Advertisement

ಧನಾತ್ಮಕ ಒಕ್ಕೂಟ: ಕೋವಿಡ್‌-19 ಮತ್ತು ಲಾಕ್‌ಡೌನ್‌

10:55 PM Jun 20, 2020 | Sriram |

ಇವತ್ತಿನವರೆಗೂ ಈ ವರ್ಷ ಕೋವಿಡ್‌-19ರ ವರ್ಷ ಎಂಬುದಾಗಿ ನಾನು ನಂಬಿದ್ದೇನೆ. ಕೋವಿಡ್‌-19 ನಮ್ಮೆಲ್ಲರ ಬದುಕನ್ನೂ ಹೈರಾಣಾಗಿಸಿದೆ. ಉದಾಹರಣೆಯಾಗಿ ಹೇಳಬೇಕೆಂದರೆ, ಲಾಕ್‌ಡೌನ್‌, ಕ್ವಾರಂಟೈನ್‌, ಕೊರೊನೇತರ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗಳ ಲಭ್ಯತೆಯ ಕೊರತೆ, ಇದೇ ಕಾರಣಕ್ಕೆ ಕೆಲವೊಮ್ಮೆ ಮರಣ, ಆರಾಧನಾಲಯಗಳ ಮುಚ್ಚುಗಡೆ, ಉದ್ಯೋಗ ನಷ್ಟ, ವೇತನ ಕಡಿತ ಮತ್ತು ಅದರಿಂದಾಗಿ ಆರ್ಥಿಕ ಸಂಕಷ್ಟ, ಹೊಟೇಲ್‌, ಸೆಲೂನ್‌, ಶಿಕ್ಷಣ ಸಂಸ್ಥೆಗಳ ಮುಚ್ಚುಗಡೆ, ಬೀದಿಬದಿ ವ್ಯಾಪಾರಿಗಳ ಸಂಕಷ್ಟ ಹಾಗೂ ವಲಸಿಗ ಕಾರ್ಮಿಕರ ದಯನೀಯ ಬದುಕು ಇತ್ಯಾದಿ.

Advertisement

ಈ ಎಲ್ಲ ಸಂಕಷ್ಟಗಳ ನಡುವೆಯೂ ಕೋವಿಡ್‌-19 ಮತ್ತು ಲಾಕ್‌ಡೌನ್‌ ಎಂಬ ಈ ಎರಡು ವಿದ್ಯಮಾನಗಳು ಜತೆಗೂಡಿ ಉಂಟು ಮಾಡಿರುವ ಧನಾತ್ಮಕ ಪರಿಣಾಮಗಳ ಬಗ್ಗೆ ವಿವರಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

1. ಕೌಟುಂಬಿಕ ಸಮಯವೃದ್ಧಿ
ನಮ್ಮ ಕೌಟುಂಬಿಕ ನಡವಳಿಕೆಯು ಈ ಅವಧಿಯಲ್ಲಿ ಭಾರೀ ಬದಲಾವಣೆಗೆ ಒಳಗಾಗಿರುವುದನ್ನು ನೀವು ಗಮನಿಸಿರಬಹುದು. ಒಳಾಂಗಣ ಆಟಗಳನ್ನು ಆಡುವುದು, ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು, ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಮತ್ತು ಕುಟುಂಬದ ವೇಳಾಪಟ್ಟಿಯನ್ನು ಅನುಸರಿಸುವುದರ ಮೂಲಕ ಕುಟುಂಬ ಸದಸ್ಯರು ಹೆಚ್ಚು ಸಮಯವನ್ನು ಜತೆಯಾಗಿ ಕಳೆಯಲು ಆರಂಭಿಸಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಮುಖ ನೋಡದಿದ್ದ ಅನೇಕ ಕುಟುಂಬ ಸದಸ್ಯರು, ಗೆಳೆಯರು ಈಗ ಜತೆಯಾಗಿದ್ದಾರೆ. ಪುಟ್ಟ ಮಕ್ಕಳು ಮತ್ತು ಹಿರಿಯರ ಬಗ್ಗೆ ಹೆಚ್ಚು ಕಾಳಜಿ ಈಗ ಎಲ್ಲರ ಆದ್ಯತೆಯಾಗಿ ಬಿಟ್ಟಿದೆ.

