ಜಮ್ಮು : ಭಾರತೀಯ ವಾಯು ಪಡೆಯು ಪಾಕಿಸ್ಥಾನದ ಫಖ್‌ತೂನ್‌ಖ್ವಾ ಪ್ರಾಂತ್ಯದ ಮನ್‌ಶೇರಾ ಜಿಲ್ಲೆಯ ಬಾಲಕೋಟ್ ನಲ್ಲಿ ಇಂದು ಬಾಂಬ್ ದಾಳಿ ನಡೆಸಿ 300ಕ್ಕೂ ಅಧಿಕ ಜೈಶ್ ಉಗ್ರರನ್ನು ಬಲಿ ಪಡೆದು ಅವರ ತರಬೇತಿ ಶಿಬಿರಗಳನ್ನೆಲ್ಲ ನಾಶಪಡಿಸಿದ ತರುವಾಯ ಇದೀಗ ಜಮ್ಮು ಕಾಶ್ಮೀರದ ಭಾರತ-ಪಾಕ್ ಗಡಿಯಲ್ಲಿ ನೀರವತೆ ನೆಲೆಗೊಂಡಿದೆ.
ಆದರೂ ಯಾವುದೇ ಹೊತ್ತಿನಲ್ಲಿ ಪಾಕ್ ಸೇನೆ ಪ್ರತಿ ದಾಳಿ ನಡೆಸುವ ಸಂಭಾವ್ಯತೆಯನ್ನು ಅರಿತಿರುವ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲೀಗ ಸಂಪೂರ್ಣ ನೀರವ ಮೌನ ನೆಲೆಸಿದೆ. ಎಲ್ಲಿಂದಲೂ, ಯಾವುದೇ ಸ್ಥಳದಿಂದಲೂ ಅಹಿತಕರ ಘಟನೆ ನಡೆದ ವರದಿಗಳಿಲ್ಲ ಎಂದವರು ಹೇಳಿದರು.
ಭಾರತೀಯ ವಾಯು ಪಡೆ ವೈಮಾನಿಕ ದಾಳಿ ನಡೆಸುವ ಸ್ವಲ್ಪ ಮೊದಲು ಪಾಕ್ ಸೇನೆ ತನ್ನ ಎಂದಿನ ಚಾಳಿಯಂತೆ ಸಂಕ್ಷಿಪ್ತವಾಗಿ ಕದನ ವಿರಾಮ ಉಲ್ಲಂಘನೆಗೈದು ಗುಂಡಿನ ದಾಳಿ ನಡೆಸಿತ್ತು. ಅದೀಗ ಸಂಪೂರ್ಣ ನಿಂತುಹೋಗಿದೆ ಎಂದವರು ಹೇಳಿದರು.
‘ಜಮ್ಮುವಿನ ಸಾಂಬಾ ಮತ್ತು ಕಠುವಾ ಜಿಲ್ಲೆಗೆ ತಾಗಿಕೊಂಡಿರುವ ಸುಮಾರು 190 ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಈಗ ಶಾಂತಿ, ನೀರವತೆ ನೆಲೆಗೊಂಡಿದೆ; ಪಾಕಿಸ್ಥಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾದ ವರದಿಗಳಿಲ್ಲ’ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಜಮ್ಮು ಜಿಲ್ಲೆಯ ಕಾನಾಚಕ್ ವಲಯದಲ್ಲಿ ಪಾಕ್ ಕಡೆಯಿಂದ ಆಗೀಗ ಎಂಬಂತೆ ಗುಂಡಿನ ದಾಳಿ ನಡೆದಿತ್ತು ಎಂದವರು ಹೇಳಿದರು.
ಪಾಕಿಸ್ಥಾನದ ಖೈಬರ್ ಫಖ್‌ತೂನ್‌ಖ್ವಾ ಪ್ರಾಂತ್ಯದ ಮನ್‌ಶೇರಾ ಜಿಲ್ಲೆಯ ಬಾಲಕೋಟ್ ನಲ್ಲಿ ಭಾರತೀಯ ವಾಯು ಪಡೆಯ ಅನೇಕ ಫೈಟರ್ ಜೆಟ್‌ಗಳು ಯಶಸ್ವಿಯಾಗಿ ಜೈಶ್ ಉಗ್ರರ ಶಿಬಿರಗಳ ಮೇಲೆ ಮಾರಣಾಂತಿಕ ಬಾಂಬ್ ದಾಳಿ ನಡೆಸಿ ವ್ಯಾಪಕ ನಾಶ ನಷ್ಟ ಉಂಟುಮಾಡಿವೆ ಎಂದವರು ಹೇಳಿದರು.
ವಾಯು ದಾಳಿಯ ಬಳಿಕ ಪ್ರದಾನಿ ಮೋದಿ ಅವರ ನಿವಾಸದಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಪುಟ ಭದ್ರತಾ ಸಮಿತಿಯ ಸಭೆ ನಡೆದಿದೆ.