ದಾವಣಗೆರೆ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ವೈರಸ್ ಅಬ್ಬರದ ಮಧ್ಯೆಯೂ ಕಾಮಾಂಧರ ಕಾಮುಕ ವೈರಸ್ ಅಪ್ರಾಪ್ತೆಯರನ್ನು ಕಾಡುತ್ತಲೇ ಇದ್ದು ಜಿಲ್ಲೆಯಲ್ಲಿ ಪೋಕ್ಸೋ ( POSCO- protection of children from of sexual offence act) ಪ್ರಕರಣಗಳು ನಿರಂತರವಾಗಿ ದಾಖಲಾಗುತ್ತಲೇ ಇರುವುದು ಪೋಷಕರಲ್ಲಿ ಕಳವಳ ಮೂಡಿಸಿದೆ.
ಈ ವರ್ಷದ ಆರಂಭದಿಂದಲೇ ಕೋವಿಡ್ ವೈರಸ್ ವಿಶ್ವವನ್ನು ಕಾಡುತ್ತ ಮಹಾಮಾರಿಯಾಗಿ ಮಾರ್ಪಟ್ಟಿದೆ. ಕೋವಿಡ್ ಹರಡುವುದನ್ನು ತಡೆಯಲು ಲಾಕ್‌ಡೌನ್ ನಂಥ ಕ್ರಮಗಳನ್ನು ಪಾಲಿಸುತ್ತ ಬರಲಾಗಿದೆ.ಇಂಥ ಆತಂಕದ ಸಂದರ್ಭದಲ್ಲಿಯೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ಹಿಂಸೆಯಂಥ ಪ್ರಕರಣಗಳು ಮುಂದುವರಿದಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಅಪ್ರಾಪ್ತೆಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ಹಿಂಸೆಯಂಥ ಪ್ರಕರಣಗಳಿಗೆ ಸಂಬಂಧಿಸಿ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 35 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಕೇಂದ್ರ ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 14ಪ್ರಕರಣಗಳು ದಾಖಲಾಗಿವೆ. ಚನ್ನಗಿರಿ ತಾಲೂಕಿನಲ್ಲಿ ಎಂಟು, ಹರಿಹರ ತಾಲೂಕಿನಲ್ಲಿ ಏಳು, ಜಗಳೂರುತಾಲೂಕಿನಲ್ಲಿ ಐದು, ಹೊನ್ನಾಳಿ ತಾಲೂಕಿನಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.
ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 54 ಪ್ರಕರಣಗಳು ದಾಖಲಾಗಿದ್ದು, ಆಗಲೂ ದಾವಣಗೆರೆ ತಾಲೂಕಿನಲ್ಲಿ ಯೇ ಅತಿಹೆಚ್ಚು ಅಂದರೆ 29 ಪ್ರಕರಣಗಳು ದಾಖಲಾಗಿದ್ದವು. ಇನ್ನುಳಿದಂತೆ ಚನ್ನಗಿರಿ ತಾಲೂಕಿನಲ್ಲಿ 10, ಹರಿಹರ ತಾಲೂಕಿನಲ್ಲಿ ಐದು, ಹೊನ್ನಾಳಿ ತಾಲೂಕಿನಲ್ಲಿ ನಾಲ್ಕು, ಜಗಳೂರು ಹಾಗೂ ನ್ಯಾಮತಿ ತಾಲೂಕಿನಲ್ಲಿ ತಲಾ ಮೂರು ಪ್ರಕರಣಗಳು ದಾಖಲಾಗಿದ್ದವು.