2. ಅನೇಕ ಆ್ಯಪ್‌ಗಳ ಆರಂಭ
ಭಾರತ ಸರಕಾರವು ತನ್ನ ನಾಗರಿಕರಿಗೆ ಸಹಾಯ ಮಾಡುವುದಕ್ಕಾಗಿ ಅನೇಕ ಆ್ಯಪ್‌ಗಳನ್ನು ಆರಂಭಿಸಿದೆ. ಅವುಗಳಲ್ಲಿ ಕೆಲವು:
-ಆರೋಗ್ಯ ಸೇತು: ವ್ಯಕ್ತಿಯ ಸನಿಹದಲ್ಲಿ ಯಾರಾದರೂ ಕೋವಿಡ್‌-19 ರೋಗಿಗಳು ಇದ್ದಾರೆಯೇ ಎಂಬುದನ್ನು ನಿರ್ಧರಿಸುತ್ತದೆ.
– ಚಾಟ್‌ಬಾಟ್‌: ಕೋವಿಡ್‌-19 ಕಾಯಿಲೆಯ ಚಿಹ್ನೆಗಳು, ಸನಿಹದ ಕೋವಿಡ್‌-19 ಪರೀಕ್ಷಾಲಯಗಳ ಬಗ್ಗೆ ಜನರು ಹೊಂದಿರುವ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಸಹಾಯವಾಣಿ ಮಾದರಿಯ ಆ್ಯಪ್‌.
-ಕೋವಿಡ್‌-19 ಕವಚ: ನಾವು ಹೆಚ್ಚು ಅಪಾಯದ ಭೌಗೋಳಿಕ ವಲಯದಲ್ಲಿ ಇದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುವ ಆ್ಯಪ್‌.
-ಕೋವಿಡ್‌-19 ಫೀಡ್‌ಬ್ಯಾಕ್‌: ಕೋವಿಡ್‌-19 ವೈರಸ್‌ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾದವರಿಂದ ಫೀಡ್‌ಬ್ಯಾಕ್‌.

3. ಹಳೆಯ ನೆನಪುಗಳ ಮೆಲುಕು, ಹವ್ಯಾಸಗಳು ಪುನರಾರಂಭ
ನಮ್ಮಲ್ಲಿ ಅನೇಕರು ಮನೆಯಲ್ಲಿ ಕಾಲ ಕಳೆದ ಈ ಅವಧಿಯಲ್ಲಿ ಹಳೆಯ ಆಲ್ಬಂ ಗಳನ್ನು ತೆರೆದು, ಹಳೆಯ ದಿನಗಳನ್ನು ಸ್ಮರಿಸಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದೆವು, ಆ ಕ್ಷಣಗಳನ್ನು ಅತ್ಯಂತವಾಗಿ ಅನುಭವಿಸಿದೆವು. ಕೆಲವರು ಚಿತ್ರ ರಚನೆ, ಕ್ರಾಫ್ಟ್, ಪುಸ್ತಕ ಓದುವುದು, ಬರೆಯುವುದು, ಹೂ ತೋಟ ಮಾಡುವುದು ಇತ್ಯಾದಿ ಹವ್ಯಾಸಗಳನ್ನು ಪುನರಾರಂಭಿಸಿದರು.

