ಲಕ್ನೋ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ಶುಕ್ರವಾರ ಲಕ್ನೋದ ಎಖಾನಾ ಮೈದಾನದಲ್ಲಿ ನಡೆದಿದೆ. ತವರು ತಂಡ ಎಲ್ ಸಿಜಿ ಆಡುತ್ತಿದ್ದರೂ, ಲಕ್ನೋ ಮೈದಾನದಲ್ಲಿ ಚೆನ್ನೈ ತಂಡದ ಬೆಂಬಲಿಗರು ತುಂಬಿದ್ದರು. ಅದಕ್ಕೆ ಪ್ರಮುಖ ಕಾರಣ ಸಿಎಸ್ ಕೆ ಸ್ಟಾರ್ ಮಹೇಂದ್ರ ಸಿಂಗ್ ಧೋನಿ.
ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ ಐಪಿಎಲ್ ಆಡುವ ಕಾರಣ ಯಾವುದೇ ಮೈದಾನದಲ್ಲೂ ಅಭಿಮಾನಿಗಳ ಪ್ರೀತಿ ಪಡೆಯುತ್ತಾರೆ. ಈ ಬಾರಿಯ ಕೂಟದಲ್ಲಿ ಡೆತ್ ಓವರ್ ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಧೋನಿ ಬ್ಯಾಟಿಂಗ್ ಗೆ ಬರುವುದನ್ನೇ ಅಭಿಮಾನಿಗಳು ಕಾಯುತ್ತಿರುತ್ತಾರೆ.
ಸಿಎಸ್ ಕೆ ಇನ್ನಿಂಗ್ಸ್ ನ ಕೊನೆಯಲ್ಲಿ ಧೋನಿ ಬ್ಯಾಟಿಂಗ್ ಗೆ ಮೈದಾನದಲ್ಲಿ ಇಳಿದಾಗ ಸ್ಟೇಡಿಯಂನಲ್ಲಿ ನೆರೆದಿದ್ದ 45 ಸಾವಿರಕ್ಕೂ ಹೆಚ್ಚು ಮಂದಿ ಕರಡಾತನ ಮಾಡಿದರು. ಈ ಸದ್ದು ಎಷ್ಟಿತ್ತೆಂದರೆ ಇದೇ ಸದ್ದು ಹತ್ತು ನಿಮಿಷ ಇದ್ದರೆ ನಿಮಗೆ ಕಿವುಡುತನ ಬರಬಹುದು!
ಇದರ ಬಗ್ಗೆ ಎಲ್ ಸಿಜಿ ಆಟಗಾರ ಕ್ವಿಂಟನ್ ಡಿಕಾಕ್ ಪತ್ನಿ ಸಾಶಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಪೋಸ್ಟ್ ಒಂದು ಭಾರಿ ಸದ್ದು ಮಾಡುತ್ತಿದೆ.
“ಜೋರಾದ ಪರಿಸರ. ಧ್ವನಿಯ ಮಟ್ಟವು 95 ಡೆಸಿಬಲ್‌ಗಳನ್ನು ಮುಟ್ಟುತ್ತದೆ. ಈ ಮಟ್ಟದಲ್ಲಿ ಕೇವಲ 10 ನಿಮಿಷಗಳಿದ್ದರೆ ತಾತ್ಕಾಲಿಕ ಶ್ರವಣ ನಷ್ಟವನ್ನು ಉಂಟುಮಾಡಬಹುದು” ಎಂದು ತನ್ನ ಸ್ಮಾರ್ಟ್‌ವಾಚ್ ತೋರಿಸಿದ ಟಿಪ್ಪಣಿಯನ್ನು ಸಾಶಾ ಡಿ ಕಾಕ್ ಪೋಸ್ಟ್ ಮಾಡಿದ್ದಾರೆ.
17.5 ಓವರ್ ಗಳಲ್ಲಿ ಸಿಎಸ್ ಕೆ 141 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದಾಗ ಧೋನಿ ಕ್ರೀಸ್ ಗೆ ಆಗಮಿಸಿದರು. ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ಧೋನಿ ಕೇವಲ 9 ಎಸೆತಗಳಲ್ಲಿ ಅಜೇಯ 28 ರನ್ ಪೇರಿಸಿದರು. ಇದರೊಂದಿಗೆ ಸಿಎಸ್ ಕೆ 176 ರನ್ ಗಳಿಸಲು ಸಹಾಯ ಮಾಡಿದರು.
ಸಿಎಸ್ ಕೆ ಸವಾಲನ್ನು ಎಲ್ಎಸ್ ಜಿ ಸುಲಭವಾಗಿ ಎದುರಿಸಿತು. ಕೇವಲ ಎರಡು ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಗುರಿ ತಲುಪಿತು. ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಅರ್ಧಶತಕ ಹೊಡೆದರು.