ಎಲ್ಲವೂ ವಿಚಾರಣೆ, ತನಿಖೆ ಹಂತದಲ್ಲಿವೆ: ಪ್ರಸಕ್ತ ವರ್ಷ ದಾಖಲಾಗಿರುವ 35 ಪ್ರಕರಣಗಳಲ್ಲಿ 19 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಇನ್ನು 15ಪ್ರಕರಣಗಳು ತನಿಖಾ ಹಂತದಲ್ಲಿದ್ದು ಒಂದು ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲಾಗಿದೆ. ಕಳೆದ ವರ್ಷ 2019ರಲ್ಲಿಜಿಲ್ಲೆಯಲ್ಲಿ 54 ಪೋಕ್ಸೋಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 38 ಪ್ರಕರಣಗಳುನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ. 13 ಪ್ರಕರಣಗಳ ತನಿಖೆ ನಡೆಯುತ್ತಿದೆ. ಒಂದುಪ್ರಕರಣ ಸುಳ್ಳು ಎಂಬುದು ಸಾಬೀತಾಗಿದೆ. ಎರಡು ಪ್ರಕರಣಗಳು ಬೇರೆ ಜಿಲ್ಲೆಗೆ ವರ್ಗ ಮಾಡಲಾಗಿದೆ. ಒಟ್ಟಾರೆ ಪೋಕ್ಸೋ ಪ್ರಕರಣಗಳು ಜಿಲ್ಲೆಯಲ್ಲಿ ನಿರಂತರವಾಗಿ ದಾಖಲಾಗುತ್ತಿರುವುದು ಜಿಲ್ಲೆಯ ಹೆಣ್ಣು ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದು ಬಾಲಕಿಯರ ರಕ್ಷಣೆಗಾಗಿ ವಿಶೇಷ ಯೋಜನೆಯ ಅಗತ್ಯತೆ ಎದ್ದು ಕಾಣುತ್ತಿದೆ.
ಹಲವು ಪ್ರಕರಣ ದಾಖಲಾಗುವುದೇ ಇಲ್ಲ! : ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಘಟನೆಗಳು ನಾನಾ ರೀತಿಯಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇವೆ. ಆದರೆ, ಇವುಗಳಲ್ಲಿ ಬಹುತೇಕ ಪ್ರಕರಣಗಳನ್ನು ಸ್ಥಳೀಯವಾಗಿಯೇ ಮುಚ್ಚಿಹಾಕುವ ಪ್ರಯತ್ನ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಕಿರುಕುಳಕ್ಕೊಳಗಾದ ಅಪ್ರಾಪ್ತ ಬಾಲಕಿಯರ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಲು ಹಿಂಜರಿಯುತ್ತಿರುವುದೇ ಪ್ರಕರಣ ಬೆಳಕಿಗೆ ಬಾರದೇ ಇರಲು ಕಾರಣವಾಗಿದೆ. ಇಂಥ ಪ್ರಕರಣಗಳಲ್ಲಿ ಸಿಲುಕಿದಕಾರಣದಿಂದಾಗಿಯೇ ಅನೇಕ ಬಾಲಕಿಯರು ಅರ್ಧಕ್ಕೇ ಶಾಲೆ ಬಿಡುತ್ತಿರುವುದು ವಿಷಾದನೀಯ ಸಂಗತಿ
ನಿರಂತರ ಜಾಗೃತಿ…: ಪೋಕ್ಸೋಪ್ರಕರಣಗಳಲ್ಲಿ ಶೇ.60ಕ್ಕೂ ಹೆಚ್ಚು ಪ್ರಕರಣಗಳು ಹದಿಹರೆಯದ ಪ್ರೇಮ ಪ್ರಕರಣಗಳೇ ಆಗಿವೆ. ಅಪ್ರಾಪ್ತ ಬಾಲಕಿಯರು ಇಂಥ ದೌರ್ಜನ್ಯದಿಂದ ದೂರ ಉಳಿಯಲು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಾಗೂ ಸಾಂತ್ವನ ಕೇಂದ್ರಗಳ ಮೂಲಕ ನಿರಂತರ ಅರಿವು ಮೂಡಿಸಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಅಂಗನವಾಡಿ, ಶಾಲೆಗಳು ಸದ್ಯ ಬಂದ್ ಆಗಿದ್ದು, ಅವು ತೆರೆದ ಬಳಿಕ ಜಾಗೃತಿ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಲಾಗುವುದು
. -ಕೆ.ಎಚ್. ವಿಜಯಕುಮಾರ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
-ಎಚ್.ಕೆ. ನಟರಾಜ