Advertisement
ಮಂಗಳೂರು: ನಾಲ್ಕಾರು ಹಾಲಿ ಶಾಸಕರಿಗೆ ಟಿಕೆಟ್ ಈ ಬಾರಿ ಸಿಗದು ಎನ್ನುವ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ದ.ಕ. ಜಿಲ್ಲೆಯ ಬಿಜೆಪಿ ಪಾಳಯದಲ್ಲೂ ಸಣ್ಣದೊಂದು ಸಂಚಲನಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಎಲ್ಲೂ ಯಾರನ್ನೂ ಉದ್ದೇಶಿಸಿ ಹೇಳಿದಂತೆ ಇಲ್ಲ, ಆದರೆ ಇದು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಸಾಕಷ್ಟು ಮಾಡಿಲ್ಲ ಎಂಬ ದೂರು ಎದುರಿಸುತ್ತಿರುವ ಶಾಸಕರಿಗೆ ತಲೆಬಿಸಿಗೆ ಕಾರಣವಾಗಿದೆ.
Related Articles
ಲಭ್ಯ ಆಂತರಿಕ ಮೂಲಗಳ ಪ್ರಕಾರ ಈ ಬಾರಿ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲೂ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಮಾದರಿಯಲ್ಲೇ ಹಳೆಯ ಹಾಗೂ ವರ್ಚಸ್ಸು ಕಳೆದುಕೊಂಡವರ ಬದಲಿಗೆ ಹೊಸಮುಖಗಳನ್ನು ಪರಿಚಯಿಸುವ ಆಲೋಚನೆ ಯಲ್ಲಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಿರಂತರವಾಗಿ ಒಬ್ಬರೇ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬದಲಾವಣೆ ಬೇಕು ಎನ್ನುವ ಕಾರ್ಯಕರ್ತರ ಹಾಗೂ ಸ್ಥಳೀಯ ಮತದಾರರ ಕೂಗಿಗೆ ಹೈಕಮಾಂಡ್ ಮನ್ನಣೆ ನೀಡಲೂಬಹುದು. ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರೊಂದಿಗೆ ಉತ್ತಮ ಸಂವಹನ, ಸಂಬಂಧ ಹೊಂದಿರದ ಹೊಸಬರೂ ಅವಕಾಶ ಕಳೆದುಕೊಳ್ಳಬಹುದು ಎಂಬ ಮಾತು ಕೇಳಿಬಂದಿದೆ.
Advertisement
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು, ಕೆಲವು ಶಾಸಕರ, ಸಚಿವರ ನಡವಳಿಕೆಗಳು ಜನರಲ್ಲಿ ಬೇಸರ ಉಂಟು ಮಾಡಿರುವ ಅರಿವು ಹೈಕಮಾಂಡ್‌ಗೆ ಇದೆ. ಹಾಗಾಗಿ ಗುಜರಾತ್, ಹಿಮಾಚಲದ ರೀತಿ ಯಲ್ಲೇ ಅಭ್ಯರ್ಥಿಗಳ ಕೆಲಸ, ವರ್ಚಸ್ಸು, ವಯಸ್ಸು ಎಲ್ಲವನ್ನೂ ಪರಿಗಣಿಸಿ ಆಯ್ಕೆ ಮಾಡುವ ಸಂದರ್ಭವೇ ಹೆಚ್ಚು. ಹಾಗಾಗಿ ಬಿಎಸ್‌ವೈ ಹೇಳಿದ್ದರಲ್ಲಿ ಅಚ್ಚರಿಯಿಲ್ಲ, ಅವರು ಹೈಕಮಾಂಡ್‌ನ ನಿಲುವನ್ನೇ ಹೇಳಿರಬಹುದು ಎನ್ನುತ್ತಾರೆ ಬಿಜೆಪಿ ಹಿರಿಯ ಮುಖಂಡರೊಬ್ಬರು.
ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ಅದರ ಬಳಿಕದ ಹಲವು ವಿದ್ಯಮಾನಗಳಿಂದ ಬಿಜೆಪಿಯ ಕಾರ್ಯಕರ್ತರ ವಲಯದಲ್ಲಿ ಪಕ್ಷದ ಶಾಸಕರ, ನಾಯಕರ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ಆ ಬಳಿಕ ನೆಟ್ಟಾರ್ ಅವರ ಪತ್ನಿಗೆ ಉದ್ಯೋಗ ನೀಡುವುದು, ಕುಟುಂಬಕ್ಕೆ ನೆರವಾಗುವ ಕಾರ್ಯವನ್ನು ನಾಯಕರು ಮಾಡಿದ್ದರೂ ಶಾಸಕರ ವಿರುದ್ಧ ಅಸಮಾಧಾನ ಇನ್ನೂ ತಣ್ಣಗಾಗದಿರುವುದು ಗುಟ್ಟೇನೂ ಅಲ್ಲ.
ಸಮೀಕ್ಷೆಯ ನೆಮ್ಮದಿಹಾಗಿದ್ದರೂ ಕೊನೆಯ ಹಂತದವರೆಗೂ ಅಳೆದೂ ತೂಗಿ, ವಿಶ್ಲೇಷಿಸಿ ಟಿಕೆಟ್ ಕೊಡುವ ಸಾಧ್ಯತೆ ಇದೆ. ಇದು ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲೆ, ಹಾಗಾಗಿ ಕಳೆದ ಬಾರಿ 7 ಕಡೆಗಳಲ್ಲಿ ಹೊಸಬರು ಸ್ಪರ್ಧಿಸಿ, ಅದರಲ್ಲಿ 6 ಮಂದಿ ಗೆದ್ದಿರುವ ಕಾರಣ ಮತ್ತೆ ಬದಲಾವಣೆ ಸಾಧ್ಯತೆಯೂ ಕಡಿಮೆ ಇರಬಹುದು. ಇನ್ನೊಂದೆಡೆ ಬಿಜೆಪಿ ಆಂತರಿಕ ಸಮೀಕ್ಷೆಗಳಲ್ಲಿ ಕರಾವಳಿಯಲ್ಲಿ ಪಕ್ಷಕ್ಕೆ ಹಾನಿ ಯಾಗದು ಎಂಬ ವರದಿಯಿರುವುದೂ ಹಾಲಿ ಶಾಸಕರಿಗೆ ಸಮಾಧಾನ ನೀಡಬಹುದು. ಹೊಸ ಮುಖ ಇಳಿಸಿ ಯಶಸ್ಸು ಕಂಡಿದ್ದ ಬಿಜೆಪಿ
ಹಿಂದೆಯೂ ಕರಾವಳಿಯಲ್ಲಿ ಒಬ್ಬರನ್ನೇ ಇಳಿಸುವ ಬದಲು ದಿಢೀರ್ ಆಗಿ ಹೊಸ ಮುಖ ಗಳಿಗೆ ಮಣೆ ಹಾಕಿ ಬಿಜೆಪಿ ಗೆಲುವು ಸಾಧಿಸಿ ದ್ದಿದೆ. 2018ರ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ, ಉತ್ತರ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದವರೆಲ್ಲರೂ ಹೊಸಮುಖಗಳು. ಅದಕ್ಕಿಂತ ಹಿಂದಿನ ಬಾರಿ ಎಂದರೆ 2013ರಲ್ಲಿ ಬಿಜೆಪಿ ಸುಳ್ಯ ಒಂದು ಬಿಟ್ಟು ಮತ್ತೆಲ್ಲ ಕ್ಷೇತ್ರಗಳಲ್ಲೂ ಸೋಲನುಭವಿಸಿದ್ದರಿಂದ 2018ರಲ್ಲಿ ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆ ಸುಲಭವಾಗಿತ್ತು. ಸೋತ ಎಲ್ಲ ಕಡೆಗಳಲ್ಲೂ ಹೊಸಬರನ್ನೇ ಇಳಿಸಿತು. ಈ ಹೆಜ್ಜೆಯಿಂದಾಗಿ ಸೋತ ಕಡೆಗಳಲ್ಲಿ ಗೆಲುವು ಸಾಧಿಸಿ ಫಲಿತಾಂಶ ಬದಲಾಯಿತು. *ವೇಣುವಿನೋದ್ ಕೆ.ಎಸ್