ಮಂಗಳೂರು: ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಅಂಚೆ ಚೀಟಿ ಸಂಗ್ರಾಹಕರ ಸಂಘ ಸ್ಥಾಪಿಸಲು ಅಂಚೆ ಇಲಾಖೆ ಯೋಜಿಸಿದೆ ಎಂದು ಮಂಗಳೂರು ವಿಭಾಗೀಯ ಅಂಚೆ ಕಚೇರಿಯ ಹಿರಿಯ ಅಧೀಕ್ಷಕ ಶ್ರೀಹರ್ಷ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್, ಎಂಆರ್‌ಪಿಎಲ್‌ನ ಶಾಲೆಗಳಲ್ಲಿ ಈಗಾಗಲೇ ಅಂಚೆಚೀಟಿ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು, ಶಾರದಾ ವಿದ್ಯಾಲಯ ಕೂಡ ಆರಂಭಿಸಲು ಮುಂದಾಗಿದೆ. ಈ ಮೂಲಕ ಮಕ್ಕಳಲ್ಲಿ ಅಂಚೆ ಚೀಟಿಗಳ ಮಹತ್ವವನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಈ ಕ್ಲಬ್ ಮುಖೇನ ಶಾಲಾ ಮಟ್ಟದಲ್ಲಿ ಅಂಚೆ ಚೀಟಿ ಪ್ರದರ್ಶನ, ಕಾರ್ಯಾಗಾರ ನಡೆಸಲು ಅನುಕೂಲವಾಗುತ್ತದೆ ಹಾಗೂ ಅಂಚೆ ಚೀಟಿ ಸಂಗ್ರಹದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡುತ್ತದೆ. ಈ ಮೂಲಕ ಕೌಶಲ ಹಾಗೂ ಸಂಶೋಧನಾತ್ಮಕ ಮನೋಭಾವವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರದ ದೀನದಯಾಳ್ ಸ್ಪರ್ಶ್ ಎಂಬ ಯೋಜನೆ ಇದ್ದು, ಕಳೆದ ವರ್ಷ ದ.ಕ. ಜಿಲ್ಲೆಯ 2 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಂದಿತ್ತು ಎಂದರು.
ಅಂಚೆ ಇಲಾಖೆ ವತಿಯಿಂದ ಅ. 12ರಿಂದ 15ರ ವರೆಗೆ ನಗರದ ಟಿಎಂಎ ಪೈ ಕನ್ವೆನನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಕರ್ನಾಪೆಕ್ಸ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಪ್ರದರ್ಶನದಲ್ಲಿ ವಿಶೇಷ ಅಂಚೆ ಲಕೋಟೆಯು ಬಿಡುಗಡೆಗೊಂಡಿದ್ದವು. ತಲಾ 2,000 ಕವರ್‌ಗಳನ್ನು ಮುದ್ರಿಸಲಾಗಿದ್ದು, ತಲಾ 1,000ದಂತೆ ಕವರ್‌ಗಳನ್ನು ಮಾರಾಟಕ್ಕೆ ಪ್ರದರ್ಶನದಲ್ಲಿ ಇರಿಸಲಾಗಿದ್ದು, ಬಹುತೇಕ ಕವರ್‌ಗಳು ಮಾರಾಟವಾಗಿವೆ ಎಂದು ಹೇಳಿದರು.
10 ಲ. ರೂ. ಸ್ಟ್ಯಾಂಪ್ ಮಾರಾಟ
ನಗರದಲ್ಲಿ ನಡೆದ 4 ದಿನಗಳ ಕರ್ನಾಪೆಕ್ಸ್ ಅಂಚೆ ಚೀಟಿ ಪ್ರದರ್ಶನದಲ್ಲಿ 10 ಲಕ್ಷ ರೂ. ಮೌಲ್ಯದ ಅಂಚೆಚೀಟಿ, ಕವರ್‌ಗಳು ಮಾರಾಟವಾಗಿವೆ. ಮೈಸ್ಟ್ಯಾಂಪ್ ಗೆ ಉತ್ತಮ ಬೇಡಿಕೆ ಇದ್ದು, ಪಾಂಡೇಶ್ವರದ ಮುಖ್ಯ ಅಂಚೆ ಕಚೇರಿಯಲ್ಲಿ 300 ರೂ.ಗಳನ್ನು ನೀಡಿ ಅಂಚೆ ಚೀಟಿಗಳನ್ನು ಮುದ್ರಿಸಿಕೊಳ್ಳಬಹುದಾಗಿದೆ ಎಂದು ಶ್ರೀಹರ್ಷ ತಿಳಿಸಿದರು.