Advertisement

ಬಿಪಿಎಲ್‌ನಲ್ಲಿ ಪಾಪ್‌ಅಪ್‌ ಬೈಸಿಕಲ್‌ ಪಥ?

06:51 AM Jun 29, 2020 | Lakshmi GovindaRaj |

ಬೆಂಗಳೂರು: “ಕೋವಿಡ್‌-19′ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಸುರಕ್ಷಿತ ಸಂಚಾರ ದೃಷ್ಟಿಯಿಂದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ “ಬಸ್‌ ಆದ್ಯತಾ ಪಥ’ (ಬಸ್‌ ಪ್ರಿಯಾರಿಟಿ ಲೇನ್‌-ಬಿಪಿಎಲ್‌)ಗಳನ್ನು ಮರು ವಿನ್ಯಾಸಗೊಳಿಸಲು ಚಿಂತನೆ ನಡೆದಿದ್ದು, ಈ ಮಾರ್ಗಗಳಲ್ಲಿ ಪಾಪ್‌ಅಪ್‌ ಬೈಸಿಕಲ್‌ ಪಥಗಳನ್ನೂ ರೂಪಿಸುವ ಬಗ್ಗೆ ಚರ್ಚೆ ನಡೆದಿದೆ.

Advertisement

ಇದಕ್ಕೆ ಮುನ್ನುಡಿಯಾಗಿ ಮೊದಲ ಬಸ್‌ ಆದ್ಯತಾ ಪಥವಾದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌. ಪುರ ನಡುವೆ ತ್ವರಿತವಾಗಿ ನಿರ್ಮಿಸಬಹುದಾದ “ಪಾಪ್‌ಅಪ್‌ ಬೈಸಿಕಲ್‌ ಲೇನ್‌’ ನಿರ್ಮಿಸುವ ಸಂಬಂಧ ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್)ವು ಸಮೀಕ್ಷೆ ನಡೆಸಿ, ಬಿಬಿಎಂಪಿಗೆ ಈಚೆಗೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಇರುವ ರಸ್ತೆಯಲ್ಲಿ ಒಂದೂವರೆ ಮೀಟರ್‌ ಜಾಗವನ್ನು ಬೈಸಿಕಲ್‌ ಪಥಕ್ಕೆ ಮೀಸಲಿಡಲಾಗುವುದು. ಅಲ್ಲಿ ಬೊಲಾರ್ಡ್‌ಗಳನ್ನು ಅಳವಡಿಸಿ, ಮಾರ್ಗದುದ್ದಕ್ಕೂ ಮಾರ್ಕಿಂಗ್‌ ಮಾಡಿ ಸುರಕ್ಷಿತ ಸಂಚಾರಕ್ಕೆ ದಾರಿ  ಮಾಡಿಕೊಡಲಾಗುವುದು.

ಇಲ್ಲಿ ಯಶಸ್ವಿಯಾದರೆ, ಉಳಿದ 11 ಬಸ್‌ ಆದ್ಯತಾ ಪಥಗಳಲ್ಲಿ ಈ ಬೈಸಿಕಲ್‌ ಲೇನ್‌ ಪರಿಚಯಿಸುವ ಆಲೋಚನೆ ಇದೆ. ಆದರೆ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು ನಿರ್ದೇಶನಾಲಯದ ಮೂಲಗಳು  “ಉದಯವಾಣಿ’ಗೆ ತಿಳಿಸಿವೆ. “ಅನುಷ್ಠಾನಕ್ಕಾಗಿ ಸರ್ಕಾರಿ ಅನುದಾನಕ್ಕಾಗಿ ಕಾಯದೆ, ಲಭ್ಯವಿರುವ ಇತರೆ ನಿಧಿಯಲ್ಲಿ ತುರ್ತಾಗಿ ಮಾಡಿಮುಗಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ಪಾಲಿಕೆಯು ವಿವಿಧ ಯೋಜನೆಗಳಲ್ಲಿ ಇರುವ ಅನುದಾನದ ಹುಡುಕಾಟ ನಡೆಸಿದೆ’ ಎನ್ನಲಾಗಿದೆ.

