ಬೆಂಗಳೂರು: ಚಾಮರಾಜಪೇಟೆಯಲ್ಲಿ ಸಿಸಿಬಿ ಪೊಲೀಸರ ಸೋಗಿನಲ್ಲಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ನಡೆಸಿ 10 ಲಕ್ಷ ರೂ. ಲಪಟಾಯಿಸಿದ್ದಾರೆ.
ಉತ್ತರ ಭಾರತ ಮೂಲದ ಕಾಟನ್‌ಪೇಟೆಯ ನಿವಾಸಿ ಮುಲರಾಮ್ (37) ದರೋಡೆಗೊಳಗಾದವರು.
ಮುಲರಾಮ್ ಮನವರ್ತಪೇಟೆ ಬಳಿ ಶೂ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಬಟ್ಟೆ ವ್ಯಾಪಾರಿ ರಮೇಶ್ ಅವ ರು ಮುಲರಾಮ್ ಹಾಗೂ ಉತ್ತರ ಭಾರತದ ಕೆಲವರಿಗೆ ಉದ್ಯಮ ನಡೆಸಲು ಹಣ ಕೊಡುತ್ತಿದ್ದರು. ತಾವು ಕೆಲ ವ್ಯಾಪಾರಿಗಳಿಗೆ ಕೊಟ್ಟ ಹಣವನ್ನು ಸಂಗ್ರಹಿಸಿಕೊಂಡು ತರುವಂತೆ ಜ.13ರಂದು ಮುಲರಾಮ್‌ಗೆ ರಮೇಶ್ ಹೇಳಿದ್ದರು. ಅದರಂತೆ ಮುಲರಾಮ್ ಅದೇ ದಿನ ಸಂಜೆ ಕೆಲ ವ್ಯಾಪಾರಿಗಳಿಂದ 10 ಲಕ್ಷ ರೂ.ನ್ನು ಸಂಗ್ರಹಿಸಿಕೊಂಡು ಬ್ಯಾಗ್‌ನಲ್ಲಿ ತುಂಬಿ ಸೆಟಲೈಟ್ ಬಸ್ ನಿಲ್ದಾಣದ ಬಳಿಯಿರುವ ರಮೇಶ್ ಅವರಿಗೆ ಕೊಡಲು ಬೈಕ್‌ನಲ್ಲಿ ಬರುತ್ತಿದ್ದರು. ರಾತ್ರಿ 7.45ರ ಸುಮಾರಿಗೆ ಸಿರ್ಸಿ ವೃತ್ತದಿಂದ ಕೊಂಚ ಮುಂದೆ ಸಾಗುತ್ತಿದ್ದಂತೆ ಎರಡು ಬೈಕ್‌ನಲ್ಲಿ ಮುಲರಾಮ್ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಅಪರಿಚಿತರು ನಾವು ಸಿಸಿಬಿ ಪೊಲೀಸರು ಗಾಡಿ ನಿಲ್ಲಿಸಿ ಎಂದು ಸೂಚಿಸಿದ್ದರು.
ಪೊಲೀಸರು ಇರಬಹುದು ಎಂದು ಭಾವಿಸಿದ ಮುಲರಾಮ್ ಬೈಕ್ ಅನ್ನು ರಸ್ತೆ ಬದಿ ನಿಲುಗಡೆ ಮಾಡಿದ್ದರು. ಆ ವೇಳೆ ನಾಲ್ವರ ಪೈಕಿ ಇಬ್ಬರು ಮುಲರಾಮ್‌ನನ್ನು ಹಿಡಿದುಕೊಂಡರೆ, ಮತ್ತಿಬ್ಬರು 10 ಲಕ್ಷ ರೂ.ಯಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಮುಲರಾಮ್ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ತಮ್ಮ ಸುಳಿವು ಸಿಗಬಹುದು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಬ್ಲೇಡ್‌ನಿಂದ ಅವರ ಕೈ ಬೆರಳುಗಳಿಗೆ ಗಾಯಗೊಳಿಸಿದ್ದರು. ಹೀಗಾಗಿ ಮುಲರಾಮ್ ಪ್ರಕರಣ ನಡೆದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಮುಖಚಹರೆ ಕಾಣದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಗಳು ಹೆಲ್ಮೆಟ್ ಧರಿಸಿಕೊಂಡು ದ್ವಇಚಕ್ರವಾಹನದಲ್ಲಿ ಬಂದಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