ಅರ್ಥವ್ಯವಸ್ಥೆಗೆ ಎದುರಾಗಿದ್ದ ಕಡು ಕಷ್ಟದ ದಿನಗಳಿಂದ ದೇಶವು ಪಾರಾಗಿ ಸಹಜ ಸ್ಥಿತಿಗೆ ತಲುಪುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಮೊದಲ ತ್ರೈಮಾಸಿಕದಲ್ಲಿ ಉಂಟಾದ ಭಾರೀ ಪ್ರಮಾಣದ ಚಾರಿತ್ರಿಕ ಶೇ. (-) 23.9 ಕುಸಿತವನ್ನು ಎದುರಿಸಿ ಭಾರೀ ಮುಂದೆ ಬಂದಿದ್ದೇವೆ. ಎರಡನೇ ತ್ತೈಮಾಸಿಕದಲ್ಲಿ ಜಿಡಿಪಿಯಲ್ಲಿ 7.5 ಪ್ರತಿಶತ ಕುಸಿತ ಕಾಣಿಸಿಕೊಂಡಿದೆ. ಆರ್ಥಿಕತೆಯು ಮಹತ್ವದ ಬೆಳವಣಿಗೆಗಳಿಂದ ನಿರ್ದಿಷ್ಟ ಸ್ವರೂಪವನ್ನು ಪಡೆಯುವ ಹಂತದಲ್ಲಿದೆ. ವಾಣಿಜ್ಯೋದ್ಯಮಗಳ ವಿಶ್ವಾಸದ ಮಟ್ಟ ಹೆಚ್ಚಿದೆ.
ಜಿಡಿಪಿ ಕುಸಿತದ ಬೇಸರದ ನಡುವೆ ಜಿಎಸ್‌ಟಿ ಸಂಗ್ರಹದಲ್ಲಿನ ಹೆಚ್ಚಳ, ನಿರುದ್ಯೋಗ ಪ್ರಮಾಣದಲ್ಲಿನ ಇಳಿಕೆ, ಕಾರು ಮಾರಾಟದಲ್ಲಿನ ಹೆಚ್ಚಳವು ಕಳೆದ ವರ್ಷಕ್ಕಿಂತ ಶೇ. 10.25ರಷ್ಟು ಬೆಳವಣಿಗೆ ಕಂಡು ಬಂದಿರುವುದು. ವಿದ್ಯುತ್ ಬಳಕೆ ಮತ್ತು ಪೆಟ್ರೋಲ್ ಮಾರಾಟದಲ್ಲಿನ ವೃದ್ಧಿ, ರೈಲಿನಲ್ಲಿ ಸರಕು ಸಾಗಣೆ ಹೆಚ್ಚುತ್ತಿರುವುದು ಆರ್ಥಿಕ ಪುನಃಶ್ಚೇತನದ ಸುಳಿವುಗ ಳಾಗಿವೆ. ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹವು ರೂ. 1.05 ಲಕ್ಷ ಕೋಟಿಯಾಗಿದ್ದು, ಇದು ಫೆಬ್ರವರಿ ತಿಂಗಳ ಅನಂತರದ ಅತೀ ಹೆಚ್ಚಿನ ಜಿಎಸ್‌ಟಿ ಸಂಗ್ರಹ ವಾಗಿದೆ. ಜಿಎಸ್‌ಟಿ ಹೆಚ್ಚಳದ ಅರ್ಥ ಜನರ ಖರೀದಿ ಯಲ್ಲಿನ ಹೆಚ್ಚಳ. ಇದರಿಂದ ವ್ಯವಸ್ಥೆಯಲ್ಲಿ ಹಣ ಚಲಾವಣೆ ಹೆಚ್ಚಾಗುವುದಲ್ಲದೇ ಇದು ನಿರುದ್ಯೋಗ ವನ್ನು ಕಡಿಮೆ ಮಾಡುವ ಲಕ್ಷಣವೂ ಆಗಿದೆ. ಅಲ್ಲದೆ ಅರ್ಥವ್ಯವಸ್ಥೆ ಸಹಜ ಸ್ಥಿತಿಗೆ ತಲುಪುತ್ತಿದೆ ಎಂಬ ಅರ್ಥವನ್ನು ನೀಡುತ್ತದೆ. ಪರೋಕ್ಷ ತೆರಿಗೆ ಒಂದೇ ತಿಂಗಳಿನಲ್ಲಿ ರೂ. 1 ಲಕ್ಷ ಕೋಟಿ ದಾಟಿರುವುದು ಅರ್ಥ ವ್ಯವಸ್ಥೆಯ ಪಾಲಿಗೆ ಸಂತೋಷದ ಸುದ್ದಿ. ಇದಲ್ಲದೆ ಅರ್ಥವ್ಯವಸ್ಥೆಯ ಕರಾಳ ದಿನಗಳು ಮುಗಿದಿವೆ ಎಂಬರ್ಥ. ಜಿಡಿಪಿ ತೀವ್ರ ಕುಸಿತ ಕಂಡಿರುವ ಸಂದರ್ಭದಲ್ಲಿ ಜಿಎಸ್‌ಟಿ ಪ್ರಮಾಣದ ಹೆಚ್ಚಳ ಆರ್ಥಿಕ ಚೇತರಿಕೆಗೆ ಪೂರಕವಾದ ಬೆಳವಣಿಗೆ. ದೇಶದ ಷೇರು ಮಾರುಕಟ್ಟೆಗಳಿಂದಲೂ ಚೇತರಿಕೆಯು ಕಂಡು ಬರುತ್ತಿದೆ. ಲಾಕ್‌ಡೌನ್ ಜಾರಿಗೊಂಡ ಸಂದರ್ಭದಲ್ಲಿ ರೂಪಾಯಿ 25000ಕ್ಕೆ ಇಳಿದಿದ್ದ ಬಿಎಸ್‌ಇ ಸೆನ್ಸೆಕ್ಸ್ ಈಗ ರೂ. 42000 ಅಂಕಗಳ ಗಡಿ ದಾಟುತ್ತಿದೆ. ಸಾಮಾನ್ಯವಾಗಿ ಕೋವಿಡ್ ಪೂರ್ವದ ಸ್ಥಿತಿಗೆ ತಲುಪಿದೆ. ಆದರೂ ಆರ್ಥಿಕ ಬೆಳವಣಿಗೆಯು ಸುಸ್ಥಿತಿ ತಲುಪಿದೆಯೆಂದು ನಿರ್ದಿಷ್ಟವಾಗಿ ಹೇಳಲಾ ಗುವುದಿಲ್ಲ. ಎಚ್ಚರಿಕೆಯ ಹೆಜ್ಜೆಗಳು ಅಗತ್ಯ. ಯಾಕೆಂದರೆ ಈ ವೈರಸ್ ಅಡ್ಡಗಟ್ಟಿ ತಡೆಯುಂಟು ಮಾಡುವುದನ್ನು ಅಲ್ಲಗಳೆಯ ಲಾಗುವುದಿಲ್ಲ. ಇದುವರೆಗೆ ನಾವು ಆರ್ಥಿಕತೆಯಲ್ಲಿ ಸುಧಾರಿಸಿಕೊಂಡ ರೀತಿ ಚೆನ್ನಾಗಿಯೇ ಇದೆ. ಕೊರೊನಾ ಹೋರಾಟದ ನಡುವೆಯೂ ಉತ್ಪಾದನಾ ವಲಯದಲ್ಲಿ ಸಂಚಲನ ಕಂಡು ಬಂದಿದೆ.