Advertisement

4. ಅಪರಾಧಗಳ ಸಂಖ್ಯೆ ಇಳಿಮುಖ, ಪ್ರಾಣಗಳ ಉಳಿವು
ದೇಶ ಕಂಡಿರುವ ಇನ್ನೊಂದು ಅನಿರೀಕ್ಷಿತ ಬೆಳವಣಿಗೆ ಎಂದರೆ ಅಪರಾಧ ಪ್ರಕರಣಗಳು ಇಳಿಮುಖವಾಗಿರುವುದು. ಕೊಲೆ ಪ್ರಕರಣಗಳು, ಭಯೋತ್ಪಾದನೆ, ಹೊಡೆದಾಟಗಳು, ರಸ್ತೆ ಅಪಘಾತಗಳು/ ದುರ್ಮರಣಗಳು, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಅಪರಾಧಗಳು, ಜೂಜು, ಅತ್ಯಾಚಾರ ಮತ್ತು ಆತ್ಮಹತ್ಯೆಯಂತಹ ಅಪರಾಧ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಇಳಿಕೆ ಕಂಡಿವೆ. ಕೇರಳದಂತಹ ಕೆಲವು ರಾಜ್ಯಗಳಲ್ಲಿ ಕೊಲೆ ಪ್ರಕರಣಗಳು ಶೇ.40ರಷ್ಟು, ಅತ್ಯಾಚಾರ ಪ್ರಕರಣಗಳು ಶೇ.70ರಷ್ಟು ಹಾಗೂ ಮಹಿಳೆ ಮತ್ತು ಮಕ್ಕಳ ವಿರುದ್ಧ ಅಪರಾಧ ಪ್ರಕರಣಗಳು ಶತಪ್ರತಿಶತ ಇಳಿಕೆಯಾಗಿವೆ. ಈಶಾನ್ಯ ರಾಜ್ಯಗಳಲ್ಲಿ ರಸ್ತೆ ಅಪಘಾತಗಳು ಶೇ.10ರಷ್ಟು ಕಡಿಮೆಯಾಗಿದ್ದರೆ ತೆಲಂಗಾಣ ರಾಜ್ಯದಲ್ಲಿ ಶೇ.60ರಷ್ಟು ಕುಸಿದಿವೆ. ದಿಲ್ಲಿಯಲ್ಲಿ ಅಪರಾಧಗಳು ಶೇ.42ರಷ್ಟು ಇಳಿಮುಖವಾಗಿವೆ.

5. ಮಾಲಿನ್ಯಮುಕ್ತ ಪರಿಸರ
ಈ ವರ್ಷವನ್ನು ಸಸ್ಯ ಆರೋಗ್ಯದ ವರ್ಷ ಎಂಬುದಾಗಿ ಕರೆಯಲಾಗಿದೆ. ಇದಕ್ಕೆ ತಕ್ಕುದಾಗಿಯೇ ಮಾತೆ ಪ್ರಕೃತಿಯು ಈ ಅವಧಿಯಲ್ಲಿ ತನಗಾಗಿದ್ದ ಗಾಯಗಳನ್ನು ಗುಣಪಡಿಸಿಕೊಂಡು ಹಳೆಯ ಲವಲವಿಕೆಗೆ ಮರಳಿದ್ದಾಳೆ. ಶುಭ್ರವಾದ ಆಕಾಶ, ಪರಿಶುದ್ಧ ನದಿ, ಸರೋವರಗಳು, ದೂರದಿಂದಲೂ ಕಾಣಸಿಗುವ ಪರ್ವತಶ್ರೇಣಿಗಳು, ಇಂಗಾಲ ಮಾಲಿನ್ಯ ಕಡಿಮೆಯಾಗಿರುವುದು, ಟ್ರಾಫಿಕ್‌ ಮುಕ್ತ ರಸ್ತೆಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಮುಕ್ತವಾಗಿ ಓಡಾಡುತ್ತಿರುವುದು ನಿಸರ್ಗ ರಮಣೀಯವಾಗಿದೆ. ಕೆಲವು ಉದಾಹರಣೆಗಳನ್ನು ಹೇಳಬೇಕೆಂದರೆ, ಕೋಝಿಕ್ಕೋಡ್‌ನ‌ಲ್ಲಿ ಪುನುಗು ಬೆಕ್ಕು ನಗರ ಮಧ್ಯದಲ್ಲಿ ಕಂಡುಬಂತು, ಮುಂಬಯಿ ಶಹರದ ನೆರೂಳ್‌ನಲ್ಲಿ ಫ್ಲೆಮಿಂಗೋ ಪಕ್ಷಿಗಳು ಕಾಣಸಿಕ್ಕಿದವು, ಹಿಮಾಲಯದ ಧವಳಧರ ಶ್ರೇಣಿ 213 ಕಿ.ಮೀ. ದೂರದ ಜಾಲಂಧರ್‌ನಿಂದಲೇ ದೃಷ್ಟಿಗೋಚರವಾಗಲಾರಂಭವಾಯಿತು.

