Advertisement
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್ ಗ್ರಾಮದ ಶನೇಶ್ವರ ಸ್ವಾಮಿ ಹಾಗೂ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಕ್ಷದ ಮುಖಂಡರೊಂದಿಗೆ ಪ್ರಚಾರ ಆರಂಭಿಸಿದರು. ಗ್ರಾಮದ ಹಲವು ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ನೀಡುವ ಮೂಲಕ ಮತಯಾಚಿಸಿದರು.
Related Articles
Advertisement
ಏ.8ಕ್ಕೆ ಮೋದಿ: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏಪ್ರಿಲ್ 8ರಂದು ಬೃಹತ್ ರ್ಯಾಲಿ ಆಯೋಜಿಸಿದ್ದು, ಪ್ರಧಾನಿ ನರೇಂದ್ರಮೋದಿ ಅವರು ಅಂದು ಮಧ್ಯಾಹ್ನ 3ಕ್ಕೆ ಬೃಹತ್ ರ್ಯಾಲಿಯನ್ನುದ್ದುಶಿಸಿ ಮಾತನಾಡಲಿದ್ದಾರೆ.
ಕಳೆದ ಬಾರಿಯೂ ಏಪ್ರಿಲ್ 8ರಂದೇ ಮೈಸೂರಿಗೆ ಚುನಾವಣಾ ಪ್ರಚಾರಜ್ಜೆ ಆಗಮಿಸಿದ್ದ ಅವರು, ಅಂದು ಮೈಸೂರು ಪ್ಯಾರೀಸ್‌ನಂತೆ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕೆಂದು ಹೇಳಿದ್ದರು, ನಮ್ಮಲ್ಲಿ ಎರಡು ರಾಷ್ಟ್ರೀಯ ಉದ್ಯಾನವನ, ಎರಡು ನದಿಗಳು, ಭಕ್ತಿಗೆ ಒಂದು ಬೆಟ್ಟವಿದೆ. ಆದರೆ, ಸಂಪರ್ಕದ ಸಮಸ್ಯೆಯಿಂದಾಗಿ ಸಾಕಷ್ಟು ಪ್ರವಾಸಿಗರು ಬರುತ್ತಿರಲಿಲ್ಲ.
ಅದಕ್ಕಾಗಿಯೇ ಈಗ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗ ಪೂರ್ಣ, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಲು ಮೋದಿ ಅವರೇ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.
ಸಂಪರ್ಕ ವ್ಯವಸ್ಥೆ ಅನುಕೂಲ ಮಾಡಿಕೊಟ್ಟಷ್ಟು ಪ್ರವಾಸಿಗರು ಹೆಚ್ಚಾಗಿ ಬರಲಿದ್ದಾರೆ ಎಂದರು. ಹಿನಕಲ್ ಮೇಲ್ಸೇತುವೆಗೆ ಒಂದು ಪೈಸೆ ಕೊಡಲಿಲ್ಲ. ಮೂರು ವರ್ಷಗಳ ಕಾಲ ನರ್ಮ್ ಯೋಜನೆ ವಿಸ್ತರಿಸುವ ಜತೆಗೆ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಯಿತು.
ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಅನುದಾನ ಕೊಡಿ ಅಂದರೆ ಹುಂಡಿ ಒಡೆಸಿದರು.ನಾನು ಕೇಂದ್ರದ ಪ್ರಸಾದ ಯೋಜನೆಯಿಂದ 100 ಕೋಟಿ ಕೊಡಿಸಿದ್ದೇನೆ ಎಂದರು. ಪಕ್ಷದ ಮುಖಂಡರಾದ ಹೇಮಂತ್ ಕುಮಾರಗೌಡ, ಅರುಣಕುಮಾರಗೌಡ, ಬೋಗಾದಿ ನಂದೀಶ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಚರ್ಚೆಗೆ ಬಂದರೆ ದಾಖಲೆ ಸಹಿತ ಉತ್ತರ ಕೊಡುವೆ: ಮೈಸೂರಿಗೆ ಸಂಸದ ಪ್ರತಾಪ್‌ಸಿಂಹ ಕೊಡುಗೆ ಶೂನ್ಯ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ ಪ್ರತಾಪ್‌ಸಿಂಹ 1983ರಿಂದ 2008ರವರೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ, ಎರಡು ಬಾರಿ ಉಪಮುಖ್ಯಮಂತ್ರಿಯಾಗಿದ್ದೀರಿ,
ಆ ಕ್ಷೇತ್ರದ ಜನರಿಗೆ ಕುಡಿಯಲು ನೀರು ಕೊಡಲು ಸಾಧ್ಯವಾಗಲಿಲ್ಲ. ಬರೀ ಸುಳ್ಳು ಹೇಳಿಕೊಂಡು ಬಂದಿದ್ದಕ್ಕೆ ಜನರು ನಿಮಗೆ ಪಾಠ ಕಲಿಸಿದ್ದಾರೆ. ಅಂಥವರ ಮಾತಿಗೆ ಉತ್ತರ ಕೊಡಲ್ಲ ಎಂದರು. ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡಲು ನಾನೊಬ್ಬನೇ ಸಾಕು.
ಸಿದ್ದರಾಮಯ್ಯ ಹಾಗೂ ಅವರ ಪಕ್ಷದ ಅತಿರಥ ಮಹಾರಥರೇ ಚರ್ಚೆಗೆ ಬರಲಿ. ನಾನು ಮತ್ತು ನಮ್ಮ ಕಾರ್ಯಕರ್ತರು ಎಲ್ಲ ಆಧಾರ,ದಾಖಲೆ ಸಮೇತ ಉತ್ತರ ಕೊಡಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ನನ್ನ ಪರ ಪ್ರಚಾರಕ್ಕೆ ಜಗದೇಕವೀರ ಪ್ರಧಾನಿ ನರೇಂದ್ರಮೋದಿ ಅವರೇ ಮೈಸೂರಿಗೆ ಬರುತ್ತಿರುವಾಗ ಬೇರೆಯವರು ಬರುವುದು ನನಗೆ ಮುಖ್ಯವಲ್ಲ .-ಪ್ರತಾಪ್‌ಸಿಂಹ, ಬಿಜೆಪಿ ಅಭ್ಯರ್ಥಿ