ಬೆಳಗಾವಿ: ಮುಂಬೈನ ಧಾರಾವಿಯಿಂದ ಪಾಸ್ ಇಲ್ಲದೇ ಕದ್ದು ಮುಚ್ಚಿ ಬೆಳಗಾವಿಗೆ ಬಂದಿದ್ದ ಪಾಸಿಟಿವ್ ಗರ್ಭಿಣಿಯ ಸಂಪರ್ಕದಲ್ಲಿರುವವರ ಶೋಧ ಕಾರ್ಯ ನಡೆದಿದ್ದು, ಬೆಳಗಾವಿಗೆ ಕಂಟಕವಾಗುತ್ತಿರುವ ಮುಂಬೈನ ಧಾರಾವಿ ಸ್ಲಂ ನಂಟು ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ. ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ ಪತ್ತೆ ಕಾರ್ಯ ನಡೆದಿದೆ.
ಮುಂಬೈನಿಂದ 27 ವರ್ಷದ ಗರ್ಭಿಣಿ ಪಾಸ್ ಇಲ್ಲದೇ ಗಡಿ ದಾಟಿ ಬಂದು ಇಲ್ಲಿಯ ಸದಾಶಿವ ನಗರದ ಮನೆಯಲ್ಲಿ ಉಳಿದುಕೊಂಡಿದ್ದರು. ಗರ್ಭಿಣಿಯ ಟ್ರಾವೆಲ್ ಹಿಸ್ಟರಿ ಪ್ರಕಾರ ಗರ್ಭಿಣಿ ಎಲ್ಲೆಲ್ಲಿ ತಿರುಗಾಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೇ 5ರಂದು ಸೇವಾ ಸಿಂಧು ಇ -ಪಾಸ್ ಪಡೆಯದೇ ಬೆಳಗಾವಿಗೆ ಬಂದಿದ್ದ ಗರ್ಭಿಣಿ ಮೇ 11ರ ವರೆಗೆ ಬಡಾವಣೆಯ ವಿವಿಧೆಡೆ ಓಡಾಡಿದ್ದರು. ಸೋಂಕಿತ ಗರ್ಭಿಣಿ ಪಿ-974 ಟ್ರಾವೆಲ್ ಹಿಸ್ಟರಿ ಆಧರಿಸಿ ಕ್ವಾರಂಟೈನ್ ಮಾಡುವ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 35 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಸಾಮಾನ್ಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಮುಂಬೈನಿಂದ ಬಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಿಮ್ಸ್ ಗೆ ಕಳುಹಿಸಲಾಗಿದೆ. ಅಲ್ಲಿಯೂ ಸಾಮಾನ್ಯ ಚಿಕಿತ್ಸೆ ಪಡೆದು ಗರ್ಭಿಣಿ ವಾಪಸ್ಸಾಗಿದ್ದಾರೆ. ಸ್ಥಳೀಯರು ಆರೋಗ್ಯ ಇಲಾಖೆಗೆ ವಿಷಯ ತಿಳಿಸಿದ್ದರಿಂದ ಮತ್ತೆ ಗರ್ಬಿಣಿಯನ್ನು ವಾಪಸ್ಸು ಕರೆಯಿಸಿಕೊಂಡು ಕೋವಿಡ್-19 ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ.
ಕ್ವಾರಂಟೈನ್ ಆಗದೇ ಗರ್ಭಿಣಿ ಮನೆಯಲ್ಲಿ ಉಳಿದುಕೊಂಡಿದ್ದರಿಂದ ಶಂಕಿತರ ಸಂಖ್ಯೆ ಹೆಚ್ಚಾಗುತ್ತಲಿದ್ದು, ಕ್ವಾರಂಟೈನ್ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಯೋಚನೆ ನಡೆಸಿದೆ. ಈಗಾಗಲೇ ಪಾಸ್ ಇಲ್ಲದೇ ಜಿಲ್ಲೆ ಪ್ರವೇಶಿಸಿದ್ದ ಗರ್ಭಿಣಿಯ ಪತಿ, ಸಹೋದರ, ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ.