ಹಾವೇರಿ: ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ. ನಮ್ಮ ವೃತ್ತಿಯಲ್ಲಿ, ಪರಿಸರದಲ್ಲಿ ಒತ್ತಡವನ್ನು ನಿಭಾಯಿಸಿ ವೃತ್ತಿ ನೈಪುಣ್ಯ ಸಾಧಿಸಬೇಕಾಗಿದ್ದು, ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಎಂ.ಬಿ.ಅಂಬಿಗೇರ ಹೇಳಿದರು.
ನಗರದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿರುವ ಜೀವನ ಕೌಶಲ್ಯ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಚಿಂತನೆಗಳು ನಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸುವುದರ ಜತೆಗೆ ನಾಯಕತ್ವ ಗುಣ, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳವಣಿಗೆಯಾಗುತ್ತದೆ. ಶಿಕ್ಷಕರ ಮಾನಸಿಕ ಸ್ವಾಸ್ಥ್ಯ ಉತ್ತಮವಾದಷ್ಟು ದೈಹಿಕ ಸ್ವಾಸ್ಥ್ಯವೂ ಉತ್ತಮವಾದಾಗ ಅದು ವರ್ಗ ಕೋಣೆಯಲ್ಲಿ ಪ್ರತಿಫಲನಗೊಂಡು ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ವಿದ್ಯಾರ್ಥಿ ಹೊರಬರುತ್ತಾನೆ ಎಂದರು.
ಇಂದು ಸಮಾಜದಲ್ಲಿ ಅನೈತಿಕ ಚಟುವಟಿಕೆ ಹೆಚ್ಚಾಗುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳ ಅಧಃಪತನ ಕಾರಣವಾಗಿದೆ. ಜೀವನ ಕೌಶಲ್ಯ ಶಿಕ್ಷಣದ ಮೂಲಕ ಮಕ್ಕಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಸ್ಥಿತಪ್ರಜ್ಞರಂತೆ ಸ್ಪಂದಿಸುವ ಗುಣವನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರದ್ದು ಎಂದರು.
ಇದೇ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಹಲವಾರು ಸಂಚಾರಿ ನಿಯಮಗಳನ್ನು, ಕಾಯ್ದೆಗಳನ್ನು ಪ್ರಾತ್ಯಕ್ಷತೆ ಮೂಲಕ ತಿಳಿಸಿದರು. ವೇದಿಕೆಯಲ್ಲಿ ನೋಡಲ್ ಅಧಿಕಾರಿ ಎಂ.ಎಸ್. ಗುಂಡಪಲ್ಲಿ ಸೇರಿದಂತೆ ಸಂಪನ್ಮೂಲ ಶಿಕ್ಷಕರು ಮತ್ತಿತರರು ಇದ್ದರು.
ಬಸವರಾಜ ಸ್ವಾಗತಿಸಿದರು. ಶಿಕ್ಷಕಿ ಕಮಲಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಕುಮಾರಸ್ವಾಮಿ ವಂದಿಸಿದರು