ಭಾರತದ ಹಾಲಿ ವರ್ಷದ ಪ್ರಗತಿ ದರ ಭಾರೀ ಪ್ರಮಾಣದಲ್ಲಿ ತಗ್ಗಲಿದೆ ಎಂದು ಅಂದಾಜು ಮಾಡಿರುವ ಐಎಂಎಪ್ ಮುಂದಿನ ವರ್ಷ ಅತೀ ವೇಗವಾಗಿ ಆರ್ಥಿಕತೆಯಲ್ಲಿ ಶೇ. 8.8ರ ಪ್ರಗತಿ ಸಾಧಿಸಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ದೇಶದ ಅರ್ಥವ್ಯವಸ್ಥೆಯ ಆರೋಗ್ಯವನ್ನು ಸೂಚಿ ಸುವ ಆಂತರಿಕ ಉತ್ಪನ್ನ ಜಿಡಿಪಿ ಬೆಳವಣಿಗೆ 2014-15 ಮತ್ತು 2015-16 ರ ಸಾಲಿನ ಬೆಳವಣಿಗೆ ಶೇ. 7.5 ಮತ್ತು ಶೇ 8 ತಲುಪುವ ಮೂಲಕ ಏಷ್ಯಾದಲ್ಲಿಯೇ ಮುಂಚೂಣಿ ರಾಷ್ಟ್ರದ ಪಾಲಿಗೆ ತಲುಪಿತು. 2017ರಲ್ಲಿ ಶೇ 8.3ರಷ್ಟಿತ್ತು. ಭಾರತವು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ದೇಶಗಳ ಪಟ್ಟಿಯಲ್ಲೊಂದಾಗಿತ್ತು. ಭಾರತ 2.9 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಫ್ರಾನ್ಸನ್ನು ಹಿಂದಿಕ್ಕಿ ವಿಶ್ವದ ಆರನೇ ಅತೀ ದೊಡ್ಡ ಆರ್ಥಿಕತೆ ಎಂದೆನಿಸಿತು. ಈ ಸಮಯದಲ್ಲಿ ಚೀನದ ಜಿಡಿಪಿ ಶೇ. 6.9 ರಷ್ಟಿತ್ತು. ತದ ಅನಂತರ ಸದುದ್ದೇಶದಿಂದ ಅಭಿವೃದ್ಧಿಯ ಧಾವಂತಕ್ಕೆ ಮುನ್ನುಗ್ಗಿ ಅನುಷ್ಠಾನ ಗೊಳಿಸಿದ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿಯ ಏಳುಬೀಳುಗಳಿಂದ ಆರ್ಥಿಕತೆ ಮುಗ್ಗರಿಸಿತೆಂದರೆ ತಪ್ಪಾಗಲಾರದು. ತದನಂತರ ಜಿಡಿಪಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ 2018ಕ್ಕೆ ಶೇ. 7.00, 2019ಕ್ಕೆ ಶೇ. 6.1 ಮತ್ತು 2020ಕ್ಕೆ ಶೇ. 4.2ಕ್ಕೆ ಇಳಿಯಿತು. ಹಾಲಿ ವರ್ಷದ ಎಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಶೇ. (-) 23.9ಕ್ಕೆ ಕುಸಿದು ಬಿತ್ತು. ಇದೀಗ ಆರ್‌ಬಿಐ ಆರ್ಥಿಕತೆಯ ಸುಧಾರಣೆಯ ಭರವಸೆ ನೀಡುತ್ತಾ ಮುಂದಿನ ತ್ತೈಮಾಸಿಕಗಳ ಆಂತರಿಕ ಉತ್ಪನ್ನವನ್ನು ಅಂದಾಜಿಸಿ ಮುಂದಿನ ವರ್ಷ ಧನಾತ್ಮಕವಾಗಿ ಪುಟಿದೇಳಲಿದೆ ಎಂದು ಘೋಷಿಸಿದೆ.
