Advertisement
ಆದರೆ ಸ್ವಾಭಿಮಾನಿಯಾಗಿದ್ದ ಜಯಣ್ಣನವರನ್ನು ಸ್ವಾವಲಂಬನೆ ಎಚ್ಚರಿಸಿದೆ. ಅಸಹಾಯಕತೆಯ ನಡುವೆಯೂ ಜೀವನ ಪ್ರೀತಿ ಅವರನ್ನು ತನ್ನ ಸ್ವಂತ ದುಡಿಮೆಯಿಂದ ಬದುಕಲು ಪ್ರೇರೇಪಿಸಿದೆ. ತನ್ನಲ್ಲಿದ್ದ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸಿ ದೈಹಿಕ ದೌರ್ಬಲ್ಯವನ್ನು ಮೆಟ್ಟಿನಿಂತು ಸೋಲಾರ್ ವಿದ್ಯುತ್ ಚಾಲಿತ ಸಣ್ಣ ಬಂಡಿಯನ್ನು ಬಳಸಿ ಮಲ್ಪೆಗೆ ಹೋಗುವ ಕಲ್ಮಾಡಿ ಸೇತುವೆಯ ಬಳಿ, ಬೊಬ್ಬರ್ಯ ಗುಡ್ಡಕ್ಕೆ ಹೋಗುವ ದ್ವಾರದ ಮುಂದೆ ಸಿಯಾಳ ವ್ಯಾಪಾರಕ್ಕೆ ಇಳಿದೇಬಿಟ್ಟರು. ಕಳೆದ ಎಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾದ ಈ ಸ್ವಾವಲಂಬಿ ಬದುಕಿಗೆ ಇದೀಗ ಏಳು ತಿಂಗಳ ಸಂಭ್ರಮ. ಸೆಲ್ಕೋ ಸಂಸ್ಥೆಯವರು ತಮಗೆ ಕೊಡಿಸಿರುವ ಸೋಲಾರ್ ಅಳವಡಿತ ವಾಹನದಲ್ಲಿ ಸಿಯಾಳಗಳನ್ನು ತುಂಬಿಕೊಂಡು ಪ್ರತೀದಿನ ಸಂಜೆ ನಾಲ್ಕು ಗಂಟೆಗೆ ಇವರು ಈ ಸೇತುವೆಯ ಬಳಿ ವ್ಯಾಪಾರಕ್ಕೆ ತೊಡಗುತ್ತಾರೆ, ರಾತ್ರಿ ಎಂಟುಗಂಟೆಯವರೆಗೆ ಇವರ ವ್ಯಾಪಾರ ಸಾಗುತ್ತದೆ.
ಹಾಸಿಗೆ ಹಿಡಿದಿದ್ದ ಜಯಣ್ಣನಿಗೆ ಸ್ನೇಹಿತರೊಬ್ಬರು ಕನ್ಯಾಡಿಯಲ್ಲಿರುವ ಸೇವಾಭಾರತಿಯ ಮಾಹಿತಿ ನೀಡಿದರಂತೆ. ಆ ಸಂಸ್ಥೆ ನಡೆಸುತ್ತಿದ್ದ ಶಿಬಿರಕ್ಕೆ ಇವರು ಸೇರಿದರು. ಒಟ್ಟು 40 ಮಂದಿಯಲ್ಲಿ ಐದು ಜನರನ್ನು ಆಯ್ಕೆ ಮಾಡಿ ಬೆಂಗಳೂರಿನ APD ಸಂಸ್ಥೆಯ ಶಿಬಿರಕ್ಕೆ ಕಳಿಸಿಕೊಡಲಾಯಿತಂತೆ. ಅಲ್ಲಿ ಚಿಕಿತ್ಸೆ ಹಾಗೂ ಆತ್ಮವಿಶ್ವಾಸ ತುಂಬಿ ಇವರು ಮಾಡಬಹುದಾದ ಉದ್ಯೋಗವನ್ನು ಮನಗಾಣಿಸಿ, ಅದಕ್ಕೆ ಬೇಕಾದ ವಾಹನವನ್ನೂ ಉಚಿತವಾಗಿ ತಯಾರಿಸಿಕೊಟ್ಟರಂತೆ. ಇವರಿಗೆ ಅನುಕೂಲವಾಗುವ ವಾಹನವೇನೋ ಸಿದ್ಧವಾಗಿತ್ತು. ಆದರೆ ಅದನ್ನು ಊರಿಗೆ ತರಿಸುವ ಅನುಕೂಲ ಅವರಿಗಿದ್ದಿಲ್ಲ. ಆಗ ನೆರವಿಗೆ ಬಂದಿದ್ದು ಸೆಲ್ಕೋ ಸಂಸ್ಥೆ. ರೂ. 10,000 ಖರ್ಚು ಮಾಡಿ ವಾಹನ ತರಿಸಿ, ರಾತ್ರಿ ವ್ಯಾಪಾರಕ್ಕೂ ಅನುಕೂಲವಾಗುವಂತೆ ಸೋಲಾರ್ ಬಲ್ಬುಗಳನ್ನು ಅಳವಡಿಸಿಕೊಟ್ಟರಂತೆ. ಸೆಲ್ಕೋ ಸಂಸ್ಥೆಯ ಗುರುಪ್ರಸಾದ್ ಶೆಟ್ಟಿ, ಸೇವಾ ಭಾರತಿಯ ವಿನಾಯಕ ರಾವ್ ಹಾಗೂ APD ಸಂಸ್ಥೆಯ ರೂಬಿನ್ ಡೆನ್ನಿಸ್ ಅವರ ಸಲಹೆ-ಸಹಕಾರವನ್ನು ಇವರು ವಿಶೇಷವಾಗಿ ಸ್ಮರಿಸಿಕೊಳ್ಳುತ್ತಾರೆ.
Related Articles
Advertisement
ನಿಜಕ್ಕೂ ಜಯಣ್ಣನಂತಹ ವ್ಯಕ್ತಿಗಳು ಪ್ರತಿಯೊಬ್ಬರಿಗೂ ಪ್ರೇರಣೆ. ತಮ್ಮ ದೇಹಕ್ಕಾದ ಘಾಸಿಯನ್ನು ಮನೋಬಲದಿಂದ ಮೆಟ್ಟಿನಿಂತು ಸ್ವಾವಲಂಬನೆಯ ದಾರಿಯನ್ನು ಆರಿಸಿಕೊಂಡು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ಸಾಹಸ ಪ್ರಶಂಸನೀಯ. ನೀವೂ ಮಲ್ಪೆಗೆ ಹೋದಾಗ ಕಲ್ಮಾಡಿ ಸೇತುವೆ ಸಮೀಪದ ಇವರ ಗಾಡಿಯಂಗಡಿಯಿಂದ ಒಂದು ಸಿಯಾಳ ಕೊಂಡು ಕುಡಿದರೆ ಅದು ಜಯಣ್ಣನ ಸ್ವಾವಲಂಬನೆಯ ಬದುಕಿಗೆ ನಾವೆಲ್ಲ ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರ ಸ್ವಾವಲಂಬಿ ಬಂಡಿಯಿಂದ ನಾವು-ನೀವು ಸಿಯಾಳ ಖರೀದಿಸಿ ಕುಡಿದರೆ ಆ ನೀರಿನಲ್ಲಿ ನಮಗೆ ಸಿಗಬಹುದಾದ ರುಚಿ ಅದೆಷ್ಟು ಸ್ವಾದಭರಿತವಾಗಿರಬಲ್ಲುದು…? ಚಿತ್ರ ಮತ್ತು ಮಾಹಿತಿ : ಮಂಜುನಾಥ್ ಕಾಮತ್