Advertisement
ಸವಾಯಿ ಗಂಧರ್ವರು ಡಾ|ಗಂಗೂಬಾಯಿ ಹಾನಗಲ್ಲ, ಪಂ| ಭೀಮಸೇನ ಜೋಶಿ, ಪಂ| ಬಸವರಾಜ ರಾಜಗುರು, ಪಂ| ಫಿರೋಜ್ ದಸ್ತೂರ್, ಮಾಸ್ಟರ್ ಕೃಷ್ಣರಾವ, ಇಂದಿರಾಬಾಯಿ ಖಾಡಿಲಕರ, ವಿ.ಎ.ಕಾಗಲಕರ, ನೀಲಕಂಠ ಬುವಾ ಗಾಡಿಗೋಳಿ, ವೆಂಕಟರಾವ ರಾಮದುರ್ಗ ಅವರಂತಹ ಹಲವು ದಿಗ್ಗಜ ಕಲಾವಿದರನ್ನು ಸಂಗೀತ ಲೋಕಕ್ಕೆ ನೀಡಿದ್ದಾರೆ. ಹಲವರಿಗೆ ರಾಷ್ಟ್ರಮಟ್ಟದ ಗೌರವ, ಸಮ್ಮಾನಗಳು ದೊರೆತಿವೆ. ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿ, ಲಕೋಟೆಗಳನ್ನು ಬಿಡುಗೊಡೆಗೊಳಿಸಿ ಸ್ಮರಿಸುವ ಕಾರ್ಯ ಮಾಡಿದೆ. ಇವರ ಸಂಗೀತ ಹಾದಿಗೆ ದೀಪವಾಗಿದ್ದ ಸವಾಯಿ ಗಂಧರ್ವರನ್ನು ಸರ್ಕಾರ, ಸಮಾಜ ಮರೆತುಬಿಟ್ಟಿತ್ತು. ಆದರೆ ಕುಟುಂಬದವರ ಸತತ ಪರಿಶ್ರಮದ ಫಲವಾಗಿ 5 ರೂ. ಮೌಲ್ಯದ ಅಂಚೆ ಚೀಟಿ ಬಿಡುಗಡೆಗೆ ಸಿದ್ಧಗೊಂಡಿದೆ.
Related Articles
Advertisement
ಮೇರು ಕಲಾವಿದರ ಅಂಚೆ ಚೀಟಿ ಕಾರ್ಯಕ್ರಮಕ್ಕೆ ಪಂ|ಸವಾಯಿ ಗಂಧರ್ವರ ಕುಟುಂಬದ ಸೋಮನಾಥ ಜೋಶಿ ಅವರಿಗೆ ಆಹ್ವಾನವಿತ್ತು. ಸವಾಯಿ ಗಂಧರ್ವರ ಶಿಷ್ಯರಾದ ಗಂಗೂಬಾಯಿ ಹಾನಗಲ್ಲ, ಪಂ| ಭೀಮಸೇನ ಜೋಶಿ ಇತರೆ 6 ಜನರ ಹೆಸರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಚೆ ಚೀಟಿ ಬಿಡುಗಡೆಗೊಳಿಸಿದ್ದರು. ಆ ಗೌರವ ಮನ ತುಂಬಿಕೊಂಡ ಸೋಮನಾಥ ಜೋಶಿ ಅವರಿಗೆ ತಮ್ಮ ಅಜ್ಜನ ಹೆಸರಿನಲ್ಲೂ ಒಂದು ಅಂಚೆ ಚೀಟಿ ಬರಬೇಕು ಎನ್ನುವ ಛಲ ಮೂಡಿತು. ಈ ಪ್ರೇರಣೆಯಿಂದ ಇಲಾಖೆಗೆ ಒಂದು ಪ್ರಸ್ತಾವನೆ ಸಲ್ಲಿಸಿದ್ದರು.
ಇದೇ ಮೊದಲೆಂಬ ಹೆಗ್ಗಳಿಕೆ:
ಓರ್ವ ವ್ಯಕ್ತಿ ಹೆಸರಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆಯಾಗುತ್ತಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲು. ಈಗಾಗಲೇ ಸಂಗೀತ ಕಲಾವಿದರ ಹೆಸರಲ್ಲಿ ಅಂಚೆ ಇಲಾಖೆಯೇ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಆದರೆ ಸ್ಥಳೀಯವಾಗಿ ಅದರಲ್ಲೂ ಸ್ವಂತ ಖರ್ಚಿನಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಯಿದೆ. ಸವಾಯಿ ಗಂಧರ್ವರು ಬೆಳೆದ ಊರು ಕುಂದಗೋಳದಲ್ಲಿ ಸಮಾರಂಭ ಆಯೋಜಿಸಲು ಚರ್ಚೆ ನಡೆದಿದ್ದವಾದರೂ ಅ.11ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.
“ಸವಾಯಿ ಗಂಧರ್ವ’ ಆಗಿದ್ದು ಹೇಗೆ?
