Advertisement
Related Articles
Advertisement
ಎರಡನೇ ಹಂತದ ಬಂದರು ವಿಸ್ತರಣೆಗೆ ಅಲೆತಡೆಗೋಡೆ ಕಾಮಗಾರಿಗೆ ಸರ್ಕಾರ ಮುಂದಾಗಿತ್ತು. 175 ಕೋಟಿ ರೂ. ವೆಚ್ಚದ ಅಲೆ ತಡೆಗೋಡೆ ಕಾಮಗಾರಿ ನಿರ್ಮಾಣ ಆರಂಭವಾಗುತ್ತಿದ್ದಂತೆ, ಪರಿಸರ ಇಲಾಖೆ ಅನುಮತಿ ಪತ್ರ ಪಡೆದಿಲ್ಲ ಎಂದು ಮೀನುಗಾರರ ಮುಖಂಡರೊಬ್ಬರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಪರಿಸರ ಇಲಾಖೆ ಅಭಿಪ್ರಾಯ ಕೇಳಿತ್ತು. ಪರಿಸರ ಇಲಾಖೆ ಮೊದಲು ಸಲ್ಲಿಸಿದ ವರದಿ ಹಿಂದೆ ಪಡೆದು, ಹೊಸದಾಗಿ ಪರಿಸರ ಪ್ರಭಾವ ಮತ್ತು ಪರಿಣಾಮಗಳ ವರದಿ ನೀಡುವುದಾಗಿ ಹೈಕೋರ್ಟ್‌ಗೆ ಹೇಳಿತ್ತು. ಕೋರ್ಟ್‌ಗೆ ನೀಡಿದ ಮಾತಿನಂತೆ ಮಂಗಳೂರಿನ ಹಿರಿಯ ಪರಿಸರ ಅಧಿಕಾರಿ ಕಾರವಾರ ಬೀಚ್ ಮತ್ತು ಬಂದರು, ಬಾವುಟಕಟ್ಟೆ ಪ್ರದೇಶ, ಬೈತಖೋಲ ಪ್ರದೇಶಗಳನ್ನು ಪರಿಶೀಲಿಸಿದರು. ಹಾಗೂ ಬಂದರು ಇಲಾಖೆ ಬಳಿ ಕೆಲ ಮಾಹಿತಿ ಪಡೆದರು. ಬಾವುಟ ಕಟ್ಟೆ ಪಕ್ಕದ ರಾಜಾಕಾಲುವೆ ನೀರು ಸೇರುವ ಹಳ್ಳದ ಬದಿಯಿಂದ ಅಲೆ ತಡೆಗೋಡೆ ನಿರ್ಮಾಣಕ್ಕೆ ಬಂದರು ಇಲಾಖೆ ಉದ್ದೇಶಿಸಿದ್ದು, ಮಕ್ಕಳ ಉದ್ಯಾನವನದ ಪ್ಯಾರಾಗೋಲಾದಿಂದ ಅಲೆ ತಡೆಗೋಡೆ ನಿರ್ಮಾಣದ ಉದ್ದೇಶ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಸರ್ಕಾರದ ಬಳಿ ಇದ್ದು, ಹೈಕೋರ್ಟ್‌ಗೆ ಸಹ ಸರ್ಕಾರದಿಂದ ಮಾಹಿತಿ ನೀಡಿರುವ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಜಾಣ ಮತ್ತು ಕಾನೂನು ಬದ್ಧ ನಡೆ ಇಡುತ್ತಿರುವ ಲಕ್ಷಣಗಳು ಗೋಚರವಾಗಿವೆ. ಬೀಚ್ ಹಾಗೂ ಮೀನುಗಾರರನ್ನು ಉಳಿಸಿಕೊಂಡೇ ಬಂದರು ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದಂತೆ ಕಾಣುತ್ತಿದೆ. ಹಿರಿಯ ಪರಿಸರ ಅಧಿಕಾರಿ ಪೊಲೀಸ್ ಬಂದೋಬಸ್ತನಲ್ಲಿ ಬಂದರು ಮತ್ತು ಯೋಜನೆಯ ಉದ್ದೇಶಿತ ಸ್ಥಳ ನೋಡುವಾಗ ಮೀನುಗಾರರ ಮುಖಂಡ ರಾಜು ತಾಂಡೇಲ ಉಪಸ್ಥಿತರಿದ್ದು, ಯೋಜನೆ ಮೀನುಗಾರರಿಗೆ ಮಾರಕ ಎಂದು ಹೇಳಿದರು. ಮೀನುಗಾರ ಯುವ ಮುಖಂಡರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ವಕೀಲ ಬಿ.