ರಫ್ತು ಮಾಡಬಹುದು!
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರುಕಟ್ಟೆಗೆ ರವಾನಿಸಲು ಅಂಚೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ 1,001 ಡಾಕ್‌ಘರ್‌ ಅಂಚೆ ರಫ್ತು ಕೇಂದ್ರ ಸ್ಥಾಪಿಸಲು ಚಿಂತಿಸಿದೆ. ಅದರ ಭಾಗವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ ಉತ್ಪನ್ನಗಳನ್ನು ಜಾಗತಿಕವಾಗಿ ರಫ್ತು ಮಾಡಲು ರಾಜ್ಯದಲ್ಲಿ 73 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ದೂರದ ಹಳ್ಳಿಗಳ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ.

Advertisement

ಈ ವ್ಯವಸ್ಥೆ ಅಡಿ ಮಾರುಕಟ್ಟೆಗೆ ನೇರ ಸಂಪರ್ಕ ಹೊಂದಲು ರಾಜ್ಯದ ಕುಶಲಕರ್ಮಿಗಳು, ಸಣ್ಣ ಕೈಗಾರಿಕೆಗಳಿಗೆ ಸಾಧ್ಯವಾಗಲಿದೆ. ಪರಿಣಾಮ
ವಾಗಿ ಆದಾಯದ ಹೆಬ್ಟಾಗಿಲು ತೆರೆದುಕೊಳ್ಳಲಿದೆ. ಪ್ರಸ್ತುತ ಉಡುಪಿ ಜಿಐ ಟ್ಯಾಗ್‌ ಹೊಂದಿರುವ ಮಟ್ಟುಗುಳ್ಳ, ಚನ್ನಪಟ್ಟಣದ ಗೊಂಬೆ, ಬಳ್ಳಾರಿ ಜೀನ್ಸ್‌ (ಬಟ್ಟೆ), ಮೈಸೂರು ಸಿಲ್ಕ್ ಮತ್ತು ಸ್ಯಾಂಡಲ್‌, ಇಳಕಲ್‌ ಸೀರೆ ಸಹಿತ ವಿವಿಧ ಜಿಲ್ಲೆಗಳ ಉತ್ಪನ್ನಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರುಕಟ್ಟೆಗೆ ತಲುಪಲಿವೆ.

ಕುಶಲಕರ್ಮಿಗಳು ಮತ್ತು ಸಣ್ಣ ಕೈಗಾರಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಾರಂಭಿಸಿದ “ಒಂದು ಜಿಲ್ಲೆ-ಒಂದು ಉತ್ಪನ್ನ’ ಯೋಜನೆಗೆ ಡಾಕ್‌ಘರ್‌ ಅಂಚೆ ನಿರ್ಯಾತ ಕೇಂದ್ರ ನೆರವಾಗಲಿದೆ. ಈಗಾಗಲೇ ಚನ್ನಪಟ್ಟಣ, ಬೆಳಗಾವಿ, ಮೈಸೂರು, ಬೆಂಗಳೂರು, ಚಾಮರಾಜನಗರ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಂದೊಂದು ಕೇಂದ್ರ ಕಾರ್ಯನಿರ್ವಹಿಸುತ್ತಿವೆ.

ಆನ್‌ಲೈನ್‌ಗೆ ಆಪ್‌ಡೇಟ್‌
ಡಾಕ್‌ಘರ್‌ ನಿರ್ಯಾತ ಕೇಂದ್ರವು ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸಲಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ನಡೆಸುವ ಅಂತಾರಾಷ್ಟ್ರೀಯ ರಫ್ತು ಕೋಡ್‌ ಹೊಂದಿರುವವ ರಿಗೆ ಮಾತ್ರ ಕಸ್ಟಮ್ಸ್‌ ದಸ್ತಾವೇಜು ಪೂರ್ಣಗೊಳಿಸಲು ಸಾಧ್ಯವಿದೆ. ಗ್ರಾಹಕರು ಕಸ್ಟಮ್ಸ್‌ ಅಧಿಕಾರಿಗಳ ಸಮ್ಮುಖದಲ್ಲಿ ರಫ್ತು ಘೋಷಣೆಗಳನ್ನು ಸಲ್ಲಿಸಲು ವಿದೇಶಿ ಅಂಚೆ ಕಚೇರಿ-ಉಪ ಎಫ್ಪಿಒಎಸ್‌ಗಳಿಗೆ ಹೋಗಬೇಕಿಲ್ಲ. ಬದಲಿಗೆ ರಫ್ತುದಾರರು ಆರ್ಟಿಕಲ್‌ ಬುಕ್ಕಿಂಗ್‌ ಮಾಹಿತಿ ಯನ್ನು ಆಪ್‌ಲೋಡ್‌ ಮಾಡುವುದರ ಜತೆಗೆ ಆನ್‌ಲೈನ್‌ ಡಾಕ್‌ಘರ್‌ ಅಂಚೆ ನಿರ್ಯಾತದಲ್ಲಿ ಪೋಸ್ಟಲ್‌ ಬಿಲ್‌ ಎಕ್ಸ್‌ಪೋರ್ಟ್‌ ಫೈಲ್‌ ಮಾಡಬಹುದಾಗಿದೆ. ಆ ಮೂಲಕ ವಿಶ್ವಾದ್ಯಂತ ತಮ್ಮ ಉತ್ಪನ್ನಗಳನ್ನು ಎಂಡ್‌-ಟು-ಎಂಡ್‌ ಬುಕ್ಕಿಂಗ್‌, ಪ್ರಸರಣ, ವಿತರಣೆಯನ್ನು ನೋಡಿಕೊಳ್ಳುವ ಸಿಂಗಲ್‌ ವಿಂಡೋ ಕೌಂಟರ್‌ಗಳಾಗಿ ಈ ನಿರ್ಯಾತ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಪ್ರಸ್ತುತ 42 ಡಾಕ್‌ಘರ್‌ ಅಂಚೆ ನಿರ್ಯಾತ ಕೇಂದ್ರಗಳನ್ನು ತೆರೆಯಲಾಗಿದೆ. ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಉಳಿದ 31 ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಹಳ್ಳಿಯ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸಲು ಇದು ಸಹಾಯಕವಾಗಲಿದೆ.
-ರಾಜೇಂದ್ರ ಕುಮಾರ್‌, ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌, ಬೆಂಗಳೂರು ಅಂಚೆ ವೃತ್ತ.

Advertisement

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next