ಹುಬ್ಬಳ್ಳಿ: ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದರು.
ನ. 3ರ ಶುಕ್ರವಾರ ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಅವರೆಲ್ಲ ಆಯಾ ಕ್ಷೇತ್ರದ, ಮುಖಂಡರು, ಕಾರ್ಯಕರ್ತರುಗಳನ್ನು ಭೇಟಿ ಆಗಿ ಬಂದಿದ್ದಾರೆ. ಈಗಾಗಲೇ ಅಭ್ಯರ್ಥಿಗಳ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ಇನ್ನು ವರದಿ ಕೊಟ್ಟಿಲ್ಲ. ಪಕ್ಷದ ವರಿಷ್ಠರು ಸಹ ಕೆಲವು ಸಲಹೆ ನೀಡಿದ್ದಾರೆ ಎಂದರು.
ಬಿಜೆಪಿಯವರು ಬರ ಸಮೀಕ್ಷೆ ಮಾಡಲಿ, ಅವರು ದೆಹಲಿಗೆ ಹೋಗಿ ವರದಿ ಕೊಡಲಿ. ನಮ್ಮ ಸರ್ಕಾರ ಸಚಿವರಾದ ಚಲುವರಾಯ ಸ್ವಾಮಿ, ಕೃಷ್ಣಭೈರೆಗೌಡ ನೇತೃತ್ವದ ಬರ ಅಧ್ಯಯನ ತಂಡ ಎಲ್ಲಾ ಜಿಲ್ಲೆಗಳಿಗೆ ಹೋಗಿ ಸಮೀಕ್ಷೆ ಮಾಡಿ ವರದಿ ಕೊಟ್ಟಿದ್ದು, ಸರ್ಕಾರವು 175 ತಾಲೂಕಗಳನ್ನು ಬರ ಎಂದು ಘೋಷಣೆ ಮಾಡಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಖಾತೆಯಲ್ಲಿ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಮೀಸಲಿಡಲಾಗಿದೆ ಎಂದರು.
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ನಮ್ಮಲ್ಲಿ ಅಸಮಾಧಾನ ಎಲ್ಲಿದೆ. ಬಿಜೆಪಿಯವರಿಗೆ ಇಂದಿಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗುತ್ತಿಲ್ಲ. ದೇಶದ, ರಾಜ್ಯದ ಇತಿಹಾಸದಲ್ಲಿ ಸರ್ಕಾರ ರಚನೆ ಆಗಿ ಐದು ತಿಂಗಳು ಕಳೆದರೂ ವಿಪಕ್ಷ ನಾಯಕನನ್ನು ನೇಮಕ ಮಾಡುವ ಸಾಮರ್ಥ್ಯ ಬಿಜೆಪಿಗಿಲ್ಲವಾಗಿದೆ ಎಂದು ಕುಟುಕಿದರು.
ಕರ್ನಾಟಕ ನಾಮಕರಣಗೊಂಡು 50 ವರ್ಷವಾಗಿದ್ದು, ಎಲ್ಲರಿಗೂ ಇದೊಂದು ಸುವರ್ಣಾವಕಾಶ. ಇಡೀ ವರ್ಷ ಹಬ್ಬ ಆಚರಣೆಗೆ ತೀರ್ಮಾನ ಮಾಡಿದ್ದೇವೆ. ವಿಜಯನಗರದ ಐತಿಹಾಸಿಕ ಹಂಪಿಯಿಂದ ಜ್ಯೋತಿ ಆರಂಭವಾಗಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಮುಂದಿನ ಭಾಗವಾಗಿ ಇವತ್ತು ಗದಗದಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಇವತ್ತು 10 ಜನ ಮಂತ್ರಿಗಳು ಗದಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮುಖ್ಯಮಂತ್ರಿಗಳು ಈಗಾಗಲೇ ಭುವನೇಶ್ವರಿ ಭವನ ನಿರ್ಮಿಸಲು ತೀರ್ಮಾನ ಮಾಡಿದ್ದಾರೆ ಎಂದರು.
ನಿಗಮ, ಮಂಡಳಿ ನೇಮಕ ಯಾವಾಗ ಎಂದಾಗ, ನೀವು ಹೇಳಿದಾಗ ಎಂದು ಜಾರಿಕೊಂಡರು.