Advertisement

ರವಿ ಪೂಜಾರಿ ಹತ್ಯೆಗೆ ಸ್ಕೆಚ್‌ ಹಾಕಿದ್ದ ವಿಕ್ಕಿ!

04:51 AM Feb 04, 2019 | |

ಮಂಗಳೂರು: ಆಫ್ರಿಕಾದ ಸೆನೆಗಲ್‌ನಲ್ಲಿ ಸೆರೆಯಾಗಿರುವ ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಹತ್ಯೆಗೆ 2 ತಿಂಗಳ ಹಿಂದೆಯಷ್ಟೇ ಕರಾವಳಿ ಮೂಲದ ಮತ್ತೂಬ್ಬ ಭೂಗತ ಪಾತಕಿ ವಿಜಯ್‌ ಶೆಟ್ಟಿ ಯಾನೆ ವಿಕ್ಕಿ ಶೆಟ್ಟಿ ಸ್ಕೆಚ್‌ ಹಾಕಿದ್ದ ಎನ್ನುವ ಸ್ಫೋಟಕ ಮಾಹಿತಿ ಈಗ ಬಹಿರಂಗಗೊಂಡಿದೆ.

Advertisement

ಒಂದು ಕಾಲದಲ್ಲಿ ಒಂದೇ ಬಣ ದಲ್ಲಿದ್ದು, ಆಪ್ತರಾಗಿದ್ದ ಇವರಿಬ್ಬರು ಕೆಲವು ವರ್ಷಗಳಿಂದೀಚೆಗೆ ಬದ್ಧ ವೈರಿಗಳಾಗಿದ್ದರು. 2000ದಲ್ಲಿ ಬ್ಯಾಂಕಾಕ್‌ನಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ ಹತ್ಯೆಗೆ ದಾವೂದ್‌ ಬಣ ಸಂಚು ರೂಪಿಸಿತ್ತು. ಆಗ ರವಿ ಪೂಜಾರಿ ಛೋಟಾ ಶಕೀಲ್‌ ಮೂಲಕ ದಾವೂದ್‌ಗೆ ನೆರವಾಗಿದ್ದ ಎನ್ನಲಾಗುತ್ತದೆ. ಈ ಘಟನೆ ಬಳಿಕ ರವಿ ಪೂಜಾರಿ ಹಾಗೂ ವಿಕ್ಕಿ ಶೆಟ್ಟಿ ವಿರೋಧಿಗಳಾದರು.

ಒಂದೆರಡು ವರ್ಷಗಳಿಂದೀಚೆಗೆ ವಿಕ್ಕಿ ಶೆಟ್ಟಿಯ ಆಪ್ತ ಕೆಲವರಿಂದಲೇ ಹಫ್ತಾ ವಸೂಲಿಗೆ ರವಿ ಪೂಜಾರಿ ಯತ್ನಿಸುತ್ತಿದ್ದ. ಜತೆಗೆ ಕರಾವಳಿಯ ಇತರ ಕೆಲವು ಉದ್ಯಮಿಗಳಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಈ ಕಾರಣಕ್ಕೆ ರವಿ ಪೂಜಾರಿ ಮೇಲೆ ವಿಕ್ಕಿ ಶೆಟ್ಟಿಯ ಸಿಟ್ಟು ಉಲ್ಬಣಿಸಿತ್ತು. ರವಿ ಪೂಜಾರಿಯನ್ನು ಹೇಗಾದರೂ ಮುಗಿಸುವುದಕ್ಕೆ ತೀರ್ಮಾನಿಸಿ 2 ವರ್ಷ ಗಳಿಂದೀಚೆಗೆ ಹೊಂಚು ಹಾಕುತ್ತಿದ್ದ ಎನ್ನಲಾಗಿದೆ. 

ವಿಫ‌ಲವಾದ ಸಂಚು 
2 ತಿಂಗಳ ಹಿಂದೆ ರವಿ ಪೂಜಾರಿಯ ಹತ್ಯೆಗೆ ವಿಕ್ಕಿ ಶೆಟ್ಟಿಯು ಸೆನೆಗಲ್‌ ಸನಿಹದ ಐವರಿ ಕೋಸ್ಟ್‌ನಲ್ಲಿ ದೊಡ್ಡ ಮಟ್ಟದ ಸ್ಕೆಚ್‌ ಹಾಕಿದ್ದ ಎನ್ನುವ ಮಾಹಿತಿ ಈಗ ಗುಪ್ತಚರ ಇಲಾಖೆ ಮೂಲಗಳಿಂದ “ಉದಯ ವಾಣಿ’ಗೆ ಲಭಿಸಿದೆ. ರವಿ ಪೂಜಾರಿ 2 ವರ್ಷಗಳಿಂದೀಚೆಗೆ ಆಫ್ರಿಕಾದ ದೇಶಗಳಲ್ಲೇ ಹೆಚ್ಚಾಗಿ ವ್ಯವಹಾರ ನಡೆಸುತ್ತ ಅಲ್ಲೇ ಸುತ್ತಾಡುತ್ತಿದ್ದ. ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ವಿಕ್ಕಿ ಶೆಟ್ಟಿ ತಂಡವು, ಐವರಿಕೋಸ್ಟ್‌rಗೆ ವ್ಯವಹಾರ ಸಂಬಂಧವಾಗಿ ರವಿ ಪೂಜಾರಿ ಬರುವ ಬಗ್ಗೆ ಮಾಹಿತಿ ಪಡೆದು ಹತ್ಯೆಗೆ ವಿಕ್ಕಿ ಶೆಟ್ಟಿ ಸಂಚು ರೂಪಿಸಿದ್ದ. ಆದರೆ ಆ ದಿನ ರವಿ ಪೂಜಾರಿ ಐವರಿ ಕೋಸ್ಟ್‌ಗೆ ಬರದೆ ಪಾರಾಗಿದ್ದ ಎನ್ನಲಾಗಿದೆ. 

