ಪಣಜಿ: ಗೋವಾ ವಿಮೋಚನೆಯ ನಂತರವೂ ಪೋರ್ಚುಗೀಸ್ ಕುರುಹುಗಳು ರಾಜ್ಯದಲ್ಲಿ ಇನ್ನೂ ಜೀವಂತವಾಗಿವೆ. 2047ರ ವೇಳೆಗೆ ಪೋರ್ಚುಗೀಸ್ ಛಾಪನ್ನು ಅಳಿಸಿ ‘ಹೊಸ ಗೋವಾ’ ರಚಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಬೇತುಲ್ ಕೋಟೆಯಲ್ಲಿ ನಡೆದ 350ನೇ ಶಿವರಾಜ್ಯಾಭಿಷೇಕ ಸಮಾರಂಭದಲ್ಲಿ ಅವರು ಮಾತನಾಡಿ”ಬೇತುಲ್ ಕೋಟೆಯು ಗೋವಾದ ಐತಿಹಾಸಿಕ ಹೆಗ್ಗಳಿಕೆಯಾಗಿದೆ. ಇದನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕೋಟೆಯ ಪರಂಪರೆಯನ್ನು ಉಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಗೋವಾದ ಮಡಗಾಂವ ಸಮೀಪ ಕೋಟೆಯ ಪಾರಂಪರಿಕತೆಯನ್ನು ಉಳಿಸುವ ಪ್ರಯತ್ನವನ್ನು ನಾವು ಮುಂದುವರಿಸುತ್ತಿದ್ದು, ಅಬಕಾರಿ ಇಲಾಖೆಯಿಂದ ಭೂಮಿಯನ್ನು ಪಡೆದು ಕೋಟೆಯ ಸೌಂದರ್ಯೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪಟ್ಟಾಭಿಷೇಕ ಮಹೋತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿದಿನ ಆಚರಿಸಬೇಕು ಎಂದು ಸಚಿವ ಕಲಾ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗಾವಡೆ ಹೇಳಿದರು.
ಸಮಾಜ ಕಲ್ಯಾಣ ಸಚಿವ ಸುಭಾಷ್ ಫಲ್ದೇಸಾಯಿ, ಮಾತನಾಡಿ, ನಾವು ನಾಶವಾದ ಸಪ್ತಕೋಟೇಶ್ವರ ದೇವಸ್ಥಾನವನ್ನೂ ಪುನರ್ ನಿರ್ಮಿಸಿದ್ದೇವೆ. ಶಿವಾಜಿ ಮಹಾರಾಜರು 350 ವರ್ಷಗಳ ಹಿಂದೆ ಸ್ವರಾಜ್ಯ ಪರಿಕಲ್ಪನೆಯನ್ನು ಪರಿಚಯಿಸಿದರು ಮತ್ತು ಅದರಂತೆ ನಡೆದುಕೊಂಡರು. ಹಿಂದೂ ಸಂಸ್ಕೃತಿ ಯನ್ನು ಉಳಿಸುವಲ್ಲಿ ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಮಹಾರಾಜರ ಪಾಲು ಇದೆ. ಆದ್ದರಿಂದ ಪುರಾತತ್ವ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಶಿವಾಜಿ ಮಹಾರಾಜರ ಕೃತಿಗಳನ್ನು ಆಧರಿಸಿ ಮುಂದಿನ ಒಂದು ವರ್ಷದಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಲ್ಟನ್ ಡಿಕೋಸ್ತಾ, ಬಾಬು ಕವಳೇಕರ್ ಉಪಸ್ಥಿತರಿದ್ದರು.