ಮಡಿಕೇರಿ: ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವಂತಾಗಲು ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ನ್ಪೋಟ ತಡೆಯುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸಾ ಅವರು ಹೇಳಿದ್ದಾರೆ.
ಕಾವೇರಿ ಕಲಾ ಕೇತ್ರದಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಸಿ.ದಯಾನಂದ ಅವರು ಮಾತನಾಡಿ ಮಾನವ ಸಂಪನ್ಮೂಲ ಒಂದು ರೀತಿ ವರವಾಗಿದೆ. ಆದರೆ ಭಾರತ ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಜನಸಂಖ್ಯೆ ವರವಾಗಿಲ್ಲ ಬದವಾಗಿ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆನಂದ್ ಅವರು ಮಾತನಾಡಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು 1989 ಜುಲೈ 11 ರಂದು ವಿಶ್ವದ ಜನಸಂಖ್ಯೆ 500 ಕೋಟಿ ತಲುಪಿದ ಕಾರಣ ಜನಸಂಖ್ಯಾ ನ್ಪೋಟದಿಂದ ಅಗುವ ಆರ್ಥಿಕ, ಸಾಮಾಜಿಕ ದುಷ್ಪರಿಣಾಮಗಳ ಕುರಿತಾಗಿ ಯುವಜನರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಜುಲೈ 11 ರಂದು ಜನಸಂಖ್ಯೆ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಸಂಬಂಧಿಸಿದಂತೆ ಕುಟುಂಬ ಕಲ್ಯಾಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಾರಾದ ಡಾ.ಸಿ.ಕಾರ್ಯಪ್ಪ ಅವರು ವಸ್ತು ಪ್ರದರ್ಶನ ಉದ್ಘಾಟಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎಂ.ಶಿವಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಸ್. ಗೋಪಿನಾಥ್, ಸ್ತ್ರೀ ರೋಗ ತಜ್ಞರಾದ ಡಾ. ರಾಜೇಶ್ವರಿ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಎ.ಸಿ.ಶಿವಕುಮಾರ್ ಸ್ವಾಗತಿಸಿದರು, ಸುಮಿತ್ರಾ ಪ್ರಾರ್ಥಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರಮೇಶ್ ಅವರು ನಿರೂಪಿಸಿ, ವಂದಿಸಿದರು.