ಬೆಂಗಳೂರು/ಮಂಗಳೂರು: ಕೊಂಕಣ ಗೋವಾ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಮುಂದಿನ ಮೂರು ದಿನಗಳ ಕಾಲ ಕರಾವಳಿ ಸೇರಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂ.14ರಂದು ಕರಾವಳಿಗೆ ಕಾಲಿಟ್ಟ ಮುಂಗಾರು ಬಳಿಕ ದುರ್ಬಲಗೊಂಡಿತ್ತು. ಇದರಿಂದಾಗಿ ಕರಾವಳಿ ಭಾಗಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿತ್ತು. ಇದೀಗ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರ ಕೊಲ್ಲೂರು, ಕುಂದಾಪುರ, ಕುಮಟಾ, ತಾಳಗುಪ್ಪ, ಮೂಡಿಗೆರೆ, ಸಿದ್ದಾಪುರ, ಆಗುಂಬೆ, ಔರಾದ್, ಕಲಬುರಗಿ, ಭಾಗಮಂಡಲ, ಸಾಗರ ಸೇರಿ ರಾಜ್ಯದ ಹಲವೆಡೆ ಮಳೆಯಾಗಿದೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕುಂದಾಪುರದಲ್ಲಿ ರಾಜ್ಯದಲ್ಲಿಯೇ ಅಧಿಕ, 8 ಸೆಂ.ಮೀ. ಮಳೆ ಸುರಿಯಿತು.
Advertisement
ಇದೇ ವೇಳೆ, ಮೂಡುಬಿದಿರೆ ಸಮೀಪದ ಮುಗೇರಕಲದಲ್ಲಿ ಸಿಡಿಲು ಬಡಿದು ರುಕ್ಕಯ್ಯ ಎಂಬುವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಪರಿಸರದಲ್ಲಿ ಉತ್ತಮ ಮಳೆಯಾದ ಕಾರಣ ಸೌಪರ್ಣಿಕಾ ಹಾಗೂ ಕಾಶಿಹೊಳೆಗಳು ತುಂಬಿ ಹರಿಯುತ್ತಿವೆ. ಕೊಲ್ಲೂರು ದೇಗುಲಕ್ಕೆ ಆಗಮಿಸಿದ್ದ ಭಕ್ತರು ತೊಯ್ದ ಬಟ್ಟೆಯಲ್ಲೇ ಶ್ರೀ ದೇವಿಯ ದರ್ಶನ ಪಡೆಯುವಂತಾಯಿತು.