ಏನು ಅನುಕೂಲ?: ಸಾಮೂಹ ಸಾರಿಗೆಗಳಲ್ಲಿ ಪ್ರಸ್ತುತ ಸಾಮಾಜಿಕ ಅಂತರ ಅನಿವಾರ್ಯವಾಗಿದೆ. ಇನ್ನೂ ಕೆಲವು ತಿಂಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಗಳಿವೆ. ಸದ್ಯಕ್ಕೆ ವರ್ಕ್‌ ಫ್ರಮ್‌ ಹೋಂ ನಲ್ಲಿರುವ ಐಟಿ ಕಾರ್ಮಿಕರು  ಮುಂದೆ ರಸ್ತೆಗಿಳಿದರೆ ಸಂಚಾರ ದಟ್ಟಣೆ ಏರಿಕೆಯಾಗಲಿದೆ. ಜತೆಗೆ ವಾಯುಮಾಲಿನ್ಯವೂ ಹೆಚ್ಚಳವಾಗಿ, ನಿಯಂತ್ರಣ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸಮೂಹ ಸಾರಿಗೆಯಿಂದ ವಿಮುಖವಾಗುವ ಜನರನ್ನು ಬೈಸಿಕಲ್‌ನತ್ತ ಆಕರ್ಷಿಸುವ  ಉದ್ದೇಶ ಇದೆ.

ಹೊರವರ್ತುಲ ರಸ್ತೆ (ಸೆಂಟ್ರಲ್‌ ಸಿಲ್ಕ್ಬೋರ್ಡ್‌- ಕೆ.ಆರ್‌. ಪುರ) ಆಯ್ಕೆ ಮಾಡಲು ಕಾರಣ- ಆ ಮಾರ್ಗದಲ್ಲಿ ರಸ್ತೆ ವಿಸ್ತೀರ್ಣ ಹೆಚ್ಚಿದೆ. ಸರ್ಕಾರದಿಂದ ಅನುಮತಿ ಪಡೆದ ಆ್ಯಪ್‌ ಆಧಾರಿತ ಯ್ಯೂಲು ಮತ್ತಿತರ ಬೈಸಿಕಲ್‌ಗ‌ಳು  ಲಭ್ಯವಿ ದ್ದು, ಬಳಕೆದಾರರ ಸಂಖ್ಯೆಯೂ ಅಧಿಕವಾಗಿದೆ. ಐಟಿ ಉದ್ಯೋಗಿಗಳು ವರ್ಕ್‌ ಫ್ರಂ ಹೋಂನಲ್ಲಿದ್ದು, ತಮ್ಮ ದೇಹದ ತೂಕ ಕರಗಿಸಿಕೊಳ್ಳಲು ಬೈಸಿಕಲ್‌ ತುಳಿಯುವವರ ಸಂಖ್ಯೆಯೂ ಅಧಿಕವಾಗಿದೆ.

Advertisement

ಇದೆಲ್ಲದರಿಂದ ಉದ್ದೇಶಿತ  ಕಾರಿಡಾರನ್ನು ಆಯ್ಕೆ ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಪಾಪ್‌ ಅಪ್‌ಲೈನ್‌ಗಳನ್ನು ಸರ್ವಿಸ್‌ ರಸ್ತೆಗಳ ಮಾದರಿಯಲ್ಲೇ ರೂಪಿಸಲಾಗುವುದು. ರಸ್ತೆಯಿಂದ ಅರ್ಧ ಅಥವಾ ಒಂದಿಂಚು  ಎತ್ತರಿಸಿ, ಸ್ಟೀಲ್‌ ಬೊಲಾರ್ಡ್‌ಗಳ ಅಳವಡಿಕೆ ಸೇರಿದಂತೆ ಶಾಶ್ವತವಾಗಿ ಮೂಲಸೌಕರ್ಯಗಳನ್ನು ನಿರ್ಮಿಸಿ, ಬೈಸಿಕಲ್‌ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಆದರೆ, ಇದಕ್ಕೆ ಸಮಯ ಹಿಡಿಯುತ್ತದೆ. ಹಾಗಾಗಿ, ಬೊಲಾರ್ಡ್‌ಗಳು  ಮತ್ತು ಮಾರ್ಕಿಂಗ್‌ ಮಾತ್ರ ಮಾಡುವ ಮೂಲಕ ತ್ವರಿತ ಗತಿಯಲ್ಲಿ ಪೂರೈಸಲು ಪಾಪ್‌ಅಪ್‌ ಲೇನ್‌ ಪರಿಚಯಿಸಲಾಗುತ್ತಿದೆ.

