ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ತೀರಾ ಧಾಂಗುಡಿ ಇಟ್ಟಿದ್ದ ಕೊರೊನಾ ರೂಪಾಂತರಿ ಅಲೆ ಈಗ ಶಾಂತವಾಗಿದೆ. ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಅದೇ ತೆರನಾಗಿ ಪಾಸಿಟಿವಿಟಿ ದರ ಸಹ ಸಂಪೂರ್ಣ ಕಡಿಮೆಯಾಗಿದ್ದರೂ ಜಿಲ್ಲೆಗೆ ಅನ್‌ಲಾಕ್ ಭಾಗ್ಯ ಮಾತ್ರ ದೊರಕಿಲ್ಲ.
ರೂಪಾಂತರಿ ಅಲೆಗೆ ಬ್ರೇಕ್ ಹಾಕಲು ಲಾಕ್ ಡೌನ್ ಘೋಷಣೆ ಮಾಡಿ ಇಂದಿಗೆ ಭರ್ತಿ 55 ದಿನ. ಈಗ ಕೊರೊನಾ ಅಲೆ ಕಡಿಮೆಯಾಗಿದೆ, ಹೀಗಾಗಿ ಉದ್ಯೋಗಕ್ಕೆ ಮರಳಬಹುದು ಎಂದುಕೊಂಡಿದ್ದ ಗುಮ್ಮಟ ನಗರಿಯ ಜನತೆಯ ಆಸೆಗೆ ತಣ್ಣೀರೆರಚಿದಂತಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪಾಸಿಟಿವಿಟಿ ದರ ವ್ಯಾಪಕವಾಗಿ ಕಡಿಮೆಯಾಗಿದ್ದು ವಿಜಯಪುರ ಜಿಲ್ಲೆಯ ಸರಾಸರಿ ಪಾಸಿಟಿವಿಟಿ ದರ ಶೇ. 3.59ಕ್ಕೆ ತಲುಪಿದೆ. ಕಳೆದ 17ರಂದು ವಿಜಯಪುರ ಜಿಲ್ಲೆಯ ಪಾಸಿಟಿವಿಟಿ ದರ 2.75, ಜೂ. 18ರಂದು 2.23 ಹಾಗೂ ಜೂ. 19ರಂದು 1.4ಗೆ ಪಾಸಿಟಿವಿಟಿ ದರ ತಲುಪಿದೆ. ಜೂ. 20ರಂದು ಕೇವಲ 23 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಬಸ್ ಸೇವೆ ಆರಂಭ: ವಿಜಯಪುರ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರಿದರೂ ಸಿಟಿ ಬಸ್ ಹಾಗೂ ಅಂತರ್ ಜಿಲ್ಲಾ ಬಸ್ ಗಳ ಓಡಾಟಕ್ಕೆ ಮಾತ್ರ ಸಾರಿಗೆ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಿಬ್ಬಂದಿಗಳ ಹಾಜರಾತಿಗೆ ಅನುಗುಣವಾಗಿ ಬಸ್‌ಗಳು ರಸ್ತೆಗಳಿಯಲಿವೆಯಾದರೂ ಜಿಲ್ಲೆಯ ಎಲ್ಲ ಬಸ್‌ಗಳ ಓಡಾಟಕ್ಕಂತೂ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಜಯಪುರ ನಗರದ 56 ಸಿಟಿ ಬಸ್ ಸೇರಿದಂತೆ 650 ಬಸ್‌ಗಳ ಕಾರ್ಯಾಚರಣೆಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವಿಜಯಪುರ ನಗರದ ಡಿಪೋ ನಂ. 1ರಲ್ಲಿ ಬಸ್‌ಗಳ ಸ್ವಚ್ಛತಾ ಕಾರ್ಯ ಚುರುಕುಗೊಳ್ಳುತ್ತಿದೆ. ಸ್ಯಾನಿಟೈಸರ್ ಸಿಂಪಡಿಸಿ ಬಸ್ ಕ್ಲಿನಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ತೆರನಾಗಿ ಬಸ್‌ಗಳ ಸೀಟ್ ಮೇಲೆ ಮಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಒಂದು ಸೀಟ್ ಮೇಲೆ ಒಬ್ಬರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ, ಮೂರು ಸೀಟ್ ಇರುವಲ್ಲಿ ಇಬ್ಬರಿಗೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸೀಟ್ ಮೇಲೆ ಈಗಾಗಲೇ ಮಾರ್ಕ್ ಕಾರ್ಯ ಈಗಾಗಲೇ ಆರಂಭಗೊಂಡಿದ್ದು ಮಾಸ್ಕ್ ಹಾಕಿಕೊಂಡರೇ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಇಲಾಖೆವಿಭಾಗೀಯ ನಿಯಂತ್ರಣಾಧಿ ಕಾರಿ ನಾರಾಯಣಪ್ಪ ಕುರುಬರ ವಿವರಿಸಿದರು.