ಈ ವಿತ್ತ ವರ್ಷವು ಆರ್ಥಿಕ ಹಿಂಜರಿಕೆಯ ವರ್ಷವಾಗಿ ಉಳಿಯಲಿದೆ. ಜಿಡಿಪಿ ಕುಸಿತದ ಅರ್ಥ ಜನ ಉದ್ಯೋಗ ಕಳೆದುಕೊಳ್ಳುವುದು ಮತ್ತು ಸಂಬಳ ಕಡಿತ. ನೇರವಾಗಿ ಉದ್ಯೋಗ ಕಡಿತ, ಉದ್ದಿಮೆಗಳಿಗೆ ಹಣಕಾಸಿನ ಸಂಕಷ್ಟ ರೂಪದಲ್ಲಿ ಅನುಭವಕ್ಕೆ ಬರಲಿದೆ. ಡಿಸೆಂಬರ್‌ವರೆಗೂ ಅರ್ಥವ್ಯವಸ್ಥೆಯಲ್ಲಿ ಕುಸಿತ ಮುಂದುವರಿಯಲಿದೆ. ಇದೀಗ ಆರ್‌ಬಿಐ ಕೊರೊನಾ ಸೋಂಕಿನ ಎರಡನೆಯ ಅಲೆ ಇಲ್ಲದಿದ್ದರೆ ಅರ್ಥ ವ್ಯವಸ್ಥೆಯು ಪುನಃಶ್ಚೇತನಗೊಂಡು ಚೇತರಿ ಕೆಯ ಹಾದಿಗೆ ಮರಳುವ ಲಕ್ಷಣಗಳಿವೆ ಮತ್ತು ದೇಶದ ಆರ್ಥಿಕತೆ 2020-2021 ಕ್ಕೆ ಒಟ್ಟಾರೆ ಶೇ. (-9) ಕ್ಕೆ ಕುಸಿತ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ. ಚೇತರಿಕೆಯ ಏರುಪೇರು ಅಥವಾ ಆರ್ಥಿಕ ಮಂದಗತಿ ಕೊರೊನಾದ ಪರಿಣಾಮಕ್ಕೆ ಅನುಗುಣವಾಗಿ ಬದಲಾಗಬಹುದು ಮತ್ತು ಎಪ್ರಿಲ್-ಜೂನ್ 2021 ರ ತ್ರೆçಮಾಸಿಕಕ್ಕೆ ಶೇ. (+) 20.6 ಅಭಿವೃದ್ಧಿಯಾಗುವ ಅಂದಾಜಿದೆ ಎಂಬ ಮಾಹಿತಿ ನೀಡಿದೆ. ಎಪ್ರಿಲ್ 2021 ರಿಂದ ಪ್ರಾರಂಭವಾಗುವ ಹಣಕಾಸು ವರ್ಷಾಂತ್ಯಕ್ಕೆ ಭಾರತದ ಜಿಡಿಪಿ ಶೇ. 8.8 ಕ್ಕೆ ಏರಲಿದೆ. ಇದು ಬ್ರಿàಕ್ಸ್ ರಾಷ್ಟ್ರಗಳಲ್ಲಿ ಅತ್ಯುತ್ತಮ ಪ್ರಗತಿ ಮತ್ತು ಜಾಗತಿಕ ಸರಾಸರಿ ಶೇ. 5.2 ಕ್ಕಿಂತ ಶೇ. 3.6 ಮೀರಿ ಅಭಿವೃದ್ಧಿಗೊಳ್ಳಲಿದೆ ಎಂಬ ಲೆಕ್ಕಾಚಾರ ವಿದೆ. ಇಲ್ಲಿ ಕೊರೊನಾ ಲಸಿಕೆಯ ಲಭ್ಯತೆಯೂ ಪ್ರಮುಖ ಪಾತ್ರವಹಿಸಲಿದೆ. ದೀಪಾವಳಿಯ ಸಂದ ರ್ಭದಲ್ಲಿ 72 ಸಾವಿರ ಕೋಟಿ ವಹಿವಾಟು ನಡೆದಿರು ವುದು ಮತ್ತು ವಾಹನ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯವಹಾರದಲ್ಲಿ ಚೈತನ್ಯ ಕಂಡುಬಂದು ಮುಂದುವರಿಯುವುದನ್ನು ಗಮನಿಸಿದಾಗ ಆರ್ಥಿ ಕತೆಯು ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಚೇತರಿಸಿ ಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ದೇಶವು ಆತ್ಮನಿರ್ಭರ್ ಭಾರತ ಉದ್ಘೋಷ ದೊಂದಿಗೆ ಚೀನ ವಿರುದ್ಧ ಆರ್ಥಿಕ ಸಮರ ಸಾರಿದ್ದು ಚೀನದ 114 ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಚೀನದ ಉತ್ಪಾದನೆಗಳ ಬಗ್ಗೆ ಜಗತ್ತು ಇದೀಗ ಗಂಭೀರವಾಗಿ ಪರಿಶೀಲಿಸಿದ ವಿಚಾರವೆಂದರೆ ವಿಶ್ವದ ಶೇ. 80 ಲ್ಯಾಪ್‌ಟಾಪ್, ಶೇ. 70 ಮೊಬೈಲ್, ಶೇ 80 ಎ.ಸಿ. ಉಪಕರಣಗಳು ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳು ಚೀನದಿಂದಲೇ ತಯಾರಾಗು ತ್ತಿವೆ. ಪ್ರಸ್ತುತ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್, ಬ್ರಿಟನ್‌ಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ 24 ಕಂಪೆನಿಗಳು ಭಾರತದಲ್ಲಿ ಹೂಡಿಕೆ ಘೋಷಿಸಿ ದ್ದಾರೆ. 2025 ಕ್ಕೆ 12 ಲಕ್ಷ ಕೋಟಿ ಬೆಲೆಬಾಳುವ ಮೊಬೈಲ್‌ಗಳು ಭಾರತದಲ್ಲಿ ಉತ್ಪಾದನೆಯಾಗುವ ಸಾಧ್ಯತೆಯಿದೆ. ಸರಕಾರವು ಪಿಎಲ್‌ಐ (ಪ್ರೊಡಕ್ಟಿವ್ ಲಿಂಕ್ಡ್ ಇನ್ಸೆಂಟಿವ್) ಯನ್ನು ಇಲೆಕ್ಟ್ರಾನಿಕ್ ಐಟಮ್‌ಗಳಿಗೆ ಘೋಷಿಸಿ ಅದನ್ನು ಚೀನದಿಂದ ಆಮದಾಗು ತ್ತಿರುವ ಔಷಧಿ ವಲಯಕ್ಕೆ ವಿಸ್ತರಿಸಿದೆ ಮತ್ತು ಟೆಕ್ಸ್ ಟೈಲ್ ಹವಾನಿಯಂತ್ರಿತ ವಸ್ತುಗಳಿಗೂ ವಿಸ್ತರಿಸಲಿರು ವುದು ನಮ್ಮ ಜಿಡಿಪಿ ಪ್ರಗತಿಗೆ ನೆರವಾಗಲಿದೆ.
