Advertisement

ಕುಂದಾಪುರ ನಗರಕ್ಕೆ ನೆರೆ ಭೀತಿ ಸಾಧ್ಯತೆ; ಮೀನುಗಾರಿಕೆ, ಚಿಪ್ಪು ಸಂಗ್ರಹಕ್ಕೆ ಸಂಕಷ್ಟ

03:23 PM Jun 10, 2024 | Team Udayavani |

ಕುಂದಾಪುರ: ನಗರದ ಜೀವನಾಡಿಯಂತಿರುವ ಪಂಚಗಂಗಾವಳಿ ನದಿಯಲ್ಲಿ ಹೂಳು ತುಂಬಿದ್ದು ಹೀಗೇ ಬಿಟ್ಟರೆ ನಗರದೊಳಗೆ ನೀರು ನುಗ್ಗುವ ಆತಂಕ ಉಂಟಾಗಿದೆ. ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹಕ್ಕೆ ದೋಣಿ ಕೊಂಡೊಯ್ಯುವುದೇ ಕಷ್ಟವಾಗಿದೆ. ಹೂಳು ತೆಗೆದರೆ ಇವೆಲ್ಲ ಸರಾಗವಾಗಲಿದ್ದು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ.

Advertisement

ನದಿ ನಂಬಿದ ಬದುಕು
ನೂರಾರು ವರ್ಷಗಳಿಂದ ಖಾರ್ವಿಕೇರಿ ಪರಿಸರ ಹಾಗೂ ಇತರರ ಪೂರ್ವಜರು ಈ ನದಿಯನ್ನು ಅವಲಂಬಿತರಾಗಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಕುಟುಂಬಗಳ ಪಾಲಿಗೆ ಇದು ಜೀವನದಿ. ಮೀನುಗಾರಿಕೆ, ಚಿಪ್ಪು ಹೆಕ್ಕುವಂತದ್ದು, ಪಂಜರ ಮೀನು ಸಾಕಾಣಿಕೆ, ಪ್ರವಾಸಿಗರನ್ನು ಕರೆದೊಯ್ಯುವ ದೋಣಿ ಚಲಿಸುವಂತದ್ದು, ಪ್ರವಾಸೋದ್ಯಮ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿರುತ್ತದೆ. ಹೊಸ ಬಸ್‌ ನಿಲ್ದಾಣ ಸಮೀಪ ಸಂತೆ ನಡೆಯುತ್ತಿದ್ದಾಗ ದೋಣಿ ಮೂಲಕ ಗುಡ್ಡಮ್ಮಾಡಿ, ಕೊಲ್ಲೂರು ಭಾಗದಿಂದ ಕಾಯಿ, ಬೆಲ್ಲ ಮೊದಲಾದ ಸಾಮಾನು ಸರಂಜಾಮು ತರುತ್ತಿದ್ದ ದಾಖಲೆಗಳಿವೆ. ಕೋರ್ಟು ಎದುರಿನ ಮೈದಾನದಲ್ಲಿ ಎತ್ತಿನ ಗಾಡಿಗಳು ನಿಲ್ಲುತ್ತಿದ್ದವು.

ತೊಂದರೆ
ಹೂಳು ತುಂಬಿದ ಕಾರಣ ಮಳೆಗಾಲದಲ್ಲಿ ಕೃತಕ ನೆರೆ ಬಂದು ತಗ್ಗು ಪ್ರದೇಶದಲ್ಲಿ ಬದುಕುವ ಖಾರ್ವಿಕೇರಿಯ ಮನೆಗಳಿಗೆ
ಜೋರು ಮಳೆ ಬಂದರೆ ಈಗಾಗಲೇ ಆಗಾಗ ನೀರು ನುಗ್ಗಿ ಅವಾಂತರ ಉಂಟಾ ಗಿದೆ. ನದಿ ಪಾತ್ರ ಹೂಳಿನಿಂದ ಮುಚ್ಚಿರುವುದ
ರಿಂದ ದೋಣಿಗಳು ಯಾವುದೇ ದಿಕ್ಕಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಇಳಿತ ಕಾಲದಲ್ಲಿಯೂ ನದಿ ಮೈದಾನದಂತೆ ಮತ್ತು ಮರುಭೂಮಿಯಂತೆ ಗೋಚರಿಸುತ್ತದೆ. ಇಲ್ಲಿ ಕಾಂಡ್ಲಾ ಗಿಡಗಳನ್ನು ಬೆಳೆದಿದ್ದು, ಅರಣ್ಯ ಇಲಾಖೆ ತೆರವುಗೊಳಿಸಲು ಬಿಡುತ್ತಿಲ್ಲ. ಕಾಂಡ್ಲಾವನ ಸೃಷ್ಟಿಯಾದರೆ ಪಂಚಗಂಗಾವಳಿ ನದಿ ಇತಿಹಾಸ ಪುಟ ಸೇರಲಿದೆ ಎಂಬ ಆತಂಕ ಜನರದ್ದು. ಬಡ ಮೀನುಗಾರರ ಜೀವನ ಸಂಕಷ್ಟ ಕ್ಕೀಡಾಗಿದೆ. ಪ್ರವಾಸೋದ್ಯಮ ಅವಕಾಶ ಕುಂಠಿತವಾಗಿವೆ. ಕುಂದಾಪುರ ದಿಂದ ಗಂಗೊಳ್ಳಿಗೆ ದೋಣಿ ಚಲನೆ ಸ್ತಬ್ಧವಾಗಿದೆ.