ವಾರದೊಳಗೆ ಗಡೀಪಾರು
ಪೊಲೀಸ್‌ ಮೂಲಗಳ ಪ್ರಕಾರ, ಬೆಂಗಳೂರು ಹಾಗೂ ಹೊಸದಿಲ್ಲಿಯಿಂದ ಉನ್ನತ ಮಟ್ಟದ ಪೊಲೀಸರು ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವುದಕ್ಕೆ ಸೆನೆಗಲ್‌ ತಲುಪಿದ್ದಾರೆ. ಇಂಟರ್‌ಪೋಲ್‌ ಮೂಲಕ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ರವಿ ಪೂಜಾರಿ ಗಡೀಪಾರಿಗೆ ಬೇಕಾದ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಸೆನೆಗಲ್‌ನಂಥ ಸಣ್ಣ ದೇಶಗಳಿಗೆ ರವಿ ಪೂಜಾರಿಯಂಥ ಭೂಗತ ಪಾತಕಿಯ ಬಂಧನ ಅಷ್ಟೊಂದು ಮಹತ್ವದ್ದಲ್ಲ. ಹೀಗಾಗಿ ಆತನನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಠಿನ ಕಾನೂನು ಪ್ರಕ್ರಿಯೆಗೆ ಒಳಪಡಿಸುವ ಬದಲು ಭಾರತೀಯ ರಾಯಭಾರಿ ಕಚೇರಿ ನೆರವಿನೊಂದಿಗೆ ಆದಷ್ಟು ಬೇಗ ಗಡೀಪಾರು ಮಾಡುವ ಸಾಧ್ಯತೆಯೇ ಹೆಚ್ಚು. ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅನಂತರ ಬೇರೆ ಬೇರೆ ಪ್ರಕರಣಗಳ ಸಂಬಂಧ ವಿಚಾರಣೆಗೆ ಪೊಲೀಸರಿಗೆ ಹಸ್ತಾಂತರಿಸುವ‌ ಸಾಧ್ಯತೆಯಿದೆ ಎಂದು ಉನ್ನತ ಪೊಲೀಸ್‌ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

ಸಹಚರರಿಗೆ ನಡುಕ
ರವಿ ಪೂಜಾರಿ ವಾರದೊಳಗೆ ಭಾರತಕ್ಕೆ ಗಡೀಪಾರು ಆಗುವ ವಿಚಾರ ಖಚಿತ ವಾಗುತ್ತಿದಂತೆ ಮಂಗಳೂರು, ಉಡುಪಿ, ಬೆಂಗಳೂರು, ಮುಂಬಯಿ ಮುಂತಾದೆಡೆ ಹಫ್ತಾ ವಸೂಲಿ ಹಾಗೂ ಬೆದರಿಕೆ ಕರೆಗಳಿಗೆ ನೆರವಾಗುತ್ತಿದ್ದ ಆತನ ಸಹಚರರಿಗೆ ನಡುಕ ಆರಂಭವಾಗಿದೆ. ಆತನಿಗೆ ಸ್ಥಳೀಯವಾಗಿ ಕೆಲವರು ನೆರವು ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಅನುಮಾನವಿದೆ. ಹೀಗಾಗಿ ಆತನನ್ನು ಭಾರತಕ್ಕೆ ಕರೆತಂದ ಬಳಿಕ ಆತ ಸ್ಥಳೀಯವಾಗಿ ಯಾವೆಲ್ಲ ವ್ಯಕ್ತಿಗಳ ಜತೆಗೆ ಸಂಪರ್ಕ ಹೊಂದಿದ್ದ ಎಂಬಿತ್ಯಾದಿ ಮಹತ್ವದ ವಿಚಾರ ಬಹಿರಂಗಗೊಳ್ಳುವ ಸಾಧ್ಯತೆಯಿದೆ.  

ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next