ಎಸ್. ಪೈ ಹೈಕೊರ್ಟ್ ಆದೇಶವನ್ನು ಪರಿಸರ ಇಲಾಖೆ ಪಾಲಿಸಿಲ್ಲ. ಈ ಬಗ್ಗೆ ಮತ್ತೆ ಕೋರ್ಟ್ ಮೆಟ್ಟಿಲು ಹತ್ತುವುದಾಗಿ ಹೇಳಿದರು. ಎಲ್ಲವನ್ನು ಪರಿಸರ ಅಧಿಕಾರಿಗಳು ಶಾಂತ ಚಿತ್ತದಿಂದ ಆಲಿಸಿ, ಬಂದರು, ಬೈತಖೋಲ, ಕಾರವಾರ ಬೀಚ್, ನಡುಗಡ್ಡೆಗಳ ಮಾಹಿತಿ ಪಡೆದು ತೆರಳಿದರು. ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಹಡಗು ತಂಗುದಾಣ ಬರ್ತ್ ನಿರ್ಮಾಣಕ್ಕೆ ಇನ್ನು ಟೆಂಡರ್ ಕರೆಯಬೇಕಿದೆ. ಬೈತಖೋಲ ನಿರಾಶ್ರಿತರ ಸಮಸ್ಯೆ ಬೆಟ್ಟದಂತೆ ಬೆಳೆದಿದೆ. ಅಲ್ಲದೇ ಬಂದರು ಕಾರ್ಯಚಟುವಟಿಕೆ ವಿಸ್ತರಣೆಗೆ ಮೊದಲು ಅಲೆ ತಡೆಗೋಡೆ ನಿರ್ಮಾಣ ಕಾರ್ಯ ಬಾಕಿಯಿದೆ. ಅಲೆತಡೆಗೋಡೆ ನಿರ್ಮಾಣದ ನಂತರವೇ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಚಾಲನೆ ಸಿಗಬೇಕಿದೆ.
ರಾಜ್ಯ ಸರ್ಕಾರದ ಜಾಣ ನಡೆ: ಎಲ್ಲಾ ಯೋಜನೆಗಳು ವಿವಾದವಾಗುತ್ತಿರುವ ಕಾರಣ ಕೋರ್ಟ್ ನಿರ್ದೇಶನ ಪಡೆದೇ ಕೆಲಸ ಆರಂಭಿಸಲು ಸರ್ಕಾರ ಕಾರ್ಯತಂತ್ರ ಮಾಡಿದೆ. ಹಾಗಾಗಿ ಜಾಣ ಹೆಜ್ಜೆಗಳಿಗೆ ಸರ್ಕಾರ ಮುಂದಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಾದ ಯೋಜನೆ ಇದಾಗಿದ್ದರೂ, ಈಗ ವಿರೋಧಿ ರಾಜಕೀಯ ಬಿಜೆಪಿ ಮತ್ತು ಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ಹಾಗಾಗಿ ಎಲ್ಲೂ ಕಾನುನು ಉಲ್ಲಂಘನೆಯಾಗದಂತೆ ಹೆಜ್ಜೆ ಇಡಲು ತಿರ್ಮಾನಿಸಿದೆ ಎನ್ನಲಾಗುತ್ತಿದೆ. ಬಂದರು ಅಲೆತಡೆಗೋಡೆ ನಿರ್ಮಾಣದ ವಿಷಯದಲ್ಲಿ ಸ್ಥಳೀಯ ಶಾಸಕರು ಒಂದೆಡೆ ಸರ್ಕಾರದ ನಿಲುವು ಹಾಗೂ ಇನ್ನೊಂದೆಡೆ ಜನ ವಿರೋಧವನ್ನು ಗಮನಿಸಿ ತಟಸ್ಥ ನಿಲುವಿಗೆ ಬಂದು ನಿಂತಿದ್ದಾರೆ. ಯೋಜನೆ ಅನುಷ್ಠಾನ ಮಾಡಿದರೆ, ಮತದಾರರನ್ನು ಕಳೆದುಕೊಳ್ಳಬೇಕಾದ ಸನ್ನಿವೇಶ ಇರುವ ಕಾರಣ, ಬೃಹತ್ ಯೋಜನೆಗಳ ಬಗ್ಗೆ ಮಾತನಾಡುವುದನ್ನು ಶಾಸಕಿ ನಿಲ್ಲಿಸಿದ್ದಾರೆ.