ಕೊರನಾದಿಂದ ನಮ್ಮ ಅರ್ಥವ್ಯವಸ್ಥೆಯ ನಿರುದ್ಯೋಗಕ್ಕೆ ಬಹು ಭೀಕರ ಸಮಸ್ಯೆಯಾಗಿ ಅಪಾರ ಹಾನಿಮಾಡಿದೆ. ಎಪ್ರಿಲ್ ತಿಂಗಳಿನಲ್ಲಿ ಗರಿಷ್ಠ ಪ್ರಮಾಣ ಶೇ. 23.52 ಕ್ಕೆ ಏರಿತ್ತು. ಸೆಪ್ಟೆಂಬರ್‌ನಲ್ಲಿ ಶೇ. 6.7 ಕ್ಕೆ ಕಡಿಮೆಯಾಗಿದೆ, ಅದಲ್ಲದೆ ಶೇ. 87 ಉದ್ಯಮಗಳು ಮುಂದಿನ ವರ್ಷ ನೌಕರರಿಗೆ ಸಂಬಳ ಹೆಚ್ಚಿಸುವ ಸೂಚನೆ ನೀಡಿರುವುದು ಹಾಗೂ ರಿಯಲ್ ಎಸ್ಟೇಟ್ ವಲಯಕ್ಕೆ ಮರು ಜೀವನ ಬರುತ್ತಿರುವುದರಿಂದ ಆರ್ಥಿಕ ಪುನಶ್ಚೇತನ ವೇಗವನ್ನು ಪಡೆದುಕೊಳ್ಳಲಿದೆ.
ಕೃಷಿ ವಲಯವು ಸಾಂಕ್ರಾಮಿ ನೆರೆ, ಭೂಕುಸಿತ ದಂತಹ ಸಮಸ್ಯೆಗಳನ್ನು ಎದುರಿಸಿದರೂ ಪುಟಿದೆದ್ದು ಆರ್ಥಿಕತೆಗೆ ತನ್ನ ಕೊಡುಗೆ ನೀಡುತ್ತಿದೆ. ಕೊರೊನಾ ದಿಂದ ದೇಶೀಯ ಉದ್ದಿಮೆ, ಸಾರಿಗೆ, ಸೇವಾ ರಂಗ ಪ್ರವಾಸೋದ್ಯಮ ಹಳ್ಳ ಹಿಡಿದರೂ ಕೃಷಿರಂಗ ಪ್ರಸ್ತುತ ವರ್ಷದ ಪ್ರಥಮ ತ್ರೆçಮಾಸಿಕ ಅವಧಿಯಲ್ಲಿ ಶೇ. 3.4 ರಷ್ಟು ವೃದ್ಧಿ ದರ ದಾಖಲಿಸಿದೆ. ಕೃಷಿಯೇ ದೇಶದ ಬೆನ್ನೆಲುಬೆಂದು ಸಾಬೀತಾಗಿದೆ. ದೇಶದ ಆಹಾರ ಉತ್ಪಾದನೆ 2020ಕ್ಕೆ ಸರ್ವಕಾಲಿಕ 298.3 ದಶಲಕ್ಷ ಟನ್ ಉತ್ಪಾದನೆಯಾಗಿದೆ. ಈ ಬಾರಿಯ ಮುಂಗಾರಿ ನಲ್ಲಿ 1082 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ದೇಶದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಉದ್ಯೋಗ ವಂಚಿತರು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕೂಡಾ ದೇಶದ ಜಿಡಿಪಿ ಪ್ರಗತಿಗೆ ಪೂರಕವಾಗಲಿದೆ. ಇತ್ತೀಚಿಗಿನ ಕೃಷಿ ವಿಧೇಯಕಗಳು ಕೂಡಾ ಆರ್ಥಿಕ ಉತ್ತೇಜನಕ್ಕೆ ಪೂರಕವಾಗಲಿವೆ.
ಪ್ರಸಕ್ತ ಸನ್ನಿವೇಶದಲ್ಲಿ ಕೊರೊನಾ ಇಳಿಮುಖ ಮತ್ತು ಲಸಿಕೆ ಲಭ್ಯತೆಯ ಆಶಾಕಿರಣವು ಆರ್ಥಿಕತೆ ಯನ್ನು ಮುಂದಿನ ಹಣಕಾಸು ವರ್ಷಕ್ಕೆ ಧನಾತ್ಮಕತೆ ಯತ್ತ ಕೊಂಡೊಯ್ಯಲಿದೆ ಎಂಬ ತಾರ್ಕಿಕ ತೀರ್ಮಾನಕ್ಕೆ ಬರಬಹುದು.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