6. ಮನಸ್ಸು , ದೇಹ ಮತ್ತು ಆತ್ಮಗಳ ಆರೈಕೆ
ಈ ಲಾಕ್‌ಡೌನ್‌ ಸಮಯ ನಮ್ಮ ಮನಸ್ಸು, ದೇಹ ಮತ್ತು ಆತ್ಮಗಳನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಒಂದು ಉತ್ತಮ ಅವಧಿಯಾಗಿತ್ತು. ರೋಗ ಪ್ರತಿರೋಧಕ ಶಕ್ತಿಯನ್ನು ಉದ್ದೀಪಿಸುವ ಆಹಾರವಸ್ತುಗಳ ಸೇವನೆ ಹೆಚ್ಚಿತು, ಜಂಕ್‌ ಆಹಾರ, ಮದ್ಯಪಾನ ದೂರವಾಯಿತು. ಈ ದಿನಗಳಲ್ಲಿ ದೇಹ ಮತ್ತು ಮನಸ್ಸುಗಳ ಪುನರುಜ್ಜೀವನದ ಜತೆಗೆ ನಾವು ನಮ್ಮ ಆತ್ಮಗಳನ್ನು ಧ್ಯಾನ, ಯೋಗ, ಧರ್ಮಗ್ರಂಥಗಳ ಓದು ಮತ್ತು ವ್ಯಾಯಾಮಗಳಲ್ಲಿ ಕಳೆದೆವು. ಇದು ಇತರ ಅನೇಕ ಅನಾರೋಗ್ಯಗಳನ್ನು ಕಡಿಮೆ ಮಾಡಿತು. ಇದರಿಂದಾಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ರೋಗಿಗಳ ಸಂದಣಿ ಕಡಿಮೆಯಾಯಿತು. ಆನ್‌ಲೈನ್‌ ಮೂಲಕ ಧಾರ್ಮಿಕ ಪ್ರವಚನ ಇತ್ಯಾದಿಗಳು ಎಲ್ಲ ವಯೋಮಾನದವರ ನೈತಿಕ ಶಕ್ತಿ, ಧಾರ್ಮಿಕ ಬುದ್ಧಿಯನ್ನು ಉದ್ದೀಪಿಸಿತು.

7. ವರ್ಚುವಲ್‌ ಕಲಿಕೆಯ ವಾತಾವರಣ
ಲಾಕ್‌ಡೌನ್‌ ಅವಧಿಯ ನಾಟಕೀಯ ಬೆಳವಣಿಗೆಯಲ್ಲಿ ಆನ್‌ಲೈನ್‌ ಕಲಿಕೆಯ ಮೇಲೆ ಒತ್ತು ಹೆಚ್ಚಿದೆ. ಇದು ಹೆಚ್ಚು ಮಾಹಿತಿಯ ಹರಿಯುವಿಕೆ, ವಿದ್ಯಾರ್ಥಿ-ಶಿಕ್ಷಕರ ಸಂವಹನ, ಚರ್ಚೆಯ ಪ್ರಮಾಣ ಮತ್ತು ಗುಣಮಟ್ಟಗಳ ವೃದ್ಧಿ, ಸಮಯ ಬದ್ಧ ತರಗತಿ ಬೋಧನೆಯಿಂದ ಸ್ವಾತಂತ್ರ್ಯಗಳನ್ನು ಹೆಚ್ಚಿಸಿದೆ; ಧ್ವನಿಮುದ್ರಿತಗೊಂಡ ಪಾಠ ಪ್ರವಚನಗಳನ್ನು ತಮ್ಮ ಆದ್ಯತೆಯ ಮೇರೆಗೆ ಕೇಳಿ ಕಲಿಯುವ ವಿದ್ಯಾರ್ಥಿ ಆಯ್ಕೆಯನ್ನು ಹೆಚ್ಚಿಸಿದೆ. ಕ್ವಾರಂಟೈನ್‌ ಕ್ವಿಜ್‌ ಮತ್ತು ಇತರ ಸ್ಪರ್ಧೆಗಳು ಕಲಿಯುವ ಪ್ರಕ್ರಿಯೆಯನ್ನು ಉಚ್ಚಸ್ಥಾಯಿಯಲ್ಲಿ ಇರಿಸಿವೆ. ಅನೇಕ ಆನ್‌ಲೈನ್‌ ಪ್ಲಾಟ್‌ಫಾರ್ಮ್ಗಳು ತಮ್ಮ ಸೇವೆಯನ್ನು ಮುಕ್ತವಾಗಿಸಿವೆ. ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳುವುದು ಹೇಗೆ, ಅಸೈನ್‌ಮೆಂಟ್‌ ಕೊಡುವುದು ಹೇಗೆ, ಮೌಲ್ಯಮಾಪನ ಹೇಗೆ ಮತ್ತು ಆನ್‌ಲೈನ್‌ ಮೂಲಕ ಕಾನ್ಫರೆನ್ಸ್‌, ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ಹೇಗೆ ಹಮ್ಮಿಕೊಳ್ಳುವುದು ಎಂಬ ಬಗ್ಗೆ ವಿವಿಧ ಪ್ಲಾಟ್‌ಫಾರ್ಮ್ಗಳ ಮೂಲಕ ಕೋಚಿಂಗ್‌ ಸಂಸ್ಥೆಗಳು ಮತ್ತು ಬೋಧಕ ವರ್ಗ ಜಾಹೀರಾತುಗಳನ್ನು ನೀಡುತ್ತಿದ್ದಾರೆ.

