Advertisement

Population; ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಿರಿ: ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

08:03 PM Mar 22, 2024 | Team Udayavani |

ಸಾಗರ: ನಮ್ಮನ್ನು ಯಾರು ಬೇಕಾದರೂ ಟೀಕಿಸಿದರೂ ಪರವಾಗಿಲ್ಲ. ನಾವು ಹೇಳುವುದು ಸಂತತಿ ಎಂಬುದು ಸಂಪತ್ತು. ಮಕ್ಕಳು ಭಾಗ್ಯ ಎಂಬುದು ಹೋಗಿ ಭಾರ ಎಂದಾಗಿದೆ. ನಾವು ಹೇಳುತ್ತಿದ್ದೇವೆ, ಭಾರ ಎಂತಾದರೆ ಹೆತ್ತು ಮಠಕ್ಕೆ ಕೊಡಿ. ನಾವು ತಾಯಿಯಂತೆ ಸಾಕಿ ಸಮಾಜಕ್ಕೆ ಒದಗಿಸುತ್ತೇವೆ. ಈ ಮನಸ್ಥಿತಿ ಬದಲಾಗದಿದ್ದರೆ ಕ್ಷೀಣಿಸುತ್ತಿರುವ ಯುವ ಜನಾಂಗದ ಸಮಸ್ಯೆಗೆ ಉತ್ತರವಿಲ್ಲ ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಮಂಕಳಲೆಯ ಶಂಭು ಲಿಂಗೇಶ್ವರ, ಮಹಾಕಾಳಿ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಪುನರ್ನವ ವೇದಿಕೆಯಲ್ಲಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಂಸ್ಕೃತಿಯ ಮೂಲಬೇರು ಉಳಿಯಬೇಕಿದ್ದರೆ ಮನೆಯಲ್ಲಿ ಸಂತತಿ ಸಮೃದ್ಧಿಯೂ ಇರಬೇಕು. ನಾವು ಕುರುಡಾಗಿ ಕುಟುಂಬ ಯೋಜನೆಯ ಮೊರೆ ಹೋಗಿದ್ದೇವೆ. ಈ ಮೂಲಕ ಪ್ರಕೃತಿಗೆ, ಪರಂಪರೆಗೆ ವಿರುದ್ಧವಾಗಿ ಹೋಗುತ್ತಿದ್ದೇವೆ. ಅದರಲ್ಲೂ ಒಳ್ಳೆಯ ಕುಟುಂಬಗಳಲ್ಲಿಯೇ ಸಂತತಿ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಮಾದರಿ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಹೆಸರು ಮಾಡಿ ಪತನಗೊಂಡ ಅದೆಷ್ಟೋ ಸಾಮ್ರಾಜ್ಯಗಳು ಮತ್ತೆ ಎದ್ದು ಬಂದ ದಾಖಲೆಯೇ ಇಲ್ಲ. ಹೋಗಿದ್ದು ಹೋಗಿದ್ದೇ. ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಆಂಗ್ಲರು ಮರೆಯಾದರು. ಮೊಘಲರು ಅಳಿದರು, ಇವ್ಯಾವುದೂ ಮತ್ತೆ ಚಿಗುರಿಲ್ಲ. ಪತನವಾಗಿರುವುದು ಪ್ರಶ್ನೆ ಅಲ್ಲ. ಆದರೆ ಮತ್ತೆ ಮತ್ತೆ ಎದ್ದು ನಿಲ್ಲಲು ಅಂತಃಶಕ್ತಿ ಬೇಕು. ಅಂತಹದನ್ನು ನಮ್ಮ ಸನಾತನ ಧರ್ಮದ ಆಧಾರವಾದ ದೇವಾಲಯಗಳು ತೋರಿವೆ. ಮಂಕಳಲೆಯ ಶಂಭುಲಿಂಗೇಶ್ವರ ಮಹಾಕಾಶಿ ದೇವಾಲಯಗಳ ಪುನರ್ನವ ಅದನ್ನು ಜಗತ್ತಿಗೆ ಸಾರಿ ಹೇಳಿದೆ ಎಂದರು.

ದೇವರಿಗೆ ಕೊಡುವುದು ಒಂದು ಯೋಗ, ಅವಕಾಶ. ದೇವಸ್ಥಾನದ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು. ಸಣ್ಣಬುದ್ಧಿ, ಕೆಟ್ಟ ಮನಸ್ಸು ಮಾಡಬಾರದು. ನಿರ್ವಂಚನೆಯಿಂದ, ಸರ್ವರಿಗೂ ಒಳಿತಾಗಲಿ ಎನ್ನುವ ಮನೋಭಾವದಿಂದ ಕೈ ಎತ್ತಿ ಕೊಡಬೇಕು ಎಂದು ಹೇಳಿದರು.

ದೇವಸ್ಥಾನದ ಮಹಾದಾನಿ ದೇವಕಮ್ಮ, ನಾಗೇಂದ್ರ ಭಟ್ ಇಕ್ಕೇರಿ, ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್, ವಿದ್ವಾನ್ ವಿಷ್ಣುಪ್ರಸಾದ್ ಪುಚ್ಚುಕಾಡು, ಚಿಪ್ಳಿ ಸುಬ್ರಹ್ಮಣ್ಯ, ಗಣಪತಿ ಮತ್ತಿಕೊಪ್ಪ, ಮೊದಲಾದವರು ಹಾಜರಿದ್ದರು. ಎಚ್.ಕೆ. ಗಣಪತಿ ಹುಲಿಮನೆ ಸ್ವಾಗತಿಸಿದರು. ಸಮರ್ಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಸಮಿತಿ ಅಧ್ಯಕ್ಷ ಗಣಪತಿ ವರದಾಮೂಲ ವಂದಿಸಿದರು. ಹು. ಭಾ.ಅಶೋಕ, ಮಂಜಪ್ಪ ನಿರೂಪಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ದೇವರ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ‍್ಯಕ್ರಮಗಳು ಸಂಪನ್ನಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next