ತ್ವರಿತ ಅನುಷ್ಠಾನ; ಸಿಎಸ್‌ಆರ್‌ ನೆರವು ಸೂಕ್ತ: ಪಾಪ್‌ಅಪ್‌ ಬೈಸಿಕಲ್‌ ಪಥಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನಕ್ಕೆ ಕಾರ್ಪೊರೇಟ್‌ ಕಂಪನಿಗಳ ನೆರವು ಪಡೆಯುವುದು ಸೂಕ್ತ. ಇದರಿಂದ ತ್ವರಿತವಾಗಿ ಅನುಷ್ಠಾನಗೊಳಿಸಬಹುದು  ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಐಟಿ-ಬಿಟಿ ಸೇರಿದಂತೆ ವಿವಿಧ ಕಾರ್ಪೊರೇಟ್‌ ಕಂಪನಿಗಳು ಹೆಚ್ಚಿರುವ ಮಾರ್ಗಗಳಲ್ಲಿ ಈ ಪಥಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಇದಕ್ಕೆ ಪೂರಕವಾಗಿ  ಬಳಕೆದಾರರು ಸಹಜವಾಗಿ ಆ ಕಂಪನಿಯ ಉದ್ಯೋಗಿಗಳು ಆಗಲಿದ್ದಾರೆ. ಇದನ್ನು ಮನದಟ್ಟು ಮಾಡಿ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆ ಅಡಿ ಕಂಪನಿಗಳ ಸಹಯೋಗದಲ್ಲಿ ಈ ಪಥಗಳ  ನಿರ್ಮಿಸಲು  ಮುಂದಾಗಬೇಕು. ಆ ಪಥಗಳಲ್ಲೇ ಕಂಪನಿಗಳ ಜಾಹೀರಾತು ನೀಡಲು ಅವಕಾಶ ಕಲ್ಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ಪಥಗಳು ನನೆಗುದಿಗೆ: ಎಂ.ಜಿ. ರಸ್ತೆ ಹಾಗೂ ಅದಕ್ಕೆ ಪರ್ಯಾಯ ರಸ್ತೆ, ಜಯನಗರ ಒಳಗೊಂಡಂತೆ ನಗರದ ವಿವಿಧೆಡೆ ಈಗಾಗಲೇ ಬೈಸಿಕಲ್‌ ಪಥಗಳನ್ನು ನಿರ್ಮಿಸಲಾ ಗಿದೆ. ಜತೆಗೆ ಸುಮಾರು 35 ಕಿ.ಮೀ. ಪಥ ಹಾಗೂ 270  ನಿಲುಗಡೆ ತಾಣಗಳ ನಿರ್ಮಾಣಕ್ಕೆ ಪಾಲಿಕೆ ಟೆಂಡರ್‌ ಕರೆದಿತ್ತು. ಆದರೆ, ಬೆನ್ನಲ್ಲೇ ಅವುಗಳ ನನೆಗುದಿಗೆ ಬಿದ್ದಿವೆ. ಈಗ ಪಾಪ್‌ಅಪ್‌ ಬೈಸಿಕಲ್‌ ಪಥ ಮುನ್ನೆಲೆಗೆ ಬಂದಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next