ಹೂಳು ತೆಗೆದರೆ
ತುಂಬಿದ ಹೂಳನ್ನು ನದಿಯಿಂದ ತೆಗೆದರೆ ನದಿ ಅವಲಂಬಿತರ ಬದುಕು ಹಸನಾಗಲಿದೆ. ಪ್ರವಾಸೋದ್ಯಮ ಸಲುವಾಗಿ ಕುಂದಾಪುರದಿಂದ ಗಂಗೊಳ್ಳಿ, ಬಬ್ಬುಕುದ್ರು, ಬಸ್ರೂರು, ಕೋಡಿ ಮೊದಲಾದೆಡೆಗೆ ದೋಣಿ ಯಾನ ನಡೆಸಬಹುದು. ಕೇವಲ 12 ನಿಮಿಷಗಳಲ್ಲಿ ಗಂಗೊಳ್ಳಿ ತಲುಪಲು ಸಾಧ್ಯವಿದೆ. ರಸ್ತೆ ಮೂಲವಾದರೆ 17 ಕಿ.ಮೀ. ದೂರ ಹೋಗಬೇಕು. ಗಂಗೊಳ್ಳಿ ಜನತೆಗೆ ಕುಂದಾಪುರಕ್ಕೆ ಆಗಮಿಸಲು ದೊಡ್ಡ ಸೇತುವೆ ನಿರ್ಮಾಣಕ್ಕಿಂತ ಸಮೀಪದ ದಾರಿ ಇದಾಗಿದೆ. ಬೋಟ್‌ ಹೌಸ್‌ ಮಾದರಿಯಲ್ಲಿ ಪ್ರವಾಸಿಗರ ಆಕರ್ಷಣೆಗೆ ಉತ್ತೇಜನ ನೀಡಬಹುದು. ಉತ್ತರಕನ್ನಡ ಮಾದರಿಯಲ್ಲಿ ಕಾಂಡ್ಲಾವನ ಪ್ರವಾಸವೂ ನಡೆಸಬಹುದು. ಪಂಜರ ಮೀನುಗಾರಿಕೆಗೆ ಸಹಾಯವಾಗಲಿದೆ. ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹದ ದೋಣಿಗಳ ಓಡಾಟ ಸಲೀಸಾಗಲಿದೆ. ಮುಖ್ಯವಾಗಿ ನಗರಕ್ಕೆ ನೆರೆ ಬರುವುದನ್ನು ತಪ್ಪಿಸಬಹುದಾಗಿದೆ.

ಮರಳುಗಾರಿಕೆ ನಡೆಯದೆ ತುಂಬಿದ ಹೂಳು
ಈ ಹಿಂದೆ ಈ ನದಿ ಪಾತ್ರದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿತ್ತು. ಪರಿಣಾಮ ನದಿ ಪಾತ್ರದಲ್ಲಿ ಹೂಳು ಶೇಖರಣೆಯಾಗುತ್ತಿರಲಿಲ್ಲ. ನದಿ ಆಳವಾಗಿದ್ದು ದೋಣಿಗಳು ಸರಾಗವಾಗಿ ಚಲಿಸುತ್ತಿತ್ತು. ಇತ್ತೀಚಿಗೆ ಹೊಸ ಕಾನೂನಿನ ಪರಿಣಾಮ ಯಾವುದೇ ಮರಳುಗಾರಿಕೆ ನಡೆಯುತ್ತಿಲ್ಲ. ಜತೆಗೆ ಒಂದಷ್ಟು ಅಣೆಕಟ್ಟುಗಳ ನಿರ್ಮಾಣದ ಮೂಲಕ ನದಿಯಲ್ಲಿ ಸಹಜ ಹರಿವಿನ ನೀರಿನ ಕೊರತೆಯಾಗಿದೆ. ಮರಳು, ಹೂಳು ಶೇಖರಣೆಗೊಂಡು ನದಿ ಬತ್ತಿದ ರೀತಿಯಲ್ಲಿ ಕಾಣುವಂತೆ ತುಂಬಿದೆ. ಸಮುದ್ರದ ಭರತ ಇಳಿತ ಸಂದರ್ಭವಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

Advertisement

ಗಮನಕ್ಕೆ ತರಲಾಗುವುದು 
ಪಂಚಗಂಗಾವಳಿ ಹೂಳು ತೆಗೆಯುವ ಅವಶ್ಯವಿದೆ. ನದಿ ಬತ್ತಿದಂತೆ ಕಾಣುತ್ತದೆ. ಇದು ಸರಕಾರದ ಹಂತದಲ್ಲಿ ತೀರ್ಮಾನ ಆಗಬೇಕಾದ ಕಾರಣ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.
-ರಶ್ಮಿ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

ಹೂಳು ತೆಗೆಯುವ ಅಗತ್ಯವಿದೆ
ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ಇದ್ದಾಗ ಹೂಳು ತುಂಬುತ್ತಿರಲಿಲ್ಲ. ಮರಳುಗಾರಿಕೆ ನಿಷೇಧದ ಬಳಿಕ, ಅಣೆಕಟ್ಟು
ನಿರ್ಮಾಣವಾಗಿ ನದಿಗೆ ನೀರಿನ ಹರಿವು ಕಡಿಮೆಯಾದ ಬಳಿಕ ಹೂಳು ತುಂಬಿದೆ. ಮೀನುಗಾರಿಕೆ, ಚಿಪ್ಪುಸಂಗ್ರಹ, ನಗರದ
ನೆರೆ ಭೀತಿ ಹೋಗಲಾಡಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಅನೇಕ ಕಾರಣಗಳಿಗಾಗಿ ಪಂಚಗಂಗಾವಳಿಯ
ಹೂಳು ತೆಗೆಯುವ ಅಗತ್ಯವಿದೆ.
ಅಭಿನಂದನ್‌ ಶೆಟ್ಟಿ, ಉದ್ಯಮಿ, ಕುಂದಾಪುರ

* ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next