1886, ಜ.19ರಂದು ಜನಿಸಿದ ಪಂ| ಸವಾಯಿ ಗಂಧರ್ವರ ಮೂಲ ಹೆಸರು ರಾಮಚಂದ್ರ ಕುಂದಗೋಳಕರ. ಮೈಸೂರು ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬರುತ್ತಿದ್ದ ಅಬ್ದುಲ್ ಕರೀಂ ಖಾನ್ ಈ ರಾಮಚಂದ್ರರಲ್ಲಿದ್ದ ಸಂಗೀತಾಸಕ್ತಿ ಶಿಷ್ಯನನ್ನಾಗಿಸಿತು. ಮಿರಜ್‌ನಲ್ಲಿ ಗುರುಗಳಿಂದ ತೋಡಿ, ಮುಲ್ತಾನಿ, ಪೂರಿಯಾ ರಾಗಗಳಲ್ಲಿ ಅಡಿಪಾಯ ದೊರೆತ ನಂತರ ಸ್ವಯಂ ಪರಿಶ್ರಮದಿಂದ ಉಳಿದ ರಾಗಗಳನ್ನು ತಮ್ಮ ಕೈವಶ ಮಾಡಿಕೊಂಡರು. ಪ್ರಸಿದ್ಧಿ ಪಡೆಯುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಮಭಾವು ಕುಂದಗೋಳಕರ ಆದರು. ನಾಗಪುರದಲ್ಲಿ ಬೃಹತ್ ಸಂಗೀತ ಸಮ್ಮೇಳನದಲ್ಲಿ ರಾಮಭಾವು ಅವರ ಸಂಗೀತ ಕೇಳುಗರನ್ನು ಬೆಕ್ಕಸ ಬೆರಗಾಗಿಸಿತು. ಅಧ್ಯಕ್ಷತೆ ವಹಿಸಿದ್ದ ಖ್ಯಾತ ವಿದ್ವಾಂಸ ದಾದಾಸಾಹೇಬ ಖಾಪರಡೆ ಅವರು ಇವನು ಗಂಧರ್ವನಲ್ಲ ಸವಾಯ್ ಗಂಧರ್ವ(ಉಳಿದ ಗಂಧರ್ವರಿಗಿಂತ ಒಂದು ಕಾಲುಪಟ್ಟು ಹೆಚ್ಚು)ಎಂದು ಹೊಗಳಿದರು. ಅಲ್ಲಿಂದ ಇವರು ಸವಾಯಿ ಗಂಧರ್ವರಾಗಿ ಹಿಂದುಸ್ತಾನಿ ಸಂಗೀತ ಲೋಕದ ಅನಭಿಷಿಕ್ತ ದೊರೆಯಾಗಿ ಬಾಳಿದರು.
ಸವಾಯಿ ಗಂಧರ್ವರ ಶಿಷ್ಯರ ಹೆಸರಲ್ಲಿ ಅಂಚೆ ಚೀಟಿ ಹೊರ ಬಂದಿದ್ದನ್ನು ನೋಡಿ ಖುಷಿಯಾಯಿತು. ಗುರುಗಳಿಗೂ ಈ ಗೌರವ ದೊರೆಯಬೇಕು ಎನ್ನುವ ಕಾರಣಕ್ಕೆ 2014ರಿಂದ ಕೈಗೊಂಡ ಸತತ ಪ್ರಯತ್ನ ಇದೀಗ ಕೈಗೂಡಿದೆ. ಇಲಾಖೆ ಸೂಚಿಸಿದ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಾಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪತ್ರ ಬರೆದು ಶುಲ್ಕ ಸಾಕಷ್ಟು ಕಡಿಮೆ ಮಾಡಿಸಿದರು. –ಸೋಮನಾಥ ಜೋಶಿ, ಸವಾಯಿ ಗಂಧರ್ವರ ಮೊಮ್ಮಗ
ಸಂಗೀತ ದಿಗ್ಗಜರೊಬ್ಬರ ವಿಶೇಷ ಅಂಚೆ ಚೀಟಿ ಸ್ಥಳೀಯವಾಗಿ ಅದರಲ್ಲೂ ಸ್ವಂತ ಖರ್ಚಿನಲ್ಲಿ ಬಿಡುಗಡೆಗೊಳಿಸುತ್ತಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಮೊದಲು. ಕಳೆದ ನಾಲ್ಕು ದಶಕಗಳಿಂದ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರನಾಗಿ ಕೆಲಸ ಮಾಡುತ್ತಿದ್ದು, ಇಂತಹ ಕಾರ್ಯಕ್ರಮ ಎಲ್ಲಿಯೂ ಆಯೋಜಿಸಿಲ್ಲ. –ಅಫ್ತಾಬ್ ಬೇಲೇರಿ, ಅಂಚೆ ಚೀಟಿ-ನಾಣ್ಯ ಸಂಗ್ರಹಕಾರರು
ಸವಾಯಿ ಗಂಧರ್ವರು ಸಂಗೀತ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಮೇರು ಕಲಾವಿದರನ್ನು ಸೃಷ್ಟಿಸಿದ್ದಾರೆ. ಅಂಚೆ ಇಲಾಖೆಯೇ ಸ್ವಂತ ಖರ್ಚಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಬಹುದಿತ್ತು. ಇದೀಗ ಕುಟುಂಬವೇ ಶುಲ್ಕ ಭರಿಸಿ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದೆ. ಹೀಗಾದರೂ ಅಂಚೆ ಚೀಟಿ ಹೊರ ಬರುತ್ತಿದೆ ಎನ್ನುವುದೇ ಸಂತಸ. –ಸತ್ಯಪ್ರಮೋದ ದೇಶಪಾಂಡೆ, ಅಂಚೆ ಚೀಟಿ-ನಾಣ್ಯ ಸಂಗ್ರಹಕಾರರು
ಹೇಮರಡ್ಡಿ ಸೈದಾಪುರ