8. ವಿಭಿನ್ನ ಬಗೆಯ ಕೌಶಲಗಳನ್ನು ಕಲಿಯುವ ಅವಕಾಶ
ಹೊಟೇಲ್‌ಗ‌ಳು ಮತ್ತು ರೆಸ್ಟೋರೆಂಟ್‌ಗಳು ಲಾಕ್‌ಡೌನ್‌ ಅವಧಿಯಲ್ಲಿ ಮುಚ್ಚಿದ್ದುದರಿಂದ ಅನೇಕರು ಅಡುಗೆಯ ಪ್ರಾಥಮಿಕ ಕೌಶಲಗಳನ್ನು ಕಲಿಯುವುದಕ್ಕಾಯಿತು. ಸೆಲೂನ್‌ಗಳು ಮತ್ತು ಬಾರ್ಬರ್‌ ಶಾಪ್‌ಗ್ಳು ಮುಚ್ಚಿದ್ದರಿಂದ ಬಹಳ ಜನರು ತಲೆಗೂದಲು ಕತ್ತರಿಸುವುದನ್ನು ಕಲಿತುಕೊಂಡರು. ರಸ್ತೆಗಳಲ್ಲಿ ವಾಹನಗಳು ಕಡಿಮೆ ಇದ್ದುದರಿಂದ ಹೊಸಬರಿಗೆ ವಾಹನ ಚಲಾವಣೆ, ಸೈಕಲ್‌ ಸವಾರಿ ಅಭ್ಯಾಸ ಮಾಡುವುದಕ್ಕಾಯಿತು. ಇದುವರೆಗೆ ಸಿಗದಿದ್ದಷ್ಟು ಸಮಯ ಸಿಕ್ಕಿದ್ದರಿಂದ ಅನೇಕರು ಹೊಸ ಹೊಸ ಕೌಶಲಗಳನ್ನು, ವಿದ್ಯೆಗಳನ್ನು ಕಲಿತುಕೊಂಡರು.

9. ಕೆಲಸದ ಸಂಸ್ಕೃತಿ
ಅನೇಕ ಕಂಪೆನಿಗಳು, ಉದ್ದಿಮೆಗಳು, ಸಂಸ್ಥೆಗಳು ಮನೆಯಿಂದಲೇ ಕೆಲಸ ಎಂಬ ಹೊಸ ಮಂತ್ರಕ್ಕೆ ಹೆಚ್ಚು ಒತ್ತು ನೀಡಿದವು. ವರ್ಚವಲ್‌ ಮೀಟಿಂಗ್‌ ಹೆಚ್ಚಳ, ವಾಯುಯಾನ, ರಸ್ತೆಯ ಮೂಲಕ ಯಾನ ಕಡಿಮೆಯಾಗಿ ಕಂಪೆನಿಗಳಿಗೆ ಖರ್ಚು ವೆಚ್ಚ ಕಡಿಮೆಯಾಯಿತು. ಅಲ್ಲದೆ ಉದ್ಯೋಗ ಸ್ಥಳದ ಸಮಸ್ಯೆಗಳೂ ನಿವಾರಣೆಯಾದವು. ಮನೆಯಿಂದಲೇ ಕೆಲಸ ನಿರ್ವಹಣೆಯು ಟ್ರಾಫಿಕ್‌ ಜ್ಯಾಮ್‌, ನಗರಗಳಲ್ಲಿ ಪೀಕ್‌ ಅವರ್‌ ಇತ್ಯಾದಿ ಕಡಿತಕ್ಕೆ ನೆರವಾಗಿ ಮಾಲಿನ್ಯ ನಿವಾರಣೆಗೂ ಸಹಕಾರಿಯಾಯಿತು.

10. ಧರ್ಮಕ್ಕಿಂತ ಮೇಲೆ ನಿಂತ ಮಾನವೀಯತೆ
ಮನುಷ್ಯ ಧರ್ಮವು ಎಲ್ಲ ಧರ್ಮಗಳಿಗಿಂತ ಮಿಗಿಲಾದುದು ಎಂಬುದನ್ನು ಲಾಕ್‌ಡೌನ್‌ ಅವಧಿಯು ತೋರಿಸಿಕೊಟ್ಟಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜನರು ಒಬ್ಬರಿಗೊಬ್ಬರು ಸಹಕರಿಸಿದರು, ಅಗತ್ಯವುಳ್ಳವರಿಗೆ ಆಹಾರ, ಬಟ್ಟೆಬರೆ, ಅಗತ್ಯವಸ್ತುಗಳನ್ನು ನೀಡಿದರು, ಧರ್ಮ-ಜಾತಿಗಳನ್ನು ನೋಡದೆಯೇ ಮೃತರ ಅಂತ್ಯಸಂಸ್ಕಾರಗಳನ್ನು ನೆರವೇರಿಸಿದರು. ಕೋವಿಡ್‌ ಮಹಾಮಾರಿಯ ವಿರುದ್ಧ ಎಲ್ಲ ಧರ್ಮಗಳ ನಾಯಕರೂ ಒಂದಾಗಿ ಹೋರಾಟಕ್ಕೆ ಇಳಿದರು.

ಕೋವಿಡ್‌ ವೈರಸ್‌ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಮನುಕುಲವು ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತುಕೊಳ್ಳುವಂತಾಯಿತು. ಮನುಷ್ಯನೇ ಈ ಜೀವಸೃಷ್ಟಿಯಲ್ಲಿ ಅತ್ಯುಚ್ಚ ಎಂಬ ನಮ್ಮ ಅಹಂಕಾರವು ಮಾಯವಾಗಿ ಸಾವಿನ ಭಯ ಮೂಡಿಕೊಂಡಿದೆ. ಭವಿಷ್ಯದಲ್ಲಿ ನಾವು ಕೋವಿಡ್‌ ಜತೆಗೆಯೇ ಜೀವಿಸಬೇಕಾದೀತು, ಅಲ್ಲದೆ ಇಂತಹ ಪರಿಸ್ಥಿತಿ ಮತ್ತೂಮ್ಮೆ ಉದ್ಭವಿಸದೆ ಇರಬೇಕಾದರೆ ಈಗ ನಾವು ಹೊಂದಿರುವ ಸೃಷ್ಟಿಯೆದುರಿನ ವಿನೀತ ಭಾವವನ್ನು ಸದಾ ಮುಂದುವರಿಸಬೇಕು.

-ಡಾ| ದೀಪಾ ರಸ್ಕಿನ್ಹಾ
ಅಸಿಸ್ಟೆಂಟ್‌ ಪ್ರೊಫೆಸರ್‌,
ಕ್ಲಿನಿಕಲ್‌ ಸೈಕಾಲಜಿ ವಿಭಾಗ,
ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next