ಮಹಾನಗರ: ಹೆತ್ತವರು ಸದಾ ತಮ್ಮ ಮಕ್ಕಳೊಂದಿಗೆ ಸ್ವಲ್ಪ ಸಮಯವಾದರು ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡಬೇಕು. ತಮ್ಮ ಮಕ್ಕಳಲ್ಲಿ ಧನಾತ್ಮಕವಾದ ಭಾವನೆ ಹಾಗೂ ಯೋಚನೆಗಳನ್ನು ತುಂಬಿ ಆತ್ಮ ವಿಶ್ವಾಸ ಬೆಳೆಸುವಂತೆ ಹೆತ್ತವರು ಹಾಗೂ ಶಿಕ್ಷಕರು ಪ್ರಯತ್ನ ಪಡಬೇಕು. ಒಬ್ಬ ವಿದ್ಯಾರ್ಥಿ ತನ್ನ ಚಿಕ್ಕ ವಯಸ್ಸಿನಲ್ಲೇ ಧನಾತ್ಮಕವಾದ ಆತ್ಮ ಗೌರವ ಹೊಂದಿದಾಗ ಮುಂದೆ ಉತ್ತಮ ಸಾಧಕನಾಗುತ್ತಾನೆ ಎಂದು ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಡಾ| ದೇವರಾಜ್ ಕೆ. ಹೇಳಿದರು.
ಮಣ್ಣಗುಡ್ಡೆ ಮಂಗಳ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಹೆತ್ತವರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಜೀವವಿಮಾ ನಿಗಮ, ಬ್ರಾಂಚ್-2, ಇದರ ಸೀನಿಯರ್ ಬ್ರಾಂಚ್ ಮ್ಯಾನೇಜರ್ ವಿಜಯ ಕುಮಾರ್ ಅವರು ಶಾಲಾ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿನಿ ಕುಮಾರಿ ಅನುಷಾ ಎಸ್. ದೇವಾಡಿಗ ಅವರು ಸಿಎ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುವುದಕ್ಕೆ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಹಾಗೂ ಹತ್ತನೇ ತರಗತಿಯ 2017ರ ಮಾರ್ಚ್‌ನಲ್ಲಿ ಜರಗಿದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಉಷಾ ಪ್ರಭಾವತಿ ವಾರ್ಷಿಕ ವರದಿ ಮಂಡಿಸಿದರು.
ಮಹಾಸಭೆಯಲ್ಲಿ 2017-18ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂರುನ್ನಿಸ ಅವರು ಅಧ್ಯಕ್ಷರಾಗಿ, ಪುಷ್ಪಲತಾ ಉಪಾಧ್ಯಕ್ಷರಾಗಿ ಹಾಗೂ ಮೇಘನಾ ಎಂ. ಭಟ್ ಖಜಾಂಚಿಯಾಗಿ ಆಯ್ಕೆಯಾದರು. 13 ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಹಾಸಭೆ ನೇಮಿಸಿತು. ಶಿಕ್ಷಕ-ರಕ್ಷಕ ಸಂಘದ ನಿಬಂಧನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಮೊಲಿ, ಎಸ್. ರಾಮಚಂದ್ರ ದೇವಾಡಿಗ, ಕೃಷ್ಣಪ್ಪ ಎಂ. ದೇವಾಡಿಗ, ಭಾಸ್ಕರ ಇಡ್ಯಾ, ಕುಸುಮಾ ಎಚ್. ದೇವಾಡಿಗ ಮತ್ತು ಕರುಣಾಕರ್ ಎಂ. ಎಚ್. ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಡಾ| ಸುಂದರ ಮೊಲಿ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷಿ$¾à ವಂದಿಸಿದರು. ಶಿಕ